ಜಿಲ್ಲೆ

ಗುಂಡಿ ಬಿದ್ದ ರಸ್ತೆ, ಒತ್ತುವರಿಯಾದ ರಾಜಕಾಲುವೆ

ಪಳೆಯಂಡ ಪಾರ್ಥ ಚಿಣ್ಣಪ್ಪ ವಿರಾಜಪೇಟೆ
ಬೆಟ್ಟ ಪ್ರದೇಶದ ಕೆಳ ಭಾಗದ ಸುಭಾಷ್ ನಗರದಲ್ಲಿರುವ ರಸ್ತೆಗಳು ಗುಂಡಿ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ಇದೆ. ರಾಜಕಾಲುವೆ ಒತ್ತುವರಿ ಹಾಗೂ ಚರಂಡಿ ಸಮಸ್ಯೆ ಇರುವುದರಿಂದ ಮುಖ್ಯ ರಸ್ತೆ ಮೇಲೆ ನೀರು ನಿಲ್ಲುತ್ತಿದೆ. ಬೀದಿ ದೀಪ, ಕಸಲೇವಾಎರಿ ಸಮರ್ಪಕವಾಗಿದೆ. ವಾರ್ಡ್ ಸದಸ್ಯ ಮಹಮದ್ ರಾಫಿ ಸ್ಥಳೀಯರ ಸಮಸ್ಯೆಗಳಿಗೆ ಸಕಾರತ್ಮಕವಾಗಿ ಸ್ಪಂದಿಸುತ್ತಿದ್ದಾರೆ.

ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೯ನೇ ವಾರ್ಡ್‌ನಲ್ಲಿ ಆಯೋಜಿಸಿದ್ದ ವಾರ್ಡ್ ವಾಚ್‌ನಲ್ಲಿ ವಾರ್ಡ್‌ನ ನೈಜ ಚಿತ್ರಣ ಬೆಳಕಿಗೆ ಬಂದಿದೆ. ವಾರ್ಡ್ ಕುಂದುಕೊರತೆಗಳನ್ನು ಸ್ಥಳೀಯರು ಸದಸ್ಯರ ಗಮನ ಸೆಳೆದರು.

ವಾರ್ಡ್ ೯ ವ್ಯಾಪ್ತಿಗೆ ಸುಭಾಷ್ ನಗರ, ಪಂಜರುಪೇಟೆ, ಸೆಲ್ವನಗರ್, ವಿದ್ಯಾನಗರ ಒಳಗೊಂಡಿದೆ. ವಾರ್ಡ್‌ನಲ್ಲಿ ೨೦೦ ಮನೆಗಳಿದ್ದು, ೧ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಇಲ್ಲಿ ೬೦೦ ಮತದಾರರಿದ್ದಾರೆ. ಪಂಜರುಪೇಟೆಯ ಮುಖ್ಯ ರಸ್ತೆಯಿಂದ ಟೆಂಡರ್ ಚಿಕನ್‌ವರೆಗೆ ವಾರ್ಡ್ ವ್ಯಾಪ್ತಿ ಇದೆ.

ಸುಭಾಷ್‌ನಗರದ ಅರ್ಧ ಭಾಗದಲ್ಲಿ ಹೊಸ ಬಡಾವಣೆಗಳಾಗಿದೆ. ಮೂಲ ಸೌಕರ್ಯ ಪುರಸಭೆಯಿಂದ ಪಡೆದುಕೊಂಡು ತೆರಿಗೆ ಹಣವನ್ನು ಬಿಟ್ಟಂಗಾಲ ಗ್ರಾಮ ಪಂಚಾುತಿಗೆ ಪಾವತಿಸುತ್ತಿದ್ದರು. ಇದೀಗ ಪಟ್ಟಣ ಪಂಚಾುತಿುಂದ ಪುರಸಭೆಯಾಗಿ ಮೇಲ್ದರ್ಜೆ ಆದ ಕಾರಣ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಆದೇಶ ಬಾರದ ಕಾರಣ ಪುರಸಭೆಗೂ ಪಾವತಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಹೊಸ ಬಡಾವಣೆಗಳು ಸೇರ್ಪಡೆಗೊಂಡಿರುವ ಕಾರಣ ಶಾಶ್ವತ ಪರಿಹಾರ ಕಂಡುಕೊಳ್ಳಲು ಅನುದಾನದ ಕೊರತೆ ಇದೆ. ಸುಭಾಷ್‌ನಗರ ದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಕಾವೇರಿ ನೀರು ಸರಬರಾಜು ಯೋಜನೆಯಡಿ ೧ ಕೊಳವೆ ಬಾವಿ ಮಾತ್ರ ಕಾರ್ಯನಿರ್ವಹಿಸುತ್ತಿದೆ.

ಹೊಸ ಬಡಾವಣೆಗಳು ಬಹುತೇಕ ಜೌಗು ಪ್ರದೇಶಗಳಾಗಿದ ಕಾರಣ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮಹಮ್ಮದ್ ರಾಫಿ ಸದಸ್ಯ ರಾದ ಮೇಲೆ ೩೫ ಲಕ್ಷ ರೂಪಾಯಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಮಳೆಹಾನಿ ಪರಿಹಾರ, ಎಸ್‌ಎಫ್‌ಸಿ, ೧೪ನೇ ಹಣಕಾಸು ಯೋಜನೆಯಡಿ ಸುಭಾಷ್ ನಗರದಲ್ಲಿ ೧೭ ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಸೇರಿದಂತೆ ಕಾಂಕ್ರೀಟ್ ಚರಂಡಿ, ಬೀದಿ ದೀಪದ ವ್ಯವಸ್ಥೆ ಮಾಡಲಾಗಿದೆ.

ಕೆಲವು ರಸ್ತೆಗಳು ಕಿರಿದಾಗಿದ್ದು, ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ರಸ್ತೆ ಕಿರಿದಾಗಿರುವುದರಿಂದ ಎದರುಗಡೆ ಬರುವ ವಾಹನಗಳಿಗೆ ದಾರಿ ಬಿಡಲು ಸಾಧ್ಯವಾಗುತ್ತಿಲ್ಲ. ಸುಭಾಷ್‌ನಗರ, ನೆಹರುನಗರ, ನಿಸರ್ಗ ಬಡಾವಣೆ ಮಧ್ಯ ಭಾಗ ಬೆಟ್ಟದಂಚಿನಲ್ಲಿದ್ದು ವರ್ಷ ಪೂತಿ ನೀರು ಹರಿಯುತ್ತದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗುವುದಿಂದ ತೋಡಿಗೆ ಸಣ್ಣ ತಡೆಗೋಡೆ ನಿರ್ಮಿಸುವುದು ಅತ್ಯವಶ್ಯಕವಾಗಿದೆ. ಇಲ್ಲಿ ಚರಂಡಿ ನಿರ್ಮಿಸುವ ಅಗತ್ಯತೆ ಇದೆ.

**
ಬೆಟ್ಟ ಪ್ರದೇಶದಿಂದ ಬರುವ ನೀರು ರಾಜಕಾಲುವೆ ಮೂಲಕ ಹರಿದು ಹೋಗಬೇಕು. ರಾಜ ಕಾಲುವೆ ಒತ್ತುವರಿ ಆಗಿರುವುದರಿಂದ ರಸ್ತೆ ಮೇಲೆ ನೀರು ಹರಿದು ಓಡಾಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಕೆಸರಿನಲ್ಲಿ ಮಿಂದೇಳುವ ಪರಿಸ್ಥಿತಿ ಎದುರಾಗಿದೆ. ಪುರಸಭೆಗೆ ಹಲವಾರು ಬಾರಿ ದೂರು ನೀಡಿದರು ಪ್ರಯೋಜವಾಗಿಲ್ಲ. ಒತ್ತುವರಿ ತೆರವುಗೋಳಿಸಿದರೆ ಬಹುತೇಕ ಸಮಸ್ಯೆ ಬಗೆಹರಿಯುತ್ತದೆ. ಎ.ಎಸ್. ಹಬಿಬುಲ್ಲಾ, ಸ್ಥಳೀಯ ನಿವಾಸಿ.

**
ಮುಖ್ಯರಸ್ತೆಯಲ್ಲಿರುವ ಟೆಂಡರ್ ಚಿಕನ್ ಬಳಿಯಿಂದ ವಾರ್ಡ್‌ಗೆ ತೆರಳುವ ರಸ್ತೆ ಇಕ್ಕಾಟಾಗಿದೆ. ಪಕ್ಕದಲ್ಲಿಯೆ ೨ ಶಾಲೆಗಳಿವೆ. ನೂರಾರು ಮಕ್ಕಳು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ವಾಹನಗಳು ವೇಗವಾಗಿ ತೆರಳುವುದಿಂದ ಅಪಘಾತ ಸಂಭವಿಸುತ್ತಿದೆ. ಚರಂಡಿಗೆ ಸ್ಲಾಬ್ ಅಳವಡಿಸಿದರೆ ವಾಹನ ತೆರಳಲು ಅನುಕೂಲವಾಗುತ್ತದೆ. ವೇಗ ನಿಯಂತ್ರಣಕ್ಕೆ ಹಂಪ್ ನಿರ್ಮಿಸಿದರೆ ಉತ್ತಮ. ಎನ್.ಎಂ. ಅನಿಲ್, ಗ್ಯಾರೇಜ್ ಮಾಲಿಕ.

**
ರಾಜಕಾಲುವೆ ಒತ್ತುವರಿ ತೆರವು ಮಾಡಲು ಪರಸಭೆ ಮಾಸಿಕ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಒತ್ತುವರಿ ಪತ್ತೆ ಹಚ್ಚಲು ಸರ್ವೇ ಕೈಗೆತ್ತಿಕೊಳ್ಳಲಾಗುವುದು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೋಡು ಒತ್ತುವರಿ ತೆರವುಗೊಳಿಸಿದ್ದಂತೆ ವಿರಾಜಪೇಟೆಯಲ್ಲಿ ರುವ ರಾಜಕಾಲುವೆ ಒತ್ತುವರಿ ತೆರವು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ. ಮಹಮದ್ ರಾಫಿ, ಪಟ್ಟಣ ಪಂಚಾಯಿತಿ ಸದಸ್ಯರು, ೯ನೇ ವಾರ್ಡ್.

**
ಬಡಾವಣೆಯಲ್ಲಿರುವ ರಸ್ತೆ ಅಭಿವೃದ್ಧಿ ಮಾಡದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಮೂಲ ಸೌಕರ್ಯಗಳಿಗೆ ಹಲವಾರು ಬಾರಿ ಕಚೇರಿಗೆ ದೂರು ನೀಡಲಾಗಿದೆ. ಕೆಲವು ಭಾಗಗಳಲ್ಲಿ ಚರಂಡಿ ಸರಿ ಪಡಿಸಿದ್ದಾರೆ. ಹೊಸ ಬಡಾವಣೆಯಾದ ಕಾರಣ ವಿಳಂಬ ಆಗಿರಬಹುದು ಅಂದು ಕೊಂಡಿದ್ದೇವೆ. ವಾರ್ಡ್ ಸದಸ್ಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಬ್ದುಲ್ ಖಾದರ್, ಸ್ಥಳೀಯ ನಿವಾಸಿ.

**
ವಾರ್ಡ್‌ಗೆ ಬರುವ ರಸ್ತೆ ಸರಿ ಇಲ್ಲದರಿಂದ ಆಟೋದಲ್ಲಿ ಬರುವಾಗ ವಾರ್ಡ್ ಸದಸ್ಯರಿಗೆ ಬೈಯುತ್ತಾ ಬರುತೇವೆ. ಚರಂಡಿ ಸಮತಟ್ಟಾಗಿರು ವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಕಸ ವಿಲೇವಾರಿ, ಬೀದಿ ದೀಪ ವ್ಯವಸ್ಥೆ ಸರಿಯಾಗಿದೆ. ಸಮಸ್ಯೆಗಳಿಗೆ ಸದಸ್ಯರ ಸ್ಪಂದನೆ ಉತ್ತಮವಾಗಿದೆ. ವಿ.ಆರ್. ಸುಮಾ, ಗೃಹಿಣಿ.