ಕಡೂರು: ಸಖರಾಯಪಟ್ಟಣದ ಗ್ರಾಮ ದೇವತೆ ಶ್ರೀ ಅಂತರಘಟ್ಟಮ್ಮ ದೇವಿ ರಥೋತ್ಸವ ಸಾವಿರರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮಂಗಳವಾರ ಬಾನ ಸೇವೆ ಆಚರಣೆಯೊಂದಿಗೆ ಆರಂಭವಾದ ಜಾತ್ರಾ ಉತ್ಸವವು ಬುಧವಾರ ಧಾರ್ಮಿಕ ಕಾರ್ಯಕ್ರಮ, ಗುರುವಾರ ಉತ್ಸವಾದಿಗಳು, ಶುಕ್ರವಾರ ತೇರ ಹಬ್ಬದೊಂದಿಗೆ ಚೋಮ ದೇವರ ಉತ್ಸವ ನಡೆಯಿತು. ಶನಿವಾರ ಬೆಳಗ್ಗೆ ಗ್ರಾಮ ದೇವತೆಗಳಾದ ಅಂತರಘಟ್ಟಮ್ಮ, ಕೊಲ್ಲಾಪುರದಮ್ಮ, ಎಲ್ಲಮ್ಮದೇವಿ ಮತ್ತು ಮಲ್ಲೇಶ್ವರದಮ್ಮನವರ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಮಧಾಹ್ನ ಪಾನಕದ ಬಂಡಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯದ ಆವರಣಕ್ಕೆ ಬಂದ ನಂತರ ಚೋಮ ದೇವರುಗಳು ರಥದ ಸುತ್ತ ಪ್ರದಕ್ಷಿಣೆ ಹಾಕಿದವು. ದೇವಾಲಯ ಸಮಿತಿ ಅಧ್ಯಕ್ಷ ದೇವರಾಜು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು. ರಥವನ್ನು ಸಂಪ್ರದಾಯದಂತೆ ಸಿಡಿ ಕಂಬದವರೆಗೆ ಎಳೆದು ಮತ್ತೆ ದೇವಲಯದ ಆವರಣಕ್ಕೆ ಎಳೆಯಲಾಯಿತು. ರಥದಲ್ಲಿ ಪ್ರತಿಷ್ಠಾಪಿಸಿದ ದೇವತೆಗಳ ಮೂರ್ತಿಗಳನ್ನು ದೇವಲಯಕ್ಕೆ ಕರೆತರಲಾಯಿತು. ಬಳಿಕ ಸಿಡಿಉತ್ಸವ ನಡೆಸಲಾಯಿತು.
ಗ್ರಾಪಂನಿಂದ ಭಕ್ತರಿಗೆ ಪಾನಕ ಮತ್ತು ಮಜ್ಜಿಗೆ, ಶ್ರೀ ದುರ್ಗಾ ಸೇವಾ ಸಮಿತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಾನುವಾರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಗ್ರಾಪಂ ಅಧ್ಯಕ್ಷೆ ರಾಜಮ್ಮ, ದೇವಾಲಯ ಸಮಿತಿ ಸದಸ್ಯ ರತ್ನಾಕರ, ಲೋಕೇಶ್‌ಮಾಸ್ಟರ್, ಶಿವಮೂರ್ತಿ, ಸಾರಾ ಸತೀಶ್, ರಾಮಣ್ಣ, ವೆಂಕಟೇಶ್, ಶಿವರಾಮಣ್ಣ ಹಾಗೂ ಸಮಿತಿ ಸದಸ್ಯರು ಇದ್ದರು.