ಜಿಲ್ಲೆ

ಕಾಫಿ ಗುಣಮಟ್ಟ ಕಾಯ್ದುಕೊಳ್ಳಲು ತಜ್ಞರ ಸಲಹೆ

reportermys

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ


ಕಾಫಿ ಒಣಗಿಸುವ ವಿಧಾನದಲ್ಲಿ ಓವರ್ ಡ್ರೈ ಕೂಡ ಗುಣಮಟ್ಟಕ್ಕೆ ಅಪಾಯಕಾರಿಯಾಗಲಿದೆ ಎಂದು ದಕ್ಷಿಣ ಕೊಡಗು ಕಾಫಿ ಮಂಡಳಿ ತಜ್ಞರು ಹೇಳಿದರು.

ಅರ‌್ವತೊಕ್ಲು ಗ್ರಾಮದಲ್ಲಿರುವ ದಕ್ಷಿಣ ಕೊಡಗು ಕಾಫಿ ಮಂಡಳಿ ಕಾಫಿ ಕೃಷಿ ಕ್ಷೇತ್ರದಲ್ಲಿ ಕನ್ನಡದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಸಂವಾದದಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಕಾಫಿ ಕೊಯ್ಲೋತ್ತರ ವಿಧಾನ ಮತ್ತು ಪರಿಷ್ಕರಣೆಯಲ್ಲಿ ಬೆಳೆಗಾರರು ಕಡ್ಡಾಯವಾಗಿ ಒಂದಷ್ಟು ನಿಯಮ ಪಾಲಿಸುವುದು ಒಳ್ಳೆಯದೆಂದು ಹೇಳಿದ್ದಾರೆ.

ಒಣಗಿದ ಕಾಫಿ ಬೀಜದಲ್ಲಿ ಶೇ.೧೧ ರಿಂದ ೧೨ ರಷ್ಟು ತೇವಾಂಶ ಇರಬೇಕು. ಇದರಿಂದ ಕಾಫಿಯ ರುಚಿ, ಗುಣಮಟ್ಟ, ರಾಸಾಯನಿಕ ಘಟಕಗಳನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಶೇ. ೧೧-೧೨ ಕ್ಕಿಂತ ಕಡಿಮೆ ತೇವಾಂಶದ ಕಾಫಿ ದೇಶದ ಗುಣಮಟ್ಟದ ಕಾಫಿಗೆ ಹಿನ್ನೆಡೆಯಾಗಲಿದೆ. ಇದಕ್ಕಿಂತ ಹೆಚ್ಚು ತೇವಾಂಶ ಇದ್ದರೆ, ಫಂಗಸ್ ಹರಡುವುದು, ಗುಣಮಟ್ಟ ಕ್ಷೀಣಿಸುವುದನ್ನು ಕಾಣಬಹುದಾಗಿದೆ ಎಂದರು.

೧೧೫ ಕೆ.ಜಿ ಹಣ್ಣು ಕಾಫಿಯಿಂದ ೫೦ ಕೆ.ಜಿ ಒಣ ಕಾಫಿ (ಚೆರ‌್ರಿ) ಉತ್ಪಾದನೆಯಾಗಲಿದೆ. ಇದರಲ್ಲಿ ೨೫ ಕೆ.ಜಿ. ಬೀಜ ಪಡೆಯಬಹುದಾಗಿದೆ. ಈ ಮಾದರಿಯಲ್ಲಿ ಪರಿಷ್ಕರಣೆ ಮಾಡಿದಾಗ ಗುಣಮಟ್ಟ ಕಾಫಿ ಉತ್ಪಾದನೆಯಾಗಲಿದೆ. ಔಟರ್ನ್ ಕೂಡ ಕಾಯ್ದಿರಿಸಿಕೊಳ್ಳಬಹುದೆಂದು ಮಾಹಿತಿ ನೀಡಿದ್ದಾರೆ.

ಪಿಕ್ಕಿಂಗ್ ಮ್ಯಾಟ್
ಕೊಯ್ಲು ವಿಧಾನದಲ್ಲಿ ಕಾಯಿಗಳು ನೆಲಕ್ಕೆ ಬೀಳದಂತೆ ತಡೆಯಲು ಮ್ಯಾಟ್ ಪದ್ಧತಿ ಉತ್ತಮ ಮಾರ್ಗವಾಗಿದೆ. ಗಿಡದ ಕೆಳಗೆ ಮ್ಯಾಟ್ ಹಾಕಿ ಕೊಯ್ಲು ಮಾಡಬೇಕು. ನಂತರ ನೆಲಕ್ಕೆ ಉದುರಿದ ಬೀಜ ಹೆಕ್ಕಿ ತೆಗೆಯಬೇಕು. ಬೀಜ ಉದುರಿದ್ದರೆ ಕಾಯಿ ಕೊರಕ ರೋಗ ಹರಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕೊರಕ ರೋಗದಿಂದ ಬೀಜದ ತೂಕ, ಗುಣಮಟ್ಟ ಎಲ್ಲವೂ ಇಳಿಕೆಯಾಗುತ್ತದೆ. ಇದರ ನಿಯಂತ್ರಣ ಅವಶ್ಯ ಎಂದರು.

ಔಷಧ ಸಿಂಪಡಣೆ ಬೇಡ
ಕಾಫಿ ಕೊಯ್ಲು ಸಂದರ್ಭ ಸಮೀಸುತ್ತಿರುವುದರಿಂದ ಕಾಫಿ ಬೆಳೆ ಸೇರಿದಂತೆ ಮಿಶ್ರ ಬೆಳೆಯಾಗಿರುವ ಕರಿಮೆಣಸು ಮತ್ತು ಅಡಕೆ ಇತರ ಬೆಳೆಗಳಿಗೆ ಯಾವುದೇ ರೀತಿಯ ಔಷಧ ಸಿಂಪಡಣೆ ಸರಿಯಲ್ಲ. ಕಾಫಿ ಬೀಜದ ಮೇಲೆ ಔಷಧ ನಿಲ್ಲುವುದರಿಂದ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಗುಣಮಟ್ಟಕ್ಕೆ ಪೆಟ್ಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೊಯ್ಲು ಮಡುವವರೆಗೂ ಸಿಂಪಡಣೆ ತಡೆಹಿಡಿಯಬೇಕೆಂಬ ಸಲಹೆ ನೀಡಿದರು.

ಉಪನಿರ್ದೇಶಕಿ ಶ್ರೀದೇವಿ ಮಾತನಾಡಿ, ಅರೆಬಿಕಾ ಮತ್ತು ರೋಬಸ್ಟಾ ಕಾಫಿ ಕೃಷಿಯಲ್ಲಿ ಮಳೆಯನ್ನು ಅವಲಂಬಿಸದೆ ನೀರು ಸಿಂಪಡಣೆ ಮೂಲಕ ಹೂ ಬಿಟ್ಟು ಬಂದಿರುವ ಫಸಲು ಒಂದೇ ಅವಧಿಯಲ್ಲಿ ಹಣ್ಣಾಗುತ್ತದೆ. ಬೀಜಗಳ ಉತ್ಪಾದನೆಯಲ್ಲಿ ವ್ಯತ್ಯಾಸ ಇರುವುದಿಲ್ಲ. ಇದು ಒಂದೇ ಅವಧಿಯಲ್ಲಿ ಕೊಯ್ಲು ಮಾಡಲು ಸುಲಭ. ಕಾರ್ಮಿಕರ ವೆಚ್ಚ, ಕೀಟಗಳ ಹಾವಳಿ ಕೂಡ ನಿಯಂತ್ರಣಕ್ಕೆ ಬರುತ್ತದೆ. ಗುಣಮಟ್ಟದ ಕಾಫಿ ಉತ್ಪಾದನೆ ಮಾಡಬಹುದಾಗಿದೆ ಎಂದರು. ಬೆರ‌್ರಿ ಬೋರರ್ ಕಡಿವಾಣ ಹಾಕಲು ಟ್ರ್ಯಾಪ್ ಪದ್ಧತಿ ಕಡ್ಡಾಯವಾಗಿ ಪಾಲಿಸಬೇಕೆಂದರು.

ಸಂಶೋಧನಾ ಸಹಾಯಕ ಡಾ.ಜೆ. ಚೇತನ್ ಮಾತನಾಡಿ, ರೋಬಸ್ಟಾ ಕಾಫಿಯಲ್ಲಿ ೪೦ ಲೀಟರ್ ಅಳತೆಯ ಬುಶೆಲ್ ಅಥವಾ ಫೋರ್‌ಲಿಟ್ ಮೂಲಕ ಅಳೆದು ಒಣಗಿಸುವ ಕ್ರಮ ಕಾಫಿ ಗುಣಮಟ್ಟ ಕಾಯ್ದುಕೊಳ್ಳಲು ಪೂರಕವಾಗಲಿದೆ. ಒಂದು ದಿನ ಕೊಯ್ಲು ಮಾಡುವ ಕಾಫಿಯಲ್ಲಿ ಒಂದು ಬುಶೆಲ್ ಅಥವಾ ಫೋರ್‌ಲಿಟ್‌ನಲ್ಲಿ ಅಳೆದು, ೧೦ ರಿಂದ ೧೨ ದಿನ ಒಣಗಿದ ನಂತರ ೧ ಬುಶೆಲ್ ಕಾಫಿಯ ತೂಕ ೧೮ ಕೆ. ಜಿ. ತೂಕ ಇದ್ದರೆ ಅದು ಗುಣಮಟ್ಟದ ಕಾಫಿ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಇಂತಹ ಪದ್ಧತಿ ಅನುಸರಿಸಲು ಬೆಳೆಗಾರರು ಮುಂದಾಗಬೇಕು. ಮುಂದೊಂದು ದಿನ ಇಂತಹ ನಿಯಮ ಮಾರುಕಟ್ಟೆ ವ್ಯವಸ್ಥೆಯಲ್ಲಿ ಜಾರಿಗೆ ಬರುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.

ಸಹಾಯಕ ವಿಸ್ತರಣಾ ಅಧಿಕಾರಿ ಪಿ. ಪ್ರೀತಾ ಮಾತನಾಡಿ, ಶೇ. ೯೦ ರಷ್ಟು ಹಣ್ಣಾದಾಗ ಕೊಯ್ಲು ಮಾಡುವುದರಿಂದ ಗುಣಮಟ್ಟ ಕಾಯ್ದು ಕೊಳ್ಳಬಹುದಾಗಿದೆ. ಹೆಕ್ಕಿ ತೆಗೆಯುವ ಅನಿವಾರ್ಯತೆ ತಪ್ಪಿಸಬಹುದು. ತೋಟದಲ್ಲಿ ಕಾಫಿ ಉಳಿಯದಂತೆ ಜಾಗೃತೆ ವಹಿಸಬೇಕು. ಇದರಿಂದ ಬೆರ‌್ರಿ ಬೋರರ್ ನಿಯಂತ್ರಣಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.

**
ಕಾಫಿ ಕೊಯ್ಲು ಸಂದರ್ಭ ಕಾಯಿ ಮತ್ತು ಹಣ್ಣುಗಳನ್ನು ಬೇರ್ಪಡಿಸುವ ವಿಧಾನ ಬೆಳೆಗಾರರು ಪಾಲಿಸಬೇಕು. ಇದರಿಂದ ಕಾಫಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಕೊಯ್ಲು ಮತ್ತು ಒಣಗಿಸುವ ವಿಧಾನದಲ್ಲಿ ತಪ್ಪಾಗದಂತೆ ಮುತುವರ್ಜಿ ವಹಿಸುವುದು, ಉದುರಿರುವ ಕಾಫಿ ಬೀಜ ಹೆಕ್ಕುವುದರಿಂದ ಸಂಪೂರ್ಣವಾಗಿ ಕಾಯಿ ಕೊರಕ ನಿಯಂತ್ರಣಕ್ಕೆ ತರಲು ಸಹಕಾರಿ. ಡಾ.ಕೆ.ಶ್ರೀದೇವಿ, ಉಪ ನಿರ್ದೇಶಕಿ, ದಕ್ಷಿಣ ಕೊಡಗು ಕಾಫಿ ಮಂಡಳಿ.

**
ಕಾಫಿ ಒಣಗಿಸುವ ಸಂದರ್ಭ ಬುಶೆಲ್ ಅಥವಾ ಫೋರ್‌ಲಿಟ್ ಮೂಲಕ ಅಳೆದು ಒಣಗಿಸುವುದು, ನಂತರ ಸರಿಯಾದ ತೂಕದಲ್ಲಿ ಕಾಫಿ ಬೀಜ ಇದೆಯೆ ಎಂದು ಪರಿಶೀಲಿಸಿ ನಡೆಸುವ ವಿಧಾನದಿಂದ ಭಾರತದ ಕಾಫಿ ವಿಶ್ವ ಮಟ್ಟದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಹಾಯ ವಾಗುತ್ತದೆ. ಡಾ.ಜೆ. ಚೇತನ್, ಸಂಶೋಧನಾ ಸಹಾಯಕರು.

**
ಕಾಫಿ ಕೊಯ್ಲೋತ್ತರ ವಿಧಾನದಲ್ಲಿ ಕಾಫಿ ಮ್ಯಾಟ್ ಬಳಸುವುದು ತೋಟದಲ್ಲಿ ಕಾಯಿಗಳು ಉದುರದಂತೆ ಮುಂಜಾಗೃತೆ ವಹಿಸಲು ಪೂರಕವಾಗಿದೆ. ತೋಟದಲ್ಲಿ ಕಾಯಿ ಹೆಕ್ಕುವ ಕಾರ್ಯ ಕೂಡ ಹೆಚ್ಚು ಪರಿಣಾಮಕಾರಿಯಾಗಲಿದೆ. ಪಿ.ಪ್ರೀತಾ, ಸಹಾಯಕ ವಿಸ್ತರಣಾ ಅಧಿಕಾರಿ.