ಜಿಲ್ಲೆ

ವಿಜಯವಾಣಿ ಸಂಗೀತ ಸಂಜೆ, ಸುಂದರ ಸಂಜೆಯಲ್ಲಿ ಸಂಗೀತದ ಸಂಭ್ರಮ, ದಿಗ್ಗಜರ ಗಾನ ಲಹರಿಗೆ ಹರಿದು ಬಂದ ಜನಸಾಗರ

Dharwada - Basavaraj Idli

ಹುಬ್ಬಳ್ಳಿ: ಸಂಗೀತಕ್ಕಿರುವ ಶಕ್ತಿಯೇ ಅಂತಹದು. ಎಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅದರಲ್ಲೂ ದಿಗ್ಗಜರ ಸಂಗೀತ ಸಮಾರೋಹ ಎಂದರೆ ಅಲ್ಲೊಂದು ಮಹಾಶಕ್ತಿಯೇ ಮೇಳೈಸುತ್ತದೆ. ಸುಂದರ ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ಮೂಡಿ ಬಂದ ಅಂತಹ ಮೇರು ಕಲಾವಿದರ ಸಂಗೀತ ಕಛೇರಿಗೆ ಜನರು ತಂಡೋಪತಂಡವಾಗಿ ಆಗಮಿಸಿ ಕಿವಿಯಾದರು.

ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ವತಿಯಿಂದ ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಶನಿವಾರ ಇಲ್ಲಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮವು ಕಲಾ ರಸಿಕರನ್ನು ಬಹುವಾಗಿ ಆಕರ್ಷಿಸಿತು.

ಕಿಕ್ಕಿರಿದು ತುಂಬಿದ್ದ ಸಭಾಗೃಹದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಗಾಯಕ ಪಂ. ಜಯತೀರ್ಥ ಮೇವುಂಡಿ ಹಾಗೂ ಸಿತಾರ್ ವಾದನದಲ್ಲಿ ತಮ್ಮದೇ ಛಾಪು ಮೂಡಿಸಿರುವ ಉಸ್ತಾದ ರಫೀಕ್ ಖಾನ್ ಹಾಗೂ ಇವರ ಶಿಷ್ಯ, ಯುವ ಪ್ರತಿಭೆ ಅಂಕುಶ್ ನಾಯಕ ಅವರ ಜುಗಲ್ ಬಂದಿ ಕಾರ್ಯಕ್ರಮವನ್ನು ಜನರು ಕಣ್ಮನ ತುಂಬಿಕೊಂಡರು.

ಸಂಗೀತ ಲೋಕದ ಅಪರೂಪದ ಕ್ಷಣಕ್ಕೆ ಸವಾಯಿ ಗಂಧರ್ವ ಕಲಾ ಮಂದಿರವು ಶನಿವಾರ ಸಾಕ್ಷಿಯಾಯಿತು. ಕಾರ್ಯಕ್ರಮ ಆರಂಭದಲ್ಲಿ ಸಿತಾರ್ ಜುಗಲ್ ಬಂದಿ ಸುಮಾರು ಒಂದೂವರೇ ತಾಸು ಪ್ರೇಕ್ಷಕರನ್ನು ಹಿಡಿದಿಟ್ಟಿತು.

ರಾಗ ಪೂರಿಯಾ ಕಲ್ಯಾಣ, ದೃಕ್ ತೀನ್ ತಾಲ ಮೂಲಕ ಸಿತಾರ್ ವಾದನ ಆರಂಭಿಸಿದ ಗುರು ಶಿಷ್ಯರು ಹೊಸ ಸಂಗೀತ ಲೋಕವನ್ನೇ ಸೃಷ್ಟಿಸಿದರು. ಸಿತಾರ್ ನಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಿದರು.

ಮುಸ್ಸಂಜೆಯ ತಂಪಿನಲ್ಲಿ ಗುರು ಶಿಷ್ಯರ ಸಿತಾರ್ ರಾಗ ಲಹರಿಗಳು ಸುಶ್ರಾವ್ಯವಾಗಿ ಮೂಡಿ ಬರುತ್ತಿದ್ದಂತೆ ಆಗಲೇ ತುಂಬಿ ಹೋಗಿದ್ದ ಸಭಾಗೃಹದತ್ತ ಮತ್ತಷ್ಟು ಪ್ರೇಕ್ಷಕ ವರ್ಗ ಹರಿದು ಬಂತು.

ಎಲ್ಲಿಯೂ ಲಯ ತಪ್ಪದಂತೆ ಗುರುಗಳನ್ನು ಹಿಂಬಾಲಿಸಿದರು ಶಿಷ್ಯ ಅಂಕುಶ್. ಇಬ್ಬರ ಸಿತಾರ್ ವಾದನವನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ಜನರು ಸಿತಾರ್ನ ಏರಿಳಿತಗಳಿಗೆ ತಲೆದೂಗುತ್ತಿದ್ದರು. ಅತ್ಯುತ್ತಮವಾಗಿ ಮೂಡಿ ಬಂದ ಗುರು ಶಿಷ್ಯರ ಜುಗಲ್ ಬಂದಿಗೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಸಿತಾರ್ ವಾದನಕ್ಕೆ ಅಷ್ಟೇ ಸೊಗಸಾದ ತಬಲಾ ಸಾಥ್ ನೀಡಿದ ಯುವ ಕಲಾವಿದ ಧಾರವಾಡದ ಹೇಮಂತ ಜೋಶಿ ಅವರು ಕೂಡ ಪ್ರೇಕ್ಷಕರ ಚಪ್ಪಾಳೆಯ ಪ್ರೋತ್ಸಾಹ ಗಿಟ್ಟಿಸಿದರು. ಎಲ್ಲಿಯೂ ತಾಳ ತಪ್ಪದಂತೆ ಹದಭರಿತ ಸಾಥ್ ನೀಡಿದ್ದು ಅವರ ತಬಲಾ ಪ್ರಾವಿಣ್ಯತೆ ಪ್ರದರ್ಶಿಸಿತು.

ಸುಮಾರು ಒಂದೂವರೇ ತಾಸು ಹೊಸ ಲೋಕಕ್ಕೆ ಕೊಂಡೊಯ್ದ ಜುಗಲ್ ಬಂದಿ ಪ್ರೇಕ್ಷಕರನ್ನು ಎಲ್ಲಿಯೂ ಹೊರಳದಂತೆ ಬಂಧಿಸಿತ್ತು. ಸಿತಾರ್ ನ ಅಲೆಗಳಲ್ಲಿ ಪ್ರೇಕ್ಷಕರು ತೇಲಿ ಹೋಗಿದ್ದರು. ಒಂದು ರೀತಿ ಹಿಮಾಲಯದ ಎತ್ತರದಲ್ಲಿ ತೊರೆಯೊಂದು ಹುಟ್ಟಿ ನಿಧಾನವಾಗಿ ಹರಿಯುತ್ತ ಮಧ್ಯದಲ್ಲಿ ಬೋರ್ಗರೆದು ಕೊನೆಗೆ ಸಮುದ್ರವನ್ನು ಸೇರುವಂತೆ ಕೇಳುಗರಿಗೆ ನವೀನ ಅನುಭವ ನೀಡಿತು.

ಉಸ್ತಾದ ಅವರ ಜತೆ ಪ್ರತಿ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ ಶಿಷ್ಯ ಅಂಕುಶ್ ಯಾವುದೇ ಭಯ ಇಲ್ಲದೇ ಲಯಬದ್ಧ ವಾದನ ಮಾಡಿ ಸೈ ಎನಿಸಿಕೊಂಡರು.