ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ವಿಶ್ವಶಾಂತಿ ಆಶ್ರಮದಲ್ಲಿ ಜು.17ರಂದು ಬೆಳಗ್ಗೆ 10:30ಕ್ಕೆ ಆಶಾಢ ಶುದ್ಧಏಕಾದಶಿ ಪ್ರಯುಕ್ತ ಶ್ರೀವಿಶ್ವರೂಪ ವಿಜಯ ವಿಠ್ಠಲ ದೇವರಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ.
ವಿಜಯ ವಿಠ್ಠಲದೇವರ 36ನೇ ಪ್ರತಿಷ್ಠಾವರ್ದಂತಿ ಹಾಗೂ ಆಶ್ರಮದ ಸಂಸ್ಥಾಪಕ ದಿವಂಗತ ಸಂತ ಭದ್ರಗಿರಿ ಕೇಶವದಾಸರ 90ನೇ ಜನ್ಮದಿನೋತ್ಸವ ಪ್ರಯುಕ್ತ ಮಹಾಮಸ್ತಾಕಾಭಿಷೇಕ ಏರ್ಪಡಿಸಲಾಗಿದೆ.
ಬೆಳಗ್ಗೆಯಿಂದಲೇ ವಿಜಯವಿಠಲ ದೇವರಿಗೆ ಜ್ಯೋತಿ ಅಂಕುರಾರ್ಪಣೆ, ಪಂಚಾಮೃತ ಅಭಿಷೇಕ, ಮಧ್ಯಾಹ್ನ 1ಗಂಟೆಗೆ ಮಹಾಮಂಗಳಾರತಿ ಇರಲಿದೆ. ಆಶ್ರಮದ ಪ್ರವೇಶ ದ್ವಾರದಲ್ಲಿರುವ ಆಂಜನೇಯ, ಮಾರ್ಕೆಂಡೇಯ ದೇವರು ಸೇರಿ ದೇವಾಲಯದ ಬೃಹತ್ ಗಾತ್ರದ ಮತ್ತು ಎತ್ತರದ ವಿಠ್ಠಲ ವಿಗ್ರಹದ ಸುತ್ತಲೂ ಇರುವ ಅಷ್ಟಲಕ್ಷ್ಮೀ ದೇವತೆಗಳಿಗೆ ಪೂಜೆಗಳು, ಇಡೀ ರಾತ್ರಿ ಭಜನೆ, ಕೀರ್ತನೆಗಳೊಂದಿಗೆ ಜಾಗರಣೆ ಮಾಡಲಾಗುವುದು.
ವಿಶ್ವಶಾಂತಿ ಆಶ್ರಮ ಟ್ರಸ್ಟ್ ಅಧ್ಯಕ್ಷೆ ರಮಾಕೇಶವದಾಸರು ಹಾಗೂ ಧರ್ಮದರ್ಶಿ ಮುರುಳೀಧರ್‌ಪೈ, ಗೀತಾಭಟ್, ಶ್ರೀರಾಧೇಶ್ಯಾಂಪೈ ಭಾಗವಹಿಸಲಿದ್ದಾ ಎಂದು ಆಶ್ರಮ ವ್ಯವಸ್ಥಾಪಕ ನಾಗರಾಜು ತಿಳಿಸಿದ್ದಾರೆ.
ಸ್ಥಳದ ವಿಶೇಷತೆ ಏನು? ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ 24 ಕಿ.ಮೀ ದೂರ ಕ್ರಮಿಸಿದರೆ ವಿಶ್ವಶಾಂತಿ ಆಶ್ರಮ ಸಿಗಲಿದೆ. ಮಹಾದ್ವಾರ ಪ್ರವೇಶಿಸುತ್ತಿದ್ದಂತೆಯೇ ಎಡಭಾಗದಲ್ಲಿ ಎತ್ತರದ ಪ್ರಸನ್ನಾಂಜನೇಯ, ಮಾರ್ಕಂಡೇಯ, ದತ್ತಾತ್ರೇಯ, ಸತ್ಯನಾರಾಯಣಸ್ವಾಮಿ, ಲಕ್ಷ್ಮೀಸಮೇತಭೂವರಹಸ್ವಾಮಿ ಮತ್ತು ಸೀತರಾಮಲಕ್ಷಣ ದೇವರು ಮಂದಿರಗಳಿವೆ. ಜತೆಗೆ ಇಲ್ಲಿ 36 ಅಡಿ ಎತ್ತರದ ಶ್ರೀವಿಶ್ವರೂಪ ವಿಜಯ ವಿಠ್ಠಲ ದೇವರ ಪ್ರತಿಮೆ ಸಿಗುವ ಬೃಹತ್ ಬೃಹತ್ ವಿಜಯವಿಠಲ ದೇವರ ವಿಗ್ರಹ ಮುಖ್ಯ ಆಕರ್ಷಣೆಯಾಗಿರುವುದು ಒಂದೆಡೆಯಾದರೆ ಭೇದ ಭಾವವಿಲ್ಲದೆ ಪ್ರತಿಯೊಬ್ಬರೂ ವಿಗ್ರಹವನ್ನು ಸ್ಪರ್ಶಿಸಿ ಪೂಜಿಸುವ ಅವಕಾಶ ಕಲ್ಪಿಸಲಾಗಿದೆ.
ವಿಠ್ಠಲನ ವಿಗ್ರಹದ ಇಕ್ಕೆಲಗಳಲ್ಲಿ 13 ಕೋಟಿ ರಾಮನಾಮ ಜಪದ ಸ್ತಂಭ, ಅಷ್ಟಲಕ್ಷ್ಮಿಯರ ವಿಗ್ರಹ, ಪಕ್ಕದಲ್ಲಿ ಅಮೃತ ಶಿಲೆಯ ದುರ್ಗಾಮಂದಿರ, ಪ್ರವೇಶ ದ್ವಾರದ ಇಲ್ಲಿಂದ ಸ್ವಲ್ಪ ದೂರದಲ್ಲೇ ಭಗವದ್ಗೀತಾ ಮಂದಿರದಲ್ಲಿರುವ ಹರಿ ಅಪಾರಾವತರಗಳ ಬೃಹತ್ ಮೂರ್ತಿ, ಶ್ವೇತವರ್ಣದ ಗಾಯತ್ರಿ ದೇವಿಯ ಮೂರ್ತಿ, ಸಪ್ತ ಋಷಿಗಳ ವಿಗ್ರಹ, ಶ್ವೇತಾಶ್ವಗಳ ರಥ, ಗೀತಾಬೋಧನೆಯ ದೃಶ್ಯ, ಗೀತಾ ಮಂದಿರ ವಿಶೇಷತೆಯಿಂದ ಕೂಡಿದ್ದು, ಪವಿತ್ರ ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿಗರ ತಾಣವಾಗಿ ಜನಪ್ರಿಯತೆ ಪಡೆದುಕೊಂಡಿದೆ.