ಹುಬ್ಬಳ್ಳಿ: ವಿಆರ್ ಎಲ್ ಸಮೂಹ ಸಂಸ್ಥೆಯವರು ಏನೇ ಕಾರ್ಯ ಮಾಡಿದರೂ ಲಾಭದ ಆಸೆ ಇಟ್ಟುಕೊಳ್ಳದೇ ಸಾರ್ವಜನಿಕ ಹಿತ ಹಾಗೂ ಅನುಕೂಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡುತ್ತಾರೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶೀಮಠ ಹೇಳಿದರು.
ಇಲ್ಲಿಯ ನ್ಯೂ ಕಾಟನ್ ಮಾರ್ಕೆಟ್ನಲ್ಲಿರುವ ವಿಜಯವಾಣಿ ಕಚೇರಿಯಲ್ಲಿ ಶನಿವಾರ ವಿಜಯೋತ್ಸವ ಅದೃಷ್ಟಶಾಲಿಗಳ ಆಯ್ಕೆ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ಅತ್ಯಂತ ವಿಶಾಲ ಮನೋಭಾವ ಉಳ್ಳವರು. ಸದಾ ಸಮಾಜದ ಚಿಂತನೆಯೇ ಅವರ ಧ್ಯೇಯವಾಗಿದೆ. ಅವರು ಏನೇ ಕೆಲಸ ಕೈಗೊಂಡರೂ ಅಲ್ಲಿ ಸಾಮಾಜಿಕ ಕಾಳಜಿ ಇರುತ್ತದೆ. ದಸರಾ, ದೀಪಾವಳಿ ಸಂದರ್ಭದಲ್ಲಿ ಜನರು ಹೆಚ್ಚು ಖರೀದಿ ಮಾಡುತ್ತಾರೆ. ಅವರಿಗೂ ಬಹುಮಾನ ಗೆಲ್ಲುವ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿರುವುದೇ ಸಂಸ್ಥೆಯ ಕಾಳಜಿಗೆ ಸಾ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಆರ್ ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು, ಕಳೆದ 10 ವರ್ಷಗಳಿಂದ ವಿಜಯವಾಣಿಯ ಎಲ್ಲ 10 ಆವೃತ್ತಿಗಳಲ್ಲಿ ವಿಜಯೋತ್ಸವ ಖರೀದಿ ಸಂಭ್ರಮ ಆಚರಿಸುತ್ತ ಬರಲಾಗಿದೆ. ಈ ವರೆಗೆ 25 ಸಾವಿರಕ್ಕೂ ಹೆಚ್ಚು ಬಹುಮಾನಗಳನ್ನು ಅದೃಷ್ಟಶಾಲಿಗಳಿಗೆ ನೀಡಲಾಗಿದೆ. ಈ ಬಾರಿ 2800 ಬಹುಮಾನಗಳನ್ನು ನೀಡಲಾಗುತ್ತಿದೆ ಎಂದರು.
ಓದುಗರಿಗೆ ಪ್ರೋತ್ಸಾಹ ನೀಡುವುದು, ಅಲ್ಲದೇ ನಮ್ಮ ಪಾಲುದಾರ ಉದ್ಯಮಿ, ಮಳಿಗೆ, ಅಂಗಡಿಕಾರರಿಗೂ ಉತ್ತೇಜನ ನೀಡುವ ಸಲುವಾಗಿ ವಿಜಯೋತ್ಸವ ಮಾಡುತ್ತ ಬರಲಾಗಿದೆ. ಡಿಜಿಟಲ್ ಯುಗದಲ್ಲಿಯೂ ಬೆಳಗ್ಗೆ ಚಹಾದೊಂದಿಗೆ ಪತ್ರಿಕೆ ಇಲ್ಲದಿದ್ದರೆ ಏನೋ ಒಂದು ಕಳೆದುಕೊಂಡ ಭಾವ ಬರುತ್ತದೆ. ಕೈಯಲ್ಲಿ ಪತ್ರಿಕೆ ಇದ್ದರೆ ನೆಮ್ಮದಿ, ಸಂತೃಪ್ತಿ ಸಿಗುತ್ತದೆ ಎಂದರು.
ವಿಜಯವಾಣಿ ಎಲ್ಲ ಕ್ಷೇತ್ರದಲ್ಲಿಯೂ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ. ಕೃಷಿಕರಿಗಾಗಿ ಕೃಷಿಮೇಳ, ಮನೆ, ನಿವೇಶನ ಕೊಳ್ಳುವವರಿಗಾಗಿ ಪ್ರಾಪರ್ಟಿ ಎಕ್ಸಪೋ, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳಿಗಾಗಿ ಎಜ್ಯುಕೇಶನ್ ಎಕ್ಸಪೋ, ಕಲೆ, ಸಂಸತಿ ಹೀಗೆ ಎಲ್ಲ ರಂಗದಲ್ಲಿಯೂ ಸಾರ್ವಜನಿಕರ ಅಗತ್ಯಗಳನ್ನು ತಿಳಿದುಕೊಂಡು ಪೂರೈಸುತ್ತ ಬರಲಾಗಿದೆ. ಇದೇ ರೀತಿ ವಿಜಯೋತ್ಸವಕ್ಕೆ ಅಪಾರ ಬೆಂಬಲ ವ್ಯಕ್ತವಾಗಿದೆ ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕರಾದ ಪ್ರಕಾಶ ಶೇಟ್ ಮಾತನಾಡಿ, ಪ್ರತಿ ವರ್ಷ ಆಯೋಜಿಸುವ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವ ಅಂಗಡಿಗಳಲ್ಲಿ 2 ಸಾವಿರ ರೂ.ವರೆಗಿನ ವಸ್ತುಗಳನ್ನು ಖರೀದಿ ಮಾಡಿದ ಗ್ರಾಹಕರು ಲಕ್ಕಿ ಕೂಪನ್ ಭರ್ತಿ ಮಾಡಿ ಬಾಕ್ಸ್ ನಲ್ಲಿ ಹಾಕುತ್ತಿದ್ದರು. ಆದರೆ, ಈ ಬಾರಿ ಡಿಜಿಟಲ್ ಮಾಡಲಾಗಿದೆ. ಅದೃಷ್ಟಶಾಲಿಗಳನ್ನು ಡಿಜಿಟಲ್ ವೇದಿಕೆಯಲ್ಲಿ ಆಯ್ಕೆ ಮಾಡುವ ಮೂಲಕ ಮತ್ತಷ್ಟು ಪಾರದರ್ಶಕತೆಗೆ ನಾಂದಿ ಹಾಡಲಾಗಿದೆ ಎಂದರು.
ಖ್ಯಾತ ದಂತ ವೈದ್ಯರಾದ ಡಾ. ಕರಣ ಮಂತ್ರಿ, ಕೆಸಿಸಿಐ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಇತರರು ಇದ್ದರು.
ಉತ್ತಮ ಪ್ರತಿಕ್ರಿಯೆ: ಈ ಮೊದಲು ಕೋಪನ್ ಗಳನ್ನು ಒಂದೆಡೆ ರಾಶಿ ಹಾಕಿ ಅದರಲ್ಲಿ ಹೆಕ್ಕಿ ಒಂದೊಂದನ್ನು ತೆಗೆದು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡುತ್ತಿದ್ದ ಪದ್ಧತಿಗೂ ಈಗಿನ ಡಿಜಿಟಲ್ ತಂತ್ರಜ್ಞಾನದ ಮೂಲಕ ಆಯ್ಕೆ ಮಾಡುತ್ತಿರುವುದರ ಬಗ್ಗೆ ಪಾಲುದಾರ ಉದ್ಯಮಿಗಳು, ಅಂಗಡಿ, ಮಳಿಗೆದಾರರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಡಿಜಿಟಲ್ ತಂತ್ರಜ್ಞಾನವೇ ಉತ್ತಮವಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.