ಬೀರೂರು: ಬೀರೂರು ಸಮೀಪದ ಇತಿಹಾಸ ಪ್ರಸಿದ್ಧ ಹೊಗರೆಖಾನ್ ಗಿರಿ ಶ್ರೀ ಸಿದ್ದೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಏ.19ರಿಂದ ಪ್ರತಿನಿತ್ಯ ಧ್ವಜಾರೋಹಣ, ಮಠದ ಮೂಲಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ಮದುವಣಿಗೆ ಶಾಸ, ನಂದಿವಾಹನೋತ್ಸವ, ಪಂಚಾಭಿಷೇಕ, ನವಿಲು ಉತ್ಸವ, ಗಜವಾಹನ, ಸಿಂಹವಾಹನ, ಕುದುರೆ ವಾಹನೋತ್ಸವ, ಕಲ್ಯಾಣೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ಸೇರಿದಂತೆ ಮೊದಲಾದ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.
ಪ್ರತಿದಿನ ಮೂಲಮೂರ್ತಿಗೆ ರುದ್ರಾಭಿಷೇಕ, 108 ಅಷ್ಟೋತ್ತರ, ಕುದುರೆ ವಾಹನೋತ್ಸವ, ರಾತ್ರಿ ಕಲ್ಯಾಣೋತ್ಸವ, ಗಜ ವಾಹನೋತ್ಸವ, ಪಲ್ಲಕ್ಕಿ ಉತ್ಸವ, ಪುಷ್ಪಾಲಂಕಾರ, ಕಳಸ ಸ್ಥಾಪನಾ ಪೂಜೆ, 101 ಎಡೆ ಸೇವೆ, ಬಲಿ ಹಾಕುವುದನ್ನು ನಡೆಸಲಾಯಿತು. ಸ್ವಾಮಿಯ ಬಾವುಟವನ್ನು ಹೂವಿನಹಳ್ಳಿ ಗ್ರಾಮದ ಸುರೇಶ್ ಎಂಬುವವರು 1.50 ಲಕ್ಷ ರೂ.ಗಳಿಗೆ ಹರಾಜು ಕೂಗಿ ಮೊದಲ ಪೂಜೆಗೆ ಭಾಜನರಾದರು.
ತಳಿರು ತೋರಣಗಳು ಹಾಗೂ ಪುಷ್ಪಗಳಿಂದ ಅಲಂಕರಿಸಿದ್ದ ರಥದಲ್ಲಿ ಶ್ರೀ ಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಹೊಗರೇಹಳ್ಳಿಯ ಗ್ರಾಮ ದೇವರಾದ ಭೂತಪ್ಪ, ಅಂತರಘಟ್ಟಮ್ಮ ಹಾಗೂ ಉಡುಸಲಮ್ಮನವರ ಪ್ರದಕ್ಷಿಣಿ ನಡೆಯಿತು. ವೇದಮಂತ್ರ ಪಠಣಗಳು, ಭಕ್ತರ ಜಯಘೋಷಣೆಗಳೊಂದಿಗೆ ರಥ ಎಳೆಯಲಾಯಿತು. ಭಕ್ತರು ಬಾಳೆಹಣ್ಣು ಮತ್ತು ನಿಂಬೆಹಣ್ಣುಗಳನ್ನು ರಥದ ಕಳಸಕ್ಕೆ ಎಸೆದು ಪ್ರಾರ್ಥಿಸಿದರು. ಭಕ್ತರು ರಾಶಿಗಟ್ಟಲೆ ಮುದ್ದೆಗಳನ್ನು ಮಾಡಿ ದೇವರಿಗೆ ನೈವೇಧ್ಯ ಮಾಡಿ ಭಕ್ತಾದಿಗಳಿಗೆ ವಿತರಿಸಿದರು. 24 ರಂದು ಪಾದಪೂಜೆ, ಅಡ್ಡಪಲ್ಲಕ್ಕಿ ಉತ್ಸವ, ಬಾಗಿಲು ತಡೆಯುವ ಕಾರ್ಯ, ಓಕಳಿ, ಕಂಕಣ ವಿಸರ್ಜನೆ, 25ಕ್ಕೆ ಉಯ್ಯಲೆ ಉತ್ಸವ, ರಾತ್ರಿ ಸಿಂಹ ವಾಹನೋತ್ಸವದೊಂದಿಗೆ ಸಿದ್ದೇಶ್ವರಸ್ವಾಮಿ ರಥೋತ್ಸವ ಸಂಪನ್ನಗೊಳ್ಳಲಿದೆ.