ಜಿಲ್ಲೆ

ಐದಾರು ನಿರ್ಣಯಗಳಷ್ಟೇ: ಮನು ಬಳಿಗಾರ ಆಶಯ

ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇವಲ ಐದರಿಂದ ಆರು ನಿರ್ಣಯಗಳನ್ನಷ್ಟೇ ಅಂಗೀಕರಿಸಬೇಕೆಂಬ ಬಯಕೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ ವ್ಯಕ್ತಪಡಿಸಿದ್ದಾರೆ.ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗೆ ಪರಿಸರದಲ್ಲಿ ಬುಧವಾರ ಆರಂಭವಾಗ ಲಿರುವ ಮೂರು ದಿನದ ಅಕ್ಷರ ಜಾತ್ರೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಅವರು ವಿಜಯವಾಣಿ ಜತೆ ಮನಬಿಚ್ಚಿ ಮಾತನಾಡಿದರು. ಗುರುವಾರ (ಫೆ.6) ಕಲಬುರಗಿಯಲ್ಲಿ ನಡೆಯುವ ಕಸಾಪ ಕಾರ್ಯಕಾರಿಣಿಯಲ್ಲಿ ಯಾವ ನಿರ್ಣಯ ಅಂಗೀಕರಿಸಬೇಕೆಂಬ ಬಗ್ಗೆ ನಿರ್ಧರಿಸಲಾಗುವುದು. ಹಿಂದಿನ ಸಮ್ಮೇಳನಗಳಲ್ಲಿ ಸ್ವೀಕರಿಸಿರುವ ಪರಿಷತ್​ಗೆ ಸೇರಿದ ಎಲ್ಲ ನಿರ್ಣಯಗಳು ಜಾರಿಗೆ ಬಂದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿರುವ ನಿರ್ಣಯಗಳು ಕಾನೂನು ತೊಡಕಿನಿಂದ ಜಾರಿ ಆಗಿರಲಿಕ್ಕಿಲ್ಲ. ಈ ಸಮ್ಮೇಳನ ನಂತರ ನಾನು ಮತ್ತು ಸಮ್ಮೇಳನಾಧ್ಯಕ್ಷರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ಎಲ್ಲ ನಿರ್ಣಯ ಜಾರಿಗೊಳಿಸಲು ಆಗ್ರಹಿಸುತ್ತೇವೆ ಎಂದು ತಿಳಿಸಿದರು.

# ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಪ್ರಾತಿನಿಧ್ಯವೇ ಸಿಗುತ್ತಿಲ್ಲ. ಈ ಬಗ್ಗೆ ಸಮ್ಮೇಳನದಲ್ಲಿ ಏನು ಕ್ರಮ ಕೈಗೊಳ್ಳುತ್ತೀರಿ?

ಬ್ಯಾಂಕಿಂಗ್, ಯುಪಿಎಸ್​ಸಿ ಸೇರಿ ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮೊದಲು ಕನ್ನಡದಲ್ಲಿ ಬರೆಯಲು ಅವಕಾಶವಿತ್ತು. ಈಗ ಇಲ್ಲ. ಇದರಿಂದಾಗಿ ಕರ್ನಾಟಕದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಬಹುತೇಕ ಇಲಾಖೆಗಳಿಗೆ ಅನ್ಯ ರಾಜ್ಯಗಳವರೇ ಬರುತ್ತಿದ್ದು, ಕನ್ನಡಿಗರ ಮೇಲೆ ದರ್ಪ ತೋರುತ್ತಿದ್ದಾರೆ. ಇದನ್ನು ತಪ್ಪಿಸಬೇಕೆಂದರೆ ನಮ್ಮಲ್ಲಿ ಎಲ್ಲ ಕಡೆ ಕನ್ನಡಿಗರೇ ಇರಬೇಕು. ಅಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಅವಕಾಶ ನೀಡಬೇಕೆಂದು ಕೇಂದ್ರದ ಮೇಲೆ ಸಮ್ಮೇಳನ ಮೂಲಕ ಒತ್ತಡ ಹೇರಲಾಗುವುದು.

# ಆಂಧ್ರಪ್ರದೇಶ ಸರ್ಕಾರ ಅಲ್ಲಿನ ಕನ್ನಡ ಶಾಲೆಗಳನ್ನು ಮುಚ್ಚಲು ನಿರ್ಧರಿಸಿರುವ ಬಗ್ಗೆ?

ಯಾವುದೇ ಕಾರಣಕ್ಕೂ ಈ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ. 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಎಲ್ಲ ಭಾಷೆಗಳನ್ನು ಗೌರವಿಸುವ ಉದಾರತೆ ಕನ್ನಡಿಗರಲ್ಲಿದೆ. ಆದರೆ ಅನ್ಯ ರಾಜ್ಯಗಳಲ್ಲಿರುವ ನಮ್ಮ ಭಾಷಿಕರಿಗೂ ಎಲ್ಲ ರೀತಿಯ ಸೌಲಭ್ಯ ಮತ್ತು ಗೌರವ ಸಿಗಬೇಕು ಎಂಬುದೇ ನಮ್ಮ ಆಶಯ. ಒಂದು ರಾಜ್ಯದಲ್ಲಿ ಕನ್ನಡವೇ ಕಲಿಸುವುದಿಲ್ಲ ಎನ್ನುವುದು, ಮತ್ತೊಂದು ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗವೇ ಕೊಡುವುದಿಲ್ಲ ಎಂಬ ಬೆದರಿಕೆ ಹಾಕಿದರೆ ಸೌಹಾರ್ದತೆ ಕಾಪಾಡಲು ಸಾಧ್ಯವೇ ಎಂಬುದನ್ನು ಅನ್ಯ ರಾಜ್ಯಗಳವರು ಅರಿತುಕೊಳ್ಳಬೇಕು.

# ಸಮ್ಮೇಳನ ಯಶಸ್ಸಿನ ಬಗ್ಗೆ ನಿಮ್ಮ ಅಭಿಪ್ರಾಯ?

ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಎಲ್ಲ ಸಾಹಿತಿಗಳು ಕಲಬುರಗಿ ಕಡೆ ಮುಖ ಮಾಡಿದ್ದಾರೆ. ಈ ಸಮ್ಮೇಳನ ಹಿಂದಿನವುಗಳಿಗಿಂತ ಯಶಸ್ವಿಯಾಗಿಸಬೇಕೆಂಬ ಹಂಬಲ ನನ್ನದು. ನಾನು ಅಧ್ಯಕ್ಷನಾದ ಬಳಿಕ ಮೈಸೂರು, ರಾಯಚೂರು, ಧಾರವಾಡಗಳಲ್ಲಿ ಸಮ್ಮೇಳನ ಮಾಡಿದ್ದೇನೆ. ಇದು 4ನೆಯದ್ದು. ಬಹುನಿರೀಕ್ಷೆ ಇಟ್ಟುಕೊಂಡು ಬರುವವರಿಗೆ ಊಟ ಸೇರಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಿ ಎಂಬ ಸಲಹೆಯನ್ನು ಸಂಗಾತಿಗಳಿಗೆ ನೀಡಿದ್ದೇನೆ. ಐದು ಲಕ್ಷ ಜನ ಸೇರುವ ನಿರೀಕ್ಷೆ ಇದೆ.

# ಈ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ಕೊರತೆ ಕಾಡಿತ್ತಲ್ಲವೇ?

ಸಮ್ಮೇಳನಕ್ಕೆ 14 ಕೋಟಿ ರೂ. ಖರ್ಚಾಗಬಹುದು. ಉಪಮುಖ್ಯಮಂತ್ರಿಯೂ ಆಗಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಮುಖ್ಯಮಂತ್ರಿಯವರಿಗೆ ಮನವಿ ಮಾಡಿ 10 ಕೋಟಿ ರೂ. ಕೊಡಿಸಿದ್ದಾರೆ. ಕಲಬುರಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದವರು ಮೂರು ಕೋಟಿ ರೂ. ಚೆಕ್ ನೀಡಿದ್ದಾರೆ. ಅಲ್ಲಲ್ಲಿ ಸಹಾಯಗಳೂ ಬರುತ್ತಿವೆ. ಹೀಗಾಗಿ ಹಣಕಾಸಿನ ಕೊರತೆ ಆಗುವುದಿಲ್ಲವೆಂಬ ನಂಬಿಕೆ ನನ್ನದು

ಬುಧವಾರದಿಂದ 3 ದಿನ ನೃಪತುಂಗನ ನಾಡು ಕಲಬುರಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ ಮಾಡಲಾಗಿದೆ. ಕನ್ನಡದ ತೇರನೆಳೆಯಲು ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಾರೆ. | ಡಾ.ಮನು ಬಳಿಗಾರ ಕಸಾಪ ಅಧ್ಯಕ್ಷ

| ವಾದಿರಾಜ ವ್ಯಾಸಮುದ್ರ