ಜಿಲ್ಲೆ

ಕಲ್ಯಾಣದಲ್ಲಿ ವಿಜಯೇಂದ್ರ ಬಿರುಗಾಳಿ

Bidar

ಮಾರ್ಥಂಡ ಜೋಶಿ ಬಸವಕಲ್ಯಾಣ

ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಕೆಲವೇ ದಿನಗಳಲ್ಲಿ ನಡೆಯಲಿರುವ ಉಪ ಸಮರಕ್ಕೆ ಬಿಜೆಪಿ ರಣಕಹಳೆ ಮೊಳಗಿಸಿದೆ. ಚುನಾವಣೆ ತಂತ್ರಗಾರಿಕೆ ರೂಪಿಸುವಲ್ಲಿ ನಿಸ್ಸೀಮರೆನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಶುಕ್ರವಾರ ನಗರಕ್ಕೆ ಆಗಮಿಸಿ ಸರಣಿ ಸಭೆ, ಸಮಾಲೋಚನೆ ನಡೆಸಿದರು. ಇವರ ಮೊದಲ ಭೇಟಿ ಕೇಸರಿ ಪಡೆಗೆ ಆನೆಬಲ ತಂದರೆ, ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ವಿವಿಧ ಮಠ, ಮಂದಿರ, ಧಾರ್ಮಿಕ ಸ್ಥಳಗಳಿಗೆ ತೆರಳಿ ಪೂಜೆ ಸಲ್ಲಿಸಿ ಪೂಜ್ಯರಿಂದ ಆಶೀರ್ವಾದ ಪಡೆಯುವ ಮೂಲಕ ಉಪ ಚುನಾವಣೆ ಚಟುವಟಿಕೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಇವರ ಭೇಟಿ ಹಿನ್ನೆಲೆಯಲ್ಲಿ ನಗರವೇ ಕೇಸರಿಮಯವಾಗಿತ್ತು. ಎಲ್ಲೆಡೆ ಪಕ್ಷದ ಧ್ವಜ, ಕಟೌಟ್ ಗಳು ರಾರಾಜಿಸಿದವು. ಈ ಕ್ಷೇತ್ರದಿಂದ ತಾವು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪೂರಕವಾಗಿ ಸಂಘಟನಾ ಸಭೆ ನಡೆಸಿ ಕ್ಷೇತ್ರದ ಸ್ಥಿತಿಗತಿ ಅರಿಯಲು ಬಂದಿರುವೆ. ವರಿಷ್ಠರು ಎಲ್ಲೇ ಉಸ್ತುವಾರಿ ಕೊಟ್ಟರೂ ಎಲ್ಲರ ಸಹಕಾರದಿಂದ ಹಗಲಿರುಳು ಸೇವೆ ಸಲ್ಲಿಸಿ ಕಮಲ ಅರಳಿಸಲು ಪ್ರಯತ್ನಿಸುವೆ. ಇಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವುದು ಶತಸಿದ್ಧ ಎಂದು ವಿಜಯೇಂದ್ರ ಘೋಷಿಸಿದರು.

ವಿಶ್ವಗುರು ಬಸವಣ್ಣನವರಿಂದ ಸ್ಥಾಪಿತ ವಿಶ್ವದ ಮೊದಲ ಸಂಸತ್ತು ಖ್ಯಾತಿಯ ಅನುಭವ ಮಂಟಪಕ್ಕೆ ತೆರಳಿ ದರ್ಶನ ಪಡೆಯುವ ಮೂಲಕ ವಿಜಯೇಂದ್ರ ಕಲ್ಯಾಣದ ಪ್ರವಾಸಕ್ಕೆ ಸೈ ಎಂದರು. ಷಟಸ್ಥಲ ಧ್ವಜಾರೋಹಣದ ಬಳಿಕ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಚನ ಪಠಣ ಸಹ ಮಾಡಿದರು. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ವಿಜಯೇಂದ್ರ ಅವರಿಗೆ ಆಶೀರ್ವದಿಸಿದರು. ನಂತರ ಗವಿ ಮಠಕ್ಕೆ ತೆರಳಿ ಪೂಜ್ಯರಿಂದ ಸನ್ಮಾನ ಸ್ವೀಕರಿಸಿದರು. ಬಳಿಕ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನೀಲಾಂಬಿಕಾ ದಾಸೋಹ ಮಂಟಪದಲ್ಲಿ ಪ್ರಸಾದ ಸ್ವೀಕರಿಸಿದರು.

ಎಲ್ಲೆಡೆ ಪಕ್ಷದ ಪ್ರಮುಖರು, ಟಿಕೆಟ್ ಆಕಾಂಕ್ಷಿಗಳಿಂದ ಸ್ವಾಗತ, ಸನ್ಮಾನ ಸ್ವೀಕರಿಸಿದರು. ಆದರೆ ಎಲ್ಲೂ ಅಭ್ಯರ್ಥಿ ವಿಷಯದಲ್ಲಿ ಯಾವುದೇ ಗುಟ್ಟು ಬಿಟ್ಟು ಕೊಡಲಿಲ್ಲ. ಎಲ್ಲೂ ಆಕಾಂಕ್ಷಿಗಳಲ್ಲಿ ಜೋಶ್ ಕಡಿಮೆಯಾಗದಂತೆ ಎಚ್ಚರ ವಹಿಸಿದರು. ಎಲ್ಲರಿಗೂ ಹುರಿದುಂಬಿಸುವ ಕೆಲಸ ಮಾಡಿದರು. ಇಲ್ಲಿ ಮರಾಠಾ ಸಮಾಜದ ಸಭೆಯಲ್ಲಿ ಭಾಗವಹಿಸಿರುವುದನ್ನು ಬಿಟ್ಟರೆ ಪಕ್ಷದ ಯಾವುದೇ ಸಭೆ, ಸಮಾರಂಭ ಆಯೋಜಿಸಿರಲಿಲ್ಲ. ಆದರೆ ಅನುಭವ ಮಂಟಪದಲ್ಲಿ ಟ್ರಸ್ಟ್ ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕನ್ನಡ ಮತ್ತು ಕರ್ನಾಟಕ ಎಂದರೆ ಮಠಗಳ ನೆನಪಾಗುತ್ತದೆ. ನಾಡಿನ ಪ್ರಗತಿಯಲ್ಲಿ ಮಠಗಳ ಕೊಡುಗೆ ದೊಡ್ಡದು. ಸರ್ಕಾರ ಮಾಡದಂಥ ಕೆಲಸ-ಕಾರ್ಯಗಳು ಮಠಗಳಿಂದ ನಡೆಯುತ್ತಿವೆ. ಅನ್ನದ ಜತೆಗೆ ಜ್ಞಾನ ದಾಸೋಹ ನೀಡುತ್ತಿವೆ. ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ಎಲ್ಲ ಸಮಾಜದ ಮಠ, ಮಾನ್ಯಗಳಿಗೆ ಅನುದಾನ ಒದಗಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಕೊಟ್ಟ ಮಾತಿಗೆ ತಕ್ಕಂತೆ ನಡೆದಿರುವ ರಾಜ್ಯದ ಏಕೈಕ ಮುಖ್ಯಮಂತ್ರಿ ಎಂದು ಬಣ್ಣಿಸಿದರು.

ಶ್ರೀ ಡಾ.ಬಸವಲಿಂಗ ಪಟ್ಟದೇವರು ಆಶೀರ್ವಚನ ನೀಡಿ, ಆದಷ್ಟು ಬೇಗ ಅನುಭವ ಮಂಟಪ ಕೆಲಸಕ್ಕೆ ಚಾಲನೆ ನೀಡುವಂತೆ ಕೋರಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದೇವರು, ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶ್ರೀ ಅಪ್ಪ್ಪಾರಾವ ದೇವಿ ಮುತ್ಯಾ, ಶ್ರೀ ಶಿವಾನಂದ ದೇವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದರಾದ ಭಗವಂತ ಖೂಬಾ, ಡಾ.ಉಮೇಶ ಜಾಧವ್, ಎಂಎಲ್ಸಿಗಳಾದ ಶಶೀಲ್ ನಮೋಶಿ, ಸುನೀಲ್ ವಲ್ಲಾಪುರೆ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ಮಾಜಿ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಸುಭಾಷ ಕಲ್ಲೂರ, ಪ್ರಮುಖರಾದ ಗುರುನಾಥ ಕೊಳ್ಳುರ್, ಸೂರ್ಯಕಾಂತ ನಾಗಮಾರಪಳ್ಳಿ, ಡಾ.ಶೈಲೇಂದ್ರ ಬೆಲ್ದಾಳೆ, ವೈಜಿನಾಥ ಕಾಮಶೆಟ್ಟೆ, ಡಿ.ಕೆ. ಸಿದ್ರಾಮ, ಸಂಜಯ್ ಪಟವಾರಿ, ಗುಂಡುರೆಡ್ಡಿ, ಸುಧೀರ ಕಾಡಾದಿ, ಅನೀಲ ಭೂಸಾರೆ, ಶರಣು ಸಲಗರ್, ಪ್ರದೀಪ ವಾತಡೆ, ರವಿ ಚಂದನಕೇರೆ, ಉಮೇಶ ಬಿರಬಿಟ್ಟೆ, ವಿಜಯಕುಮಾರ ಮಂಠಾಳೆ, ದೀಪಕ ಗಾಯಕವಾಡ, ಸೂರ್ಯಕಾಂತ ಚಿಲ್ಲಾಬಟ್ಟೆ, ದೀಪಕ ಗುಡ್ಡಾ, ಅಶೋಕ ವಕಾರೆ, ಕೃಷ್ಣಾ ಗೋಣೆ, ಶ್ರೀನಿವಾಸ ಜಲ್ದೆ, ಶಂಕರ ನಾಗದೆ, ಅರವಿಂದ ಮುತ್ತೆ, ವಿಜಯಕುಮಾರ ಪಾಟೀಲ್ ಗಾದಗಿ ಇತರರಿದ್ದರು. ಬಾಬು ವಾಲಿ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.

ಟಿಕೆಟ್ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ
ವಿಜಯೇಂದ್ರ ಅವರ ಕಲ್ಯಾಣ ಭೇಟಿ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಪರಿಣಮಿಸಿತು. ಟಿಕೆಟ್ ಗಿಟ್ಟಿಸಲು ಲಾಬಿ ನಡೆಸುತ್ತಿರುವ ಪ್ರಮುಖರು ಅಲ್ಲಲ್ಲಿ ತಮ್ಮ ತಮ್ಮ ಬೆಂಬಲಿಗರ ಪಡೆಯೊಂದಿಗೆ ವಿಜಯೇಂದ್ರ ಮೇಲೆ ಪುಷ್ಪವೃಷ್ಟಿಗೈದು ಸತ್ಕರಿಸಿ ಗಮನ ಸೆಳೆಯಲು ಪ್ರಯತ್ನಿಸಿದರು. ಈ ವೇಳೆ ವಿಜಯೇಂದ್ರ ಜತೆ ಅವರವರ ಮುಖಂಡರ ಪರವಾಗಿ ಜೈಘೋಷ ಮೊಳಗಿಸಿದರು. ಕೆಲವೆಡೆ ಟಿಕೆಟ್ ಆಕಾಂಕ್ಷಿಗಳು ವೇದಿಕೆ ನಿರ್ಮಿಸಿ ಶಿರಾ ಉಪ ಚುನಾವಣೆ ಗೆಲುವಿನ ರೂವಾರಿ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರಿಗೆ ಅದ್ದೂರಿ ಅಭಿನಂದನೆ ನೀಡಿದರು. ಪ್ರಬಲ ಆಕಾಂಕ್ಷಿ ಶರಣು ಸಲಗರ್ ಅವರು ಅನುಭವ ಮಂಟಪ ಕ್ರಾಸ್ ಹತ್ತಿರದ ತಮ್ಮ ನಿವಾಸದೆದುರು ವೇದಿಕೆ ನಿರ್ಮಿಸಿದ್ದರು. ವಿಜಯೇಂದ್ರ ಅನುಭವ ಮಂಟಪ ಭೇಟಿ ನಂತರ ಇಲ್ಲಿಗೆ ಆಗಮಿಸಿದರು. ಅಪಾರ ಬೆಂಬಲಿಗರ ಉದ್ಘೋಷಣೆಗಳ ನಡುವೆ ಶರಣು ಸಲಗರ್ ಗೌರವಿಸಿದರು. ಈ ವೇಳೆ ವಿಜಯೇಂದ್ರ ಮಾತನಾಡಿ, ಇಲ್ಲಿ ಕಾಣುತ್ತಿರುವ ಉತ್ಸಾಹ, ಜೋಶ್ ನೋಡಿದರೆ ಉಪ ಚುನಾವಣೆಯಲ್ಲಿ ನಮ್ಮ ಗೆಲುವು ಖಚಿತ ಎಂದು ಸ್ಪಷ್ಟವಾಗುತ್ತಿದೆ. ಟಿಕೆಟ್ ಯಾರಿಗೇ ಸಿಕ್ಕರೂ ಎಲ್ಲರೂ ಸೇರಿ ಪಕ್ಷದ ಅಭ್ಯಥರ್ಿ ಭರ್ಜರಿ ಗೆಲುವಿಗೆ ಶ್ರಮಿಸಲು ಕೋರಿದರು. ಜಿಪಂ ಸದಸ್ಯ ಗುಂಡುರೆಡ್ಡಿ ಅವರು ಬೇಗ್ ಫಂಕ್ಶನ್ ಹಾಲ್ ನಲ್ಲಿ ತಮ್ಮ ದೊಡ್ಡ ಪ್ರಮಾಣದ ಬೆಂಬಲಿಗರ ಸಮ್ಮುಖದಲ್ಲಿ ವಿಜಯೇಂದ್ರ ಅವರಿಗೆ ಭರ್ಜರಿ ಸನ್ಮಾನ ನೀಡಿದರು. ಇಲ್ಲೂ ಮಾತನಾಡಿದ ವಿಜಯೇಂದ್ರ, ಕಲ್ಯಾಣದಲ್ಲಿ ಕಮಲ ಅರಳಿಸುವುದೇ ನಮ್ಮ ಒನ್ ಪಾಯಿಂಟ್ ಪ್ರೋಗ್ರಾಮ್. ಸಂಘಟಿತ ಪ್ರಯತ್ನದ ಮೂಲಕ ಕ್ಷೇತ್ರ ಕೈವಶಪಡಿಸಿಕೊಳ್ಳೋಣ ಎಂದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ತಮ್ಮ ನಿವಾಸದಲ್ಲಿ ವಿಜಯೇಂದ್ರ ಅವರನ್ನು ಗೌರವಿಸಿದರು. ಜಿಪಂ ಸದಸ್ಯ ಸುಧೀರ್ ಕಾಡಾದಿ, ಮುಖಂಡರಾದ ಸಂಜಯ್ ಪಟವಾರಿ, ಅನೀಲ ಭೂಸಾರೆ, ಪ್ರದೀಪ ವಾತಡೆ, ವಿಜಯಕುಮಾರ ಮಂಠಾಳೆ, ರವಿ ಚಂದನಕೇರೆ, ಉಮೇಶ ಬಿರಬಿಟ್ಟೆ ಮುಂತಾದವರು ವಿಜಯೇಂದ್ರ ಅವರನ್ನು ಸನ್ಮಾನಿಸಿದರು. ಅಂಬಿಗರ ಚೌಡಯ್ಯ ಗವಿ ಹತ್ತಿರದ ಕೋಲಿ/ ಕಬ್ಬಲಿಗ ಸಮಾಜದಿಂದ ವಿಜಯೇಂದ್ರ ಅವರನ್ನು ಸತ್ಕರಿಸಲಾಯಿತು. ಈ ವೇಳೆ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ ಅವರು ವಿಜಯೇಂದ್ರ ಹಾಗೂ ಮಾಜಿ ಸಚಿವ ಬಾಬುರಾವ ಚಿಂಚನಸೂರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬೈಕ್ ರ್ಯಾಲಿ ಸೇರಿ ವಿಜಯೇಂದ್ರ ವಿವಿಧೆಡೆ ಭೇಟಿ ನೀಡಿ ಕಲ್ಯಾಣದಿಂದ ವಾಪಸ್ ಆಗುವವರೆಗೆ ಅವರವರ ಬೆಂಬಲಿಗರು ಟಿಕೆಟ್ ಆಕಾಂಕ್ಷಿಗಳ ಹೆಸರು ಜೋರಾಗಿ ಚೀರುತ್ತ ಘೋಷಣೆ ಮಾಡುವಲ್ಲಿ ನಿರತರಾಗಿದ್ದರು.

ಮರಾಠರಿಗೆ ಒಲಿಯಲಿದೆ 2ಎ ಭಾಗ್ಯ
ಮರಾಠಾ ಸಮುದಾಯವನ್ನು ಭರಪೂರ ಪಕ್ಷದತ್ತ ಸೆಳೆವ ಪ್ರಯತ್ನದಲ್ಲಿರುವ ವಿಜಯೇಂದ್ರ ಶುಕ್ರವಾರ ವರ್ಷಾ ಫಂಕ್ಶನ್ ಹಾಲ್ನಲ್ಲಿ ಆಯೋಜಿಸಿದ್ದ ಮರಾಠಾ ಸಮಾಜದ ಬೃಹತ್ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆ ಸಮಾಜದಿಂದ ಸನ್ಮಾನ ಮತ್ತು ಮನವಿಪತ್ರ ಸ್ವೀಕರಿಸಿದ ಅವರು, 3ಬಿನಿಂದ ಪ್ರವರ್ಗ 2ಎಗೆ ಸೇರಿಸಬೇಕೆಂಬ ಪ್ರಮುಖ ಬೇಡಿಕೆ ಶೀಘ್ರ ಈಡೇರಿಸಿ ಸಮಾಜಕ್ಕೆ ನ್ಯಾಯ ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ನುಡಿದಂತೆ ನಡೆಯುವುದೇ ಯಡಿಯೂರಪ್ಪ ಸರ್ಕಾರದ ವಿಶೇಷ. ಮರಾಠಾ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧ ಬೆಂಗಳೂರಿಗೆ ಹೋಗುತ್ತಲೇ ಮುಖ್ಯಮಂತ್ರಿ ಗಮನ ಸೆಳೆಯುವೆ. ಸಮಾಜದ ಬೇಡಿಕೆಗೆ ಅವರು ಸ್ಪಂದಿಸುವ ವಿಶ್ವಾಸವಿದೆ ಎಂದರು. ಮರಾಠಾ ಸಮಾಜದ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದು ಸಿಎಂ ಚಿಂತನೆಯಲ್ಲಿದೆ ಎಂದೂ ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಪದ್ಮಾಕರ್ ಪಾಟೀಲ್ ಮಾತನಾಡಿ, ಸಮುದಾಯ ಮೊದಲಿನಿಂದಲೂ ಬಿಜೆಪಿ ಬೆನ್ನಿಗಿದೆ. ನಮಗೆ ಟಿಕೆಟ್ ನೀಡದಿದ್ದರೂ ಚಿಂತೆಯಿಲ್ಲ, ಮೀಸಲಾತಿ ನೀಡಿ. ಟಿಕೆಟ್ ಗಿಂತಲೂ ಇದು ಮುಖ್ಯವಾಗಿದೆ ಎಂದು ವಿಜಯೇಂದ್ರ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ, ಮುಖಂಡ ತಮ್ಮೇಶಗೌಡ ಮಾತನಾಡಿದರು. ಎಂಎಲ್ಸಿಗಳಾದ ಶಶೀಲ್ ನಮೋಶಿ, ಸುನೀಲ್ ವಲಾ್ಲೃಪುರೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಜಿಲಾಧ್ಯಕ್ಷ ದಿಗಂಬರರಾವ ಮಾನಕಾರಿ, ಪ್ರಮುಖರಾದ ಪ್ರಕಾಶ ಪಾಟೀಲ್, ಸೂರ್ಯಕಾಂತ ನಾಗಮಾರಪಳ್ಳಿ, ಬಾಬು ವಾಲಿ, ಡಾ.ಶೈಲೇಂದ್ರ ಬೆಲ್ದಾಳೆ, ಸಂಜಯ್ ಪಟವಾರಿ, ಡಾ.ಓಂಪ್ರಕಾಶ ಜಾಧವ್, ಪ್ರೊ.ಶಿವಾನಂದ ಜಾಧವ್, ಅಂಗದರಾವ ಜಗತಾಪ, ವೆಂಕಟೇಶ ಮಹಿಂದೆ, ಸುಧೀರ ಕಾಡಾದಿ, ಬಾಲಾಜಿ ಚಂಡಕಾಪುರೆ, ಬಾಲಾಜಿ ಸಾವಳೆ, ಜನಾರ್ಧನ ಬಿರಾದಾರ, ರಾವ್ಸಾಹೇಬ ಬಿರಾದಾರ ಸೇರಿ ಸಮಾಜದ ಪ್ರಮುಖರು ಭಾಗವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಬಾಬುರಾವ ಕಾರಬಾರಿ ಸ್ವಾಗತಿಸಿದರು. ವಿ.ಟಿ.ಸಿಂಧೆ ವಂದಿಸಿದರು. ಯುವರಾಜ ಪಾಟೀಲ್ ನಿರೂಪಣೆ ಮಾಡಿದರು.

ರು. 10 ಕೋಟಿ ವೆಚ್ಚದಲ್ಲಿ
ಛತ್ರಪತಿ ಶಿವಾಜಿ ಪಾಕ್೯

ಬಸವಕಲ್ಯಾಣದಲ್ಲಿ ಸೂಕ್ತ ಜಾಗ ಖರೀದಿಸಿ 10 ಕೋಟಿ ರೂ. ವೆಚ್ಚದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಬೃಹತ್ ಪ್ರತಿಮೆ ಮತ್ತು ಉದ್ಯಾನ(ಪಾಕ್೯) ಸ್ಥಾಪಿಸುವ ಸಂಬಂಧ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದು ವಿಜಯೇಂದ್ರ ಹೇಳಿದರು. ಮರಾಠಾ ಸಮಾಜದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಸಮಾಜದ ಎಲ್ಲ ಬೇಡಿಕೆಗಳನ್ನು ಸರ್ಕಾರ ಹಂತ ಹಂತವಾಗಿ ಈಡೇರಿಸಲಿದೆ. ಕೆ.ಆರ್.ಪೇಟೆ, ಶಿರಾ ಕ್ಷೇತ್ರದ ಇತಿಹಾಸದಲ್ಲಿ ಬಿಜೆಪಿ ಮೊದಲ ಸಲ ಎಲ್ಲರ ಪ್ರಯತ್ನದಿಂದ ಗೆದ್ದಿದೆ. ಅಲ್ಲಿ ಚುನಾವಣೆ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಇದು ಬಸವಕಲ್ಯಾಣ ಕ್ಷೇತ್ರಕ್ಕೂ ಅನ್ವಯಿಸಲಿದೆ. ನಾನಿಲ್ಲಿ ಭಾಷಣ ಮಾಡಲು ಬಂದಿಲ್ಲ. ಜನರ ಸಮಸ್ಯೆ ತಿಳಿದುಕೊಳ್ಳಲು ಬಂದಿರುವೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಲು ಪ್ರಯತ್ನಿಸುವೆ ಎಂದು ಅಭಯ ನೀಡಿದರು. ಮರಾಠಾ ಸಮಾಜ ಸ್ವಾಭಿಮಾನಿ ಇದೆ. ಯಡಿಯೂರಪ್ಪ ಅಧಿಕಾರಕ್ಕೆ ಬರುವಲ್ಲಿ ಮರಾಠಾ ಸಮುದಾಯದ ಕೊಡುಗೆ ಸಾಕಷ್ಟಿದೆ. ಶ್ರೀಮಂತ ಪಾಟೀಲ್ ರಾಜೀನಾಮೆ ನೀಡಿ ನಮಗೆ ಸಾಥ್ ನೀಡಿದ್ದರು. ಹೀಗಾಗಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಮರಾಠಾ ಸಮಾಜದ ಕೊಡುಗೆ ಸ್ಮರಣೀಯವಿದೆ ಎಂದು ಬಣ್ಣಿಸಿದರು.

ಅದ್ದೂರಿ ಮೆರವಣಿಗೆ
ಕೆ.ಆರ್.ಪೇಟೆ ಮತ್ತು ಶಿರಾ ಉಪ ಚುನಾವಣೆ ಉಸ್ತುವಾರಿ ಹೊತ್ತು ಜಯದ ಮಾಲೆ ತೊಡಿಸಿದ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರ ಮೊದಲ ಬಸವ ನೆಲದ ಭೇಟಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಸಸ್ತಾಪುರ ಹತ್ತಿರದಿಂದಲೇ ವಿಜಯೇಂದ್ರ ಅವರ ಗಾ್ರೃಂಡ್ ವೆಲ್ಕಮ್ ನಡೆಯಿತು. ಎತ್ತ ನೋಡಿದರತ್ತ ಸ್ವಾಗತದ ಕಟೌಟ್ಗಳು ಕಂಡವು. ಸಹಸ್ರಾರು ಯುವಕರು ಇವರ ವಾಹನದ ಮುಂದೆ ಬೈಕ್ ನಲ್ಲಿ ಸಾಗಿದರು. ಅನುಭವ ಮಂಟಪದಿಂದ ಅದ್ದೂರಿ ಮೆರವಣಿಗೆ ನಡೆಯಿತು. ತೆರೆದ ವಾಹನ ಸಿದ್ಧಪಡಿಸಲಾಗಿತ್ತು. ಆದರೆ ವಿಜಯೇಂದ್ರ ಅವರು ಕರೊನಾ ಸಂದರ್ಭ ಹಾಗೂ ಸಂಚಾರ ಸಮಸ್ಯೆ ಆಗುವುದನ್ನು ಅರಿತು ಸ್ವಲ್ಪ ದೂರ ಮಾತ್ರ ಇದರಲ್ಲಿ ನಿಂತು ನಂತರ ತಮ್ಮ ಕಾರಿನ ಮೂಲಕ ಮುಂದೆ ಸಾಗಿದರು. ಇವರು ಹೋದ ಕಡೆಗಳಲ್ಲೆಲ್ಲ ಮುಂದೆ, ಹಿಂದೆ ಬೈಕ್ ಹಾಗೂ ವಾಹನಗಳ ದೊಡ್ಡ ಸಾಲು ಇತ್ತು. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು.

12ನೇ ಶತಮಾನದಲ್ಲೇ ಜಗತ್ತಿಗೆ ಬೆಳಕು ತೋರಿದ ಕೇಂದ್ರ ಅನುಭವ ಮಂಟಪ. ಈ ಪವಿತ್ರ ಕ್ಷೇತ್ರ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಬೇಕು ಎಂಬುದು ಸಿಎಂ ಯಡಿಯೂರಪ್ಪ ಕನಸು. ನೂತನ ಅನುಭವ ಮಂಟಪಕ್ಕೆ ಸರ್ಕಾರ ಈಗಾಗಲೇ 100 ಕೋಟಿ ರೂ. ಬಿಡುಗಡೆ ಮಾಡಿದೆ. 50 ಎಕರೆ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿದ್ದು, ಶೀಘ್ರ ಕಾಮಗಾರಿಗೆ ಅಡಿಗಲ್ಲು ಹಾಕುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.| ಬಿ.ವೈ. ವಿಜಯೇಂದ್ರಬಿಜೆಪಿ ರಾಜ್ಯ ಉಪಾಧ್ಯಕ