ಉಡುಪಿ: ಭಾರತದಾದ್ಯಂತ ಜನವರಿ 26 ರವರೆಗೆ ನಡೆಯುವ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಉಡುಪಿಯಲ್ಲಿ ನ. 30 ರಂದು ಅಂಬಲಪಾಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಳಗ್ಗೆ 10ಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೇರಪ್ರಸಾರದ ಮೂಲಕ ಸಮಾರಂಭವನ್ನುದ್ದೇಶಿಸಿ ಮಾತನಾಡಲಿದ್ದಾರೆ.
75 ದಿನಗಳಲ್ಲಿ ದಿನಕ್ಕೆ 2 ಗ್ರಾಮ ಪಂಚಾಯಿತಿನಂತೆ ಜಿಲ್ಲೆಯ 155 ಗ್ರಾಮ ಪಂಚಾಯಿತಿಗಳನ್ನು ಯಾತ್ರೆ ತಲುಪಲಿದ್ದು, ಕೇಂದ್ರ ಸರ್ಕಾರದ 70ಕ್ಕೂ ಹೆಚ್ಚು ಯೋಜನೆಗಳ ಪೈಕಿ ಆಯುಷ್ಮಾನ್ ಭಾರತ್, ಪಿಎಂ ಉಜ್ವಲ ಯೋಜನೆ, ಪಿಎಂ ಕಿಸಾನ್ ಸಮ್ಮಾನ್, ಜನಧನ್ ಯೋಜನಾ, ಸುರಕ್ಷಾ ಬಿಮಾ ಯೋಜನೆಗಳು ಸೇರಿದಂತೆ 17 ಯೋಜನೆಗಳ ಬಗ್ಗೆ ಎಲ್ ಇ ಡಿ ಪರದೆಯ ಮೂಲಕ ಮಾಹಿತಿ ನೀಡಲಾಗುತ್ತದೆ. ಈವರೆಗೆ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವುದು ಯಾತ್ರೆಯ ಉದ್ದೇಶವಾಗಿದೆ. ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿ, ಸ್ಥಳದಲ್ಲೇ ಆಯ್ದ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ನೀಡಲಿದ್ದಾರೆ.