ಜಿಲ್ಲೆ

Web Exclusive: ಹಾಡಿ ಮಕ್ಕಳಿಗೆ ಚನ್ನಪಟ್ಟಣದ ಆಟಿಕೆಗಳು: ಅಂಗನವಾಡಿಗಳಿಗೆ ಆಟಿಕೆ ಪೂರೈಕೆ!

  • ಕಿರಣ್ ಮಾದರಹಳ್ಳಿ, ಚಾಮರಾಜನಗರ

ವಿಶ್ವ ಮಟ್ಟಕ್ಕೆ ಪ್ರಸಿದ್ಧಿಗೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವ ‘ಚನ್ನಪಟ್ಟಣದ ಆಟಿಕೆಗಳು’ ಸದ್ಯದಲ್ಲೇ ಗಡಿ ಜಿಲ್ಲೆ ಚಾಮರಾಜನಗರದ ಹಾಡಿಗಳ ಅಂಗನವಾಡಿಗಳಿಗೂ ಪೂರೈಕೆಯಾಗಲಿವೆ..!

ಚನ್ನಪಟ್ಟಣದ ಬೊಂಬೆಗಳು ಕೇವಲ ಆಟಿಕೆಗಳಾಗಿ ಉಳಿಯದೆ ಮಕ್ಕಳ ಕಲಿಕಾ ಸಾಮಗ್ರಿಗಳಾಗಿಯೂ ಉಪಯೋಗಕ್ಕೆ ಬರುತ್ತವೆ. ಅವುಗಳನ್ನು ಜಿಲ್ಲೆಯಲ್ಲಿ ತೀರಾ ಹಿಂದುಳಿದ ಹಾಡಿಗಳ ಅಂಗನವಾಡಿಗಳಿಗೆ ಸ್ವಂತ ಹಣದಿಂದ ಕೊಡುಗೆ ನೀಡುವ ಮಹತ್ಕಾರ್ಯಕ್ಕೆ ಉಪಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥ್​ನಾರಾಯಣ ಮುಂದಾಗಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ವೋಕಲ್ ಫಾರ್ ಲೋಕಲ್’ ಯೋಜನೆಗೆ ಬೆಂಬಲ ವ್ಯಕ್ತಪಡಿಸುವುದು, ಸ್ಥಳೀಯ ಕರಕುಶಲ ಕರ್ವಿುಗಳಿಗೆ ಉತ್ತೇಜನ ನೀಡುವ ಸಲುವಾಗಿ ಹಾಡಿಗಳ ಅಂಗನವಾಡಿಗಳಿಗೆ ಚನ್ನಪಟ್ಟಣದ ಆಟಿಕೆಗಳನ್ನು ನೀಡಲಾಗುತ್ತಿದೆ. ಈ ಮೂಲಕ ಕಾಡಿನ ಮಕ್ಕಳ ಬೌದ್ಧಿಕ ಸಾಮರ್ಥ್ಯ ವೃದ್ಧಿಸುವುದು ಮತ್ತು ಕಲಿಕೆಗೆ ಅನುಕೂಲ ಒದಗಿಸಿಕೊಡಲಾಗುತ್ತಿದೆ.

ಹಾಡಿ ಮಕ್ಕಳ ಕೈಗೆ ಆಟಿಕೆ

2017-18ರ ಜಿಲ್ಲಾ ಅಂಕಿ-ಅಂಶಗಳ ಪ್ರಕಾರ ಶೇ. 61.43ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿರುವ ಚಾಮರಾಜನಗರ ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಜಿಲ್ಲೆ. ಇಲ್ಲಿರುವ ಹಿಂದುಳಿದ ಹಾಡಿಗಳನ್ನು ಆಯ್ಕೆ ಮಾಡಿಕೊಂಡು ಚನ್ನಪಟ್ಟಣದ ಆಟಿಕೆಗಳನ್ನು ನೀಡಲು ನಿರ್ಧರಿಸಲಾಗಿದೆ.

ಆಟಿಕೆಗಳು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ಉಪಕರಣಗಳಾಗಿವೆ. ಶಾಲಾ ಪೂರ್ವ ಶಿಕ್ಷಣಕ್ಕೆ(ಬೇಬಿ ಸಿಟ್ಟಿಂಗ್) ಇವುಗಳು ಅಗತ್ಯ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬೇಬಿ ಸಿಟ್ಟಿಂಗ್​ಗೆ ಸೇರಿದ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನೇ ಹೆಚ್ಚಾಗಿ ಬಳಸಿ ಬೋಧನೆ ಮಾಡಲಾಗುತ್ತದೆ. ಅಂಗನವಾಡಿಗಳಲ್ಲೂ ಆಟಿಕೆಗಳನ್ನು ಬಳಸಲಾಗುತ್ತಿದ್ದು, ಹಾಡಿ ಮಕ್ಕಳ ಕೈಗೆ ಮತ್ತಷ್ಟು ಕಲಿಕಾ ಸಾಮಗ್ರಿಗಳು ಸಿಗುತ್ತಿರುವುದು ಗಮನಾರ್ಹ.

ಆಟಿಕೆಗಳು ಸೇಫ್: ವರ್ಣಮಾಲೆ, ಸಂಖ್ಯೆಗಳು ಹೀಗೆ ವಿವಿಧ ಕಲಿಕೆಗೆ ಪೂರಕವಾದ ಮಾಹಿತಿ ನೀಡುವ ಚನ್ನಪಟ್ಟಣದ ಆಟಿಕೆಗಳು ಮಕ್ಕಳ ಬಳಕೆಗೆ ಯೋಗ್ಯವಾಗಿವೆ. ಅವುಗಳನ್ನು ತಯಾರಿಸುವ ಬಣ್ಣ ಸಾವಯವದ್ದಾಗಿರುವ ಜತೆಗೆ, ಅರಗಿನ ಮೂಲಕ ಅಂತಿಮ ಸ್ಪರ್ಶವನ್ನು ನೀಡಲಾಗುತ್ತದೆ. ಇದರಿಂದಾಗಿ ಮಕ್ಕಳು ಒಂದು ವೇಳೆ ಬೊಂಬೆಗಳನ್ನು ಬಾಯಿಗೆ ಹಾಕಿಕೊಂಡರೂ ಬಣ್ಣದ ವಿಷಕಾರಿ ಅಂಶ ಮಕ್ಕಳ ದೇಹವನ್ನು ಸೇರುವುದಿಲ್ಲ.

ಟ್ವೀಟ್ ಮಾಡಿರುವ ಡಿಸಿಎಂ

ಸೋಲಿಗರ ಹಾಡಿಗೆ ಚನ್ನಪಟ್ಟಣದ ಆಟಿಕೆಗಳನ್ನು ನೀಡುವ ಸಂಬಂಧ ಮಾ.17ರಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್​ನಾರಾಯಣ ಟ್ವೀಟ್ ಮಾಡಿದ್ದಾರೆ. ‘ನಮ್ಮ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕ್ರಾಫ್ಟ್​ವರ್ಕ್ಸ್ ಮಳಿಗೆಯಿಂದ ಹಲವು ಬಗೆಯ ಚನ್ನಪಟ್ಟಣ ಆಟಿಕೆಗಳನ್ನು ಖರೀದಿಸಿ ಸೋಲಿಗರ ಹಾಡಿಗಳ ಶಿಶುವಿಹಾರದ ಚಿಣ್ಣರಿಗೆ ನೀಡುತ್ತೇನೆ’ ಎಂದಿದ್ದಾರೆ.

ಚನ್ನಪಟ್ಟಣದ ಗೊಂಬೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಮಾನ್ಯತೆ ಕೊಡಿಸಲು ಸಂಕಲ್ಪ ತೊಟ್ಟಿದ್ದಾರೆ. ಇತ್ತೀಚಿಗೆ ಟಾಯ್ ಫೇರ್ ಮಾಡುವ ಮೂಲಕ ಚನ್ನಪಟ್ಟಣದ ಬೊಂಬೆಗೆ ಆನ್​ಲೈನ್ ವೇದಿಕೆಯನ್ನು ಸಹ ಒದಗಿಸಿಕೊಟ್ಟಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ಚನ್ನಪಟ್ಟಣದ ಗೊಂಬೆಗಳಿಗೆ ಇ-ಮಾರುಕಟ್ಟೆ ಸೌಲಭ್ಯ ಒದಗಿಸುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆಗಳ ನಡುವೆ ಹಾಡಿಗಳಿಗೂ ಚನ್ನಪಟ್ಟಣದ ಗೊಂಬೆ ತಲುಪಲಿದೆ.

ಕೋಟ್ಸ್

''ಪ್ರಧಾನಿ ನರೇಂದ್ರಮೋದಿ ಅವರ ವೋಕಲ್ ಫಾರ್ ಲೋಕಲ್ ಅಭಿಯಾನದಲ್ಲಿ ನೀವೂ ಪಾಲ್ಗೊಳ್ಳಿ. ಸ್ಥಳೀಯ ಉದ್ಯಮಗಳನ್ನು ಬೆಂಬಲಿಸೋಣ. ಚನ್ನಪಟ್ಟಣದ ಆಟಿಕೆಗಳನ್ನು ಸೋಲಿಗರ ಹಾಡಿ ಅಂಗನವಾಡಿಗಳಿಗೆ ನೀಡುತ್ತೇವೆ. ಚಾಮರಾಜನಗರದ ಹಲವು ಹಾಡಿಗಳಿಗೂ ಆಟಿಕೆ ವಿತರಣೆ ಮಾಡಲಾಗುವುದು''

|ಡಾ.ಸಿ.ಎನ್.ಅಶ್ವಥ್​ನಾರಾಯಣ, ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ರಾಮನಗರ.