ವಿಜಯವಾಣಿ ಸುದ್ದಿಜಾಲ ಬೈಂದೂರು
ಜಾನಪದ ಬಾಯಿಂದ ಬಾಯಿಗೆ ಪಸರಿಸುವ ಮೂಲಕ ಸದಾ ನಮ್ಮೊಂದಿಗಿರುತ್ತದೆ. ಜಾನಪದ ಸಂಪತ್ತು, ಸಂಸ್ಕೃತಿ, ಪರಂಪರೆ ತಿಳಿಯಪಡಿಸಲು ರಾಜ್ಯಾದ್ಯಂತ ವಿಕಸಿತ ಜಾನಪದ ಅಭಿಯಾನ ಆರಂಭಿಸಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.
ಉಪ್ಪುಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮವಾರ ಉಪ್ಪುಂದ ಕಜಾಪ ಘಟಕ ಪದಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಜ ಮಹಿಳೆಯರಿಂದ ಸಂದರ್ಭೋಚಿತವಾಗಿ ಗದ್ಯ, ಪದ್ಯಗಳ ಮೂಲಕ ಆರಂಭಗೊಂಡ ಮೌಕಿಕ ಪರಂಪರೆಯಾಗಿ ಬೆಳೆದು ಬಂದ ಜಾನಪದಕ್ಕೆ ಯಾವುದೇ ಚೌಕಟ್ಟಿಲ್ಲ. ಜನಪದ ನಶಿಸಿ ಹೋದರೆ ಇತಿಹಾಸ ಬರಡಾದಂತೆ ಎಂದರು.
ಉಪ್ಪುಂದ ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಅಧ್ಯಕ್ಷತೆ ವಹಿಸಿದರು. ಘಟಕ ನೂತನ ಅಧ್ಯಕ್ಷ ಗಣೇಶ ದೇವಾಡಿಗ, ಕಾರ್ಯದರ್ಶಿ ಶಂಕರ ಉಪ್ಪುಂದ, ಖಜಾಂಚಿ ಅಶೋಕ ಎಸ್.ಜೈನ್, ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಪದಪ್ರದಾನ ನೆರೆವೇರಿಸಲಾಯಿತು. ಪ್ರಾಂಶುಪಾಲ ರವಿ ನಾಯ್ಕ ಇದ್ದರು. ಕಜಾಪ ಜಿಲ್ಲಾಧ್ಯಕ್ಷ ಡಾ.ಗಣೇಶ ಗಂಗೊಳ್ಳಿ ನಿರೂಪಿಸಿದರು.
ಜಾನಪದಕ್ಕೆ ಜಾತಿ, ಧರ್ಮವಿಲ್ಲ. ಇದೊಂದು ಅಲೌಕಿಕ ಸಂವಿಧಾನ. ಕೃಷಿ ಸಂಸ್ಕೃತಿಯಿಂದ ಹುಟ್ಟಿದ ಜಾನಪದದ ಪರಂಪರೆ, ಆಚರಣೆ, ನಂಬಿಕೆ ಎಲ್ಲದರ ಆಯಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು. ಈ ನಿಟ್ಟಿನಲ್ಲಿ ವಿಶ್ವಾದ್ಯಂತ ಜಾನಪದದ ತೇರು ಎಳೆಯಲು ಎಲ್ಲರೂ ಕೈಜೋಡಿಸೋಣ. -ಡಾ.ಎಸ್.ಬಾಲಾಜಿ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ-ಡಾ.ಎಸ್.ಬಾಲಾಜಿ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ