ವಿಜಯವಾಣಿ ಸುದ್ದಿಜಾಲ ವಿಜಯಪುರ
ಪ್ಲಾಸ್ಟಿಕ್‌ಮುಕ್ತ ಪರಿಸರವನ್ನಾಗಿಸಲು ಎಲ್ಲರೂ ಪಣ ತೊಡಬೇಕು. ಸ್ವಚ್ಛತೆ ಒಂದು ಯೋಜನೆಯಾಗದೆ ನಿತ್ಯದ ಬದುಕಿನಲ್ಲಿ ಅಭ್ಯಾಸಬೇಕು ಎಂದು ಪುರಸಭೆ ಅಧ್ಯಕ್ಷೆ ವಿಮಲ ಬಸವರಾಜ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಪುರಸಭೆ, ಜಿಲ್ಲಾಡಳಿತ, ಪರಿವರ್ತನ ಟ್ರಸ್ಟ್, ಪ್ರಗತಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಪ್ಲಾಸ್ಟಿಕ್‌ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸ್ವಚ್ಛತೆ ಮೂಲಕ ನೈರ್ಮಲ್ಯ ವಾತಾವರಣ ನಿರ್ಮಾಣವಾಗಬೇಕಿದೆ. ಎಲ್ಲಿ ನೋಡಿದರೂ ತ್ಯಾಜ್ಯ ಸಮಸ್ಯೆಯದ್ದೇ ಸವಾಲಾಗಿದೆ. ಸ್ವಚ್ಛತೆ ಕುರಿತು ಪ್ರತಿಯೊಬ್ಬರೂ ಗಮನಹರಿಸಿದಲ್ಲಿ ಸಮಸ್ಯೆಯಿಂದ ಮುಕ್ತಿ ಕಾಣಬಹುದು. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳ ಜೀವಕ್ಕೂ ಹಾನಿಯುಂಟು ಉಂಟುಮಾಡುತ್ತದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಮೋಹನ್‌ಕುಮಾರ್ ಮಾತಮಾಡಿ, ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಮುಖ್ಯ. ಆ ಮೂಲಕ ಸ್ವಚ್ಛ ಭಾರತ ನಿರ್ಮಾಣ ಮಾಡಬೇಕು. ಶಾಲಾ ವಿದ್ಯಾರ್ಥಿಗಳು ಪಟ್ಟಣದ ರಸ್ತೆಗಳಲ್ಲಿ ಪ್ಲಾಸ್ಟಿಕ್‌ಮುಕ್ತ ವಲಯಕ್ಕೆ ಸಹಕರಿಸಿ, ಸ್ವಚ್ಛ ಭಾರತ ಕನಸಿಗೆ ಎಲ್ಲರೂ ಮುಂದಾಗಿ, ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲಾಗಿ ಬಟ್ಟೆಯ ಬ್ಯಾಗ್‌ಗಳನ್ನು ಬಳಸುವಂತೆ ಸಲಹೆ ನೀಡಿದರು.
ಪುರಸಭೆ ಸದಸ್ಯರಾದ ರಾಮು, ಶ್ರೀರಾಮಪ್ಪ, ನಾರಾಯಣಸ್ವಾಮಿ, ಪುರಸಭೆ ಸಿಬ್ಬಂದಿ ತ್ಯಾಗರಾಜ್, ಚಂದ್ರು, ಶೇಖರ್, ಉದಯಕುಮಾರ್ ಇದ್ದರು.