ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಕ್ರಮ ಪ್ರಶಸ್ತಿ ಪ್ರದಾನ
ಎಲ್ಲ ಸಾಧಕರಿಗೂ ಮೂಲ ಶಕ್ತಿಯೇ ಭಗವಂತನಾದ ಶ್ರೀಕೃಷ್ಣ. ಯಾವುದೇ ದೊಡ್ಡ ಸಾಧಕರಿದ್ದರೂ ಅವರೆಲ್ಲರೂ ದೇವರ ಅನುಗ್ರಹದಿಂದ ಮಾತ್ರ ಸಾಧಕರಾಗಿದ್ದಾರೆ. ದೇವರ ಅನುಗ್ರಹವಿಲ್ಲದೆ ಏನೂ ಸಾಧಿಸಲಾಗದು. ದೇವರು ಎಲ್ಲರಿಗೂ ಅವಕಾಶ ಕೊಟ್ಟರೂ ಸಾಧಿಸಲಾಗುವುದಿಲ್ಲ. ಅವಕಾಶವನ್ನು ಯಾರು ಸರಿಯಾಗಿ ಅರ್ಥೈಸಿಕೊಂಡು ಬಳಸಿಕೊಳ್ಳುತ್ತಾರೋ ಅವರು ಸಾಧಕರಾಗುತ್ತಾರೆ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಬೆಂಗಳೂರಿನ ಸನಾತನ ಫೌಂಡೇಷನ್ ವತಿಯಿಂದ ಸ್ಪೇಸ್ ಮೀಡಿಯಾ ಸಂಸ್ಥೆ ಸಹಕಾರದಲ್ಲಿ ಏ.24ರಂದು ಬೆಳಗ್ಗೆ ಆಯೋಜಿಸಿದ್ದ ವಿಕ್ರಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮೂಲ ಮರೆಯಬೇಡಿ
ಮೊಸರು ಕುಡಿಕೆ ಒಡೆಯುವ ಸ್ಪರ್ಧೆಗೆ ಸಾಧನೆಯನ್ನು ಹೋಲಿಸಬಹುದು. ಕುಡಿಕೆ ಒಡೆಯಲು ಅನೇಕ ಅವಕಾಶ ನೀಡುತ್ತಾರೆ. ಎಲ್ಲರೂ ವಿಫಲರಾಗುತ್ತಾರೆ. ಆದರೆ, ಒಬ್ಬ ಮಾತ್ರ ಅದನ್ನು ಒಡೆದು ಸಾಧನೆ ಮಾಡುತ್ತಾನೆ. ಹೀಗಾಗಿ ಯಾರೂ ಸಹ ಯೋಜಿಸಿ ಸಾಧನೆ ಮಾಡಲಾಗುವುದಿಲ್ಲ. ದೇವರು ಕೊಟ್ಟ ಅವಕಾಶ ಸರಿಯಾಗಿ ಬಳಸಿಕೊಳ್ಳುವುದೇ ಸಾಧನೆಯ ಮೂಲ ಗುಟ್ಟು. ಸಾಧಕರು ಯಾವಾಗಲೂ ಸಹ ತಮ್ಮ ಮೂಲ ಮರೆಯಬಾರದು. ತಂದೆ-ತಾಯಿ, ಗುರುಗಳು ಹಾಗೂ ದೇವರ ಅನುಗ್ರಹ ಪಡೆದಷ್ಟು ಹೆಚ್ಚು ಸಾಧನೆ ಮಾಡಬಹುದು ಎಂದರು.
ಬೆಂಗಳೂರಿನ ಎಂ. ವೆಂಕಟೇಶ ಶೇಷಾದ್ರಿ ರಚಿಸಿರುವ ಆಧ್ಯಾತ್ಮಿಕ ವಿಷಯದ 366 ರಸಪ್ರಶ್ನೆ ಒಳಗೊಂಡ ಅಧ್ಯಾತ್ಮ ಜ್ಞಾನಸಿರಿ ಪುಸ್ತಕ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಪ್ರಗತಿಪರ ರೈತ ಸುಬ್ಬಣ್ಣ, ರಾಜೇಶ ಪೈ, ಮೇನಾ ರಾಜ್, ಕೊಳ್ಳೇಗಾಲ ವಿ.ರಾಘವೇಂದ್ರ, ಚೆಲ್ವಕುಮಾರ, ರಮೇಶ ಭಟ್, ಪ್ರಸನ್ನ ಆಚಾರ್ಯ, ರತೀಶ ತಂತ್ರಿ, ನಾಗರಾಜ ಆಚಾರ್ಯ ಉಪಸ್ಥಿತರಿದ್ದರು.
ನಂದನಾ ಎ. ಪ್ರಾರ್ಥಿಸಿದರು. ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಪರಿಚಯಿಸಿದರು. ಜ್ಞಾನೇಶ್ವರ ಜವಳಿ ಸ್ವಾಗತಿಸಿದರು. ವಿ.ಧನಂಜಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸೃಷ್ಟಿ ಕಲಾ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಹದಿನೇಳು ಸಾಧಕರಿಗೆ ಪುರಸ್ಕಾರ
ಅದಾನಿ ಗ್ರೂಪ್ನ ಅಧ್ಯಕ್ಷ ಕಿಶೋರ ಆಳ್ವ, ಮಂತ್ರಾಲಯದ ಪರಿಮಳ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಎಚ್.ಎಸ್. ರಾವೇಂದ್ರ ರಾವ್, ಆರ್. ಸಂಪತ್ ರಾಜ್, ಅರ್ಚನಾ ಆರ್. ಪೈ, ಮೆಹಬೂಬಿ, ಎಚ್.ರಾಜು ಗೌಡ, ಸಮಾಜ ಸೇವಕ ಮುರಳೀಧರ, ಗಣೇಶ ಮೊಗವೀರ, ಸಂದೀಪ ರೆಡ್ಡಿ, ವಾಸುದೇವ ರಾಯ್ಕರ್, ಭೀಮೇಶ ರೆಡ್ಡಿ ಕೆ., ಸುಗ್ಗಿ ಸುಧಾಕರ ಶೆಟ್ಟಿ, ಅಶೋಕ ಸಂಗಪ್ಪ ಆಲೂರು, ಕೊತ್ವಾಲ್ ಪ್ಮನಾಭ ಶೇರಿಗಾರ, ಮಂಜುನಾಥ ಜಿ., ಡಾ. ಎಂ.ನವೀನಕುಮಾರ್, ಮಹೇಶ ಗೌಡ ಮಂಡ್ಯ.
ಸಾಧನೆ ಮಾಡುವುದು ಸುಲಭವಲ್ಲ. ಎಲ್ಲರಿಂದಲೂ ಸಾಧನೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಯೋಗ್ಯತೆ ಬೇಕು. ಅನೇಕರಿಗೆ ಯೋಗ್ಯತೆ ಇರುತ್ತದೆ. ಆದರೆ, ಪ್ರಯತ್ನವನ್ನೇ ಮಾಡುವುದಿಲ್ಲ. ಯೋಗ್ಯತೆಯೊಂದಿಗೆ ಪ್ರಯತ್ನಶೀಲತೆಯೂ ಬೇಕು. ಇವೆರಡರಿಂದ ಸಾಧನೆ ಮಾಡಲಾಗದು. ಅದಕ್ಕೆ ಮುಖ್ಯವಾಗಿ ಭಗವಂತನ ಅನುಗ್ರಹ ಬೇಕಾಗುತ್ತದೆ.
| ವಿದ್ಯಾಶ್ರೀಶ ತೀರ್ಥ ಶ್ರೀಪಾದರು. ಸೋಸಲೆ ವ್ಯಾಸರಾಜ ಮಠ