ವಿಜಯಪುರ: ದಲಿತ ಸಮುದಾಯದ ವ್ಯಕ್ತಿಯ ಮೇಲೆ ಅಮಾನುಷವಾಗಿ ದೌರ್ಜನ್ಯ ಎಸಗಿದ್ದಲ್ಲದೇ ಮಾರಣಾಂತಿಕ ಹಲ್ಲೆ ನಡೆಸಿದ ಅಪರಾಧಿಗಳನ್ನು ಕೂಡಲೇ ಬಂಧಿಸಲು ಆಗ್ರಹಿಸಿ ಕರ್ನಾಟಕ ರಿಪಬ್ಲಿಕ್ ಸೇನೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯಾಧ್ಯಕ್ಷ ಡಾ. ಜಿಗಡಿ ಶಂಕರ ಹಾಗೂ ಉಪಾಧ್ಯಕ್ಷ ಸಂತೋಷ ಕಾಂಬಳೆ ಮಾತನಾಡಿ, ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಜು. 14ರಂದು ದಲಿತರ ಮೇಲೆ ಹಲ್ಲೆ ನಡೆದಿದೆ. ಗ್ರಾಮದ ಉದಯಕುಮಾರ ಶರಣಪ್ಪ ಹೊಸಮನಿ ಹಾಗೂ ಹಣಮಂತ ದಶವಂತ ಗುನ್ನಾಪುರ ಇವರ ಮೇಲೆ ಯಲ್ಲಪ್ಪ ಗಂಗಾರಾಮ ಕ್ಷತ್ರಿ ಹಾಗೂ ನಿಂಗಪ್ಪ ಮಲ್ಲೇಶ ಸಿಂದಗಿ ಈ ಇಬ್ಬರು ಸವರ್ಣೀಯರು ಕೂಡಿಕೊಂಡು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಹೀಗಾಗಿ ಕೂಡಲೇ ಕೃತ್ಯ ಎಸಗಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹಲ್ಲೆಗೊಳಗಾದ ಹಣಮಂತ ಎಂಬುವ ವ್ಯಕ್ತಿ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ಮಾಡುತ್ತಿದ್ದು, ಈವರೆಗೂ ಕೋಮಾದಿಂದ ಹೊರಬಂದಿಲ್ಲ. ಈ ವಿಷಯ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐಗೆ ಸಂಪೂರ್ಣ ಮಾಹಿತಿ ಇದ್ದರೂ ಕೃತ್ಯ ಎಸಗಿದವರನ್ನು ಬಂಧಿಸಿಲ್ಲ ಎಂದು ಆಪಾದಿಸಿದರು.
ಇತ್ತ ಆಸ್ಪತ್ರೆಯ ಖರ್ಚು ನಿಭಾಯಿಸಲಾಗದೆ ಹಣಮಂತನ ಕುಟುಂಬಸ್ಥರು ಕಣ್ಣೀರಾಗಿದ್ದಾರೆ. ಈವರೆಗೆ ಏಳು ಲಕ್ಷ ರೂಪಾಯಿ ಖರ್ಚಾಗಿದೆ. ಮುಂದಿನ ಖರ್ಚು ವೆಚ್ಚ ನಿಭಾಯಿಸುವುದು ಕಷ್ಟವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಸಮಾಜಕಲ್ಯಾಣ ಇಲಾಖೆಯಿಂದ ಸೂಕ್ತ ಸಹಾಯಧನ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ಅಲ್ಲದೇ, ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಲಕ್ಷಣ ಸಿ, ದೇವಾಪೂರ, ಜಿಲ್ಲಾ ಸಂಚಾಲಕ ಮಹಾದೇವ ಕಾಂಬಳೆ, ಸಂತೋಷ ಕಾಂಬಳೆ, ಆಯುಬ ಮುಲ್ಲಾ, ಹುಸೇನ ಬಡೇಘರ, ರಿಯಾಜ ಇನಾಮದಾರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಂದಾ ಗುನ್ನಾಪೂರ, ಸುನಿತಾ ಕಾಖಂಡಕಿ, ಅನಿತಾ ಸಿಂಗೆ ಮತ್ತಿತರರಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವನನ್ನು ಬಂಧಿಸಲಾಗಿದೆ. ಇನ್ನೋರ್ವನ ಬಂಧನಕ್ಕೆ ಜಾಲ ಬೀಸಲಾಗಿದೆ.
ಸೋಮೇಶ ಗೆಜ್ಜಿ, ಪಿಎಸ್‌ಐ ಇಂಡಿ ಗ್ರಾಮೀಣ ಠಾಣೆ