ಜಿಲ್ಲೆ

ವಿಜಯವಾಣಿ ಅದೃಷ್ಟಶಾಲಿಗಳಿಗೆ ಬಹುಮಾನ; ಕೆಎಂಎಫ್ ಎಂಡಿ ಶಿವಸ್ವಾಮಿ, ನಟ ಪ್ರಮೋದ್‌ರಿಂದ ಲಕ್ಕಿ ಡ್ರಾ

ಬೆಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿಜಯವಾಣಿ ಆಯೋಜಿಸಿದ್ದ ‘ವಿಜಯೋತ್ಸವ ಶಾಪಿಂಗ್ ಉತ್ಸವ 2024’ ಹಾಗೂ ‘ವಿಜಯವಾಣಿ ಓದಿ ಬಹುಮಾನ ಗೆಲ್ಲಿ’ ಸ್ಕೀಂನ ಬೆಂಗಳೂರು ಆವೃತ್ತಿಯ ಅದೃಷ್ಟಶಾಲಿಗಳನ್ನು ಬುಧವಾರ ಆಯ್ಕೆ ಮಾಡಲಾಯಿತು. ವಿಜಯವಾಣಿ ಕೇಂದ್ರ ಕಚೇರಿಯಲ್ಲಿ ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಕೆಎಂಎಫ್ ಎಂಡಿ ಬಿ.ಶಿವಸ್ವಾಮಿ ಹಾಗೂ ನಾಯಕನಟ ಪ್ರಮೋದ್ ಪಂಜು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದರು. ಅ.3 ರಿಂದ ನ.16ರವರೆಗೆ ಒಟ್ಟು 45 ದಿನಗಳ ಕಾಲ ನಡೆದ ಶಾಪಿಂಗ್ ಉತ್ಸವವು ವಿಜಯವಾಣಿಯ 10 ಆವೃತ್ತಿಯ ಓದುಗರು ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ರಾಜ್ಯಾದ್ಯಂತ 535 ಪ್ರಸಿದ್ಧ ಮಳಿಗೆಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು. ಕನಿಷ್ಟ 2 ಸಾವಿರ ರೂಪಾಯಿ ಮೌಲ್ಯದ ಖರೀದಿಗೆ ಒಂದರಂತೆ ಗ್ರಾಹಕರಿಗೆ ಕೂಪನ್ ನೀಡಲಾಗಿತ್ತು. ಬೆಂಗಳೂರು ಆವೃತ್ತಿಯ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಮಳಿಗೆಗಳು ಪಾಲ್ಗೊಂಡಿದ್ದು ಒಟ್ಟು 2 ಲಕ್ಷಕ್ಕಿಂತ ಹೆಚ್ಚಿನ ಕೂಪನ್‌ಗಳು ಸಂಗ್ರಹವಾಗಿದ್ದವು. ಈ ಪೈಕಿ 750 ಬಹುಮಾನಗಳನ್ನು ನೀಡಲಾಗಿದೆ.

ಓದುಗರಿಗೆ ದೊರೆತ 2500 ಬಹುಮಾನಗಳು

ವಿಜಯವಾಣಿ ವಿಜಯೋತ್ಸವ ಶಾಪಿಂಗ್ ಉತ್ಸವ 2024ರಲ್ಲಿ ರಾಜ್ಯಾದ್ಯಂತ ಒಟ್ಟು 2500 ಬಹುಮಾನಗಳು ಓದುಗರಿಗೆ ನೀಡಲಾಗಿದೆ. ಒಟ್ಟು 7 ಕಾರು, 10 ಬೈಕು, 10 ರೆಫ್ರಿಜಿರೇಟರ್, 10 ವಾಷಿಂಗ್ ಮೆಷಿನ್, 10 ಎಲ್‌ಇಡಿ ಟಿವಿ, 10 ಸ್ೇ ಲಾಕರ್ ಮತ್ತಿತರ ಗೃಹೋಪಯೋಗಿ ವಸ್ತುಗಳು ಸೇರಿವೆ. ಬೆಂಗಳೂರು ಆವೃತ್ತಿಯ ಓದುಗರಿಗೆ ಬಂಪರ್ ಬಹುಮಾನವಾಗಿ ಒಂದು ಕಾರು, ಒಂದು ಬೈಕು , ಒಂದು 32 ಇಂಚು ಎಲ್‌ಇಡಿ ಟಿವಿ,  ಒಂದು ರೆಫ್ರಿಜಿರೇಟರ್, ಒಂದು ವಾಷಿಂಗ್ ಮೆಷಿನ್, ಒಂದು ಸೇಫ್ ಲಾಕರ್, ಎರಡು ವೆಟ್ ಗ್ರೈಂಡರ್, ಎರಡು ಟ್ರಾಲಿ ಬ್ಯಾಗ್ ಇನ್ನಿತರೆ 700ಕ್ಕೂ ಹೆಚ್ಚಿನ ಗೃಹಪಯೋಗಿ ವಸ್ತುಗಳು ಬಹುಮಾನವಾಗಿ ಓದುಗರಿಗೆ ದೊರಕಿವೆ.

ವಿಜಯವಾಣಿ ಓದಿ ಬಹುಮಾನ ಗೆದ್ದ ಅದೃಷ್ಟವಂತರು ಕಳೆದ ಆ.2 ರಿಂದ ನ.14ರವರೆಗೆ ಪತ್ರಿಕೆಯಲ್ಲಿ 70 ಸಾಮಾನ್ಯ ಕೂಪನ್ ಹಾಗೂ 10 ಮೆಗಾ ಕೂಪನ್ ಪ್ರಕಟಿಸಲಾಗಿತ್ತು. ಇವುಗಳಲ್ಲಿ 45 ಸಾಮಾನ್ಯ ಕೂಪನ್ ಹಾಗೂ 5 ಮೆಗಾ ಕೂಪನ್ ಸಂಗ್ರಹಿಸಿ ನಿಗದಿತ ನಮೂನೆಯಲ್ಲಿ ಅಂಟಿಸಿ ನ.15 ರಿಂದ ನ.30ರೊಳಗೆ ವಿಜಯವಾಣಿ ಕಚೇರಿಗೆ ತಲುಪಿಸಲು ಅವಕಾಶ ನೀಡಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚಿನ ಓದುಗರು ತಮ್ಮ ಅದೃಷ್ಟ ಪರೀಕ್ಷೆಗೆ ಕೂಪನ್‌ಗಳನ್ನು ಕಳುಹಿಸಿದ್ದರು. ಇವುಗಳಲ್ಲಿ ಒಟ್ಟು 374 ಅದೃಷ್ಟಶಾಲಿಗಳು ವಿವಿಧ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಬಂಪರ್ ಬಹುಮಾನ ಕಾರು, ಬೈಕು, ಫ್ರಿಜ್, ಎಸಿ, ಲ್ಯಾಪ್‌ಟಾಪ್, 2 ಓವೆನ್, 2 ಮಿಕ್ಸಿ ಸೇರಿ ಒಟ್ಟು 374 ವಿವಿಧ ಗೃಹೋಪಯೋಗಿ ವಸ್ತುಗಳನ್ನು ಬಹುಮಾನವಾಗಿ ನೀಡಲಾಗಿದೆ.
"ಯಾವುದೇ ಶಿಫಾರಸು, ಪಕ್ಷಪಾತವಿಲ್ಲದೆ ಪಾರದರ್ಶಕವಾಗಿ ಬಹುಮಾನಕ್ಕೆ ಓದುಗರನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆಯಲ್ಲಿ ಅದೃಷ್ಟವೇ ಪ್ರಧಾನ ಅಂಶ. ಇತ್ತೀಚೆಗೆ ಪತ್ರಿಕೆ ಓದುಗರು ಕಡಿಮೆಯಾಗುತ್ತಿದ್ದು, ಅಂತಹವರನ್ನು ಸೆಳೆಯುವುದಕ್ಕೆ ವಿಜಯವಾಣಿ ಉತ್ತಮ ಯೋಜನೆ ರೂಪಿಸಿದೆ. ಪತ್ರಿಕೆ ಓದುವುದರಿಂದ ಭಾಷೆಯ ಮೇಲೆ ಹಿಡಿತ, ಜ್ಞಾನ ಹೆಚ್ಚಾಗುತ್ತದೆ. ನಾವು ಪಿಯುಸಿ ಹಂತದಲ್ಲಿ ನಿತ್ಯ ಪತ್ರಿಕೆ ಓದುತ್ತಿದ್ದುದು ಉನ್ನತ ಅಧ್ಯಯನಕ್ಕೆ ಸಹಾಯವಾಯಿತು. ಪೋಷಕರು ತಮ್ಮ ಮಕ್ಕಳಿಗೆ ದಿನಪತ್ರಿಕೆ ಓದಲು ಪ್ರೇರಣೆ ನೀಡಬೇಕು."-ಬಿ.ಶಿವಸ್ವಾಮಿ, ಕೆಎಂಎಫ್ ಎಂ.ಡಿ.
"ಟಿವಿ ಮತ್ತಿತರ ಮಾಧ್ಯಮಗಳಿಂದ ಪಡೆದ ಜ್ಞಾನ ದೀರ್ಘಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಪತ್ರಿಕೆಗಳಲ್ಲಿ ಓದಿ ಪಡೆದ ಜ್ಞಾನ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ನಾನು ರಂಗಭೂಮಿಗೆ ಪ್ರವೇಶ ಮಾಡಿದಾಗ ಹಿರಿಯರು ಪ್ರತಿದಿನ ಕನ್ನಡ ದಿನಪತ್ರಿಕೆಯನ್ನು ಬಾಯಿಬಿಟ್ಟು ಓದುವಂತೆ ಸಲಹೆ ಮಾಡಿದರು. ಇದರಿಂದ ಭಾಷೆಯ ಮೇಲಿನ ಹಿಡಿತ, ಸ್ಪಷ್ಟ ಉಚ್ಛಾರಣೆ ಸಾಧ್ಯವಾಯಿತು. ಓದುಗರಿಗೆ ಸದಭಿರುಚಿ ಮೂಡಿಸುವ ಕಾರ್ಯಕ್ರಮ ರೂಪಿಸಿದ್ದಕ್ಕಾಗಿ ವಿಜಯವಾಣಿ ಪತ್ರಿಕೆಗೆ ಅಭಿನಂದನೆಗಳು"-ಪ್ರಮೋದ್, ನಾಯಕ ನಟ