ಜಿಲ್ಲೆ

ವಿಜಯವಾಣಿ ಫಾಲೋ ಅಪ್; ಕೆಲಗೇರಿ ರಾಜಕಾಲುವೆಗೆ ಅಧಿಕಾರಿಗಳ ಭೇಟಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೆಲಗೇರಿ ಕೆರೆಯ ರಾಜಕಾಲುವೆಯುದ್ದಕ್ಕೂ ಹೂಳು ತುಂಬಿ ಜಲಾವೃತವಾಗುವ ಭೀತಿಯ ಕುರಿತು `ವಿಜಯವಾಣಿ' ದಿನಪತ್ರಿಕೆ ಜೂ. 4ರಂದು ಪ್ರಕಟಿಸಿದ್ದ `ನಿವಾಸಿಗಳ ನಿದ್ದೆಗೆಡಿಸಿದ ರಾಸಾಯನಿಕ ನೊರೆ' ಎಂಬ ವಿಶೇಷ ವರದಿ ಪ್ರಕಟಿಸಿತ್ತು. ಎಚ್ಚೆತ್ತ ಅಽಕಾರಿಗಳು, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಮಸ್ಯೆ ಇತ್ಯರ್ಥಕ್ಕೆ ಅಗತ್ಯ ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ನಗರದ ಕೆಲಗೇರಿ ಕೆರೆಗೆ ಹೊಂದಿಕೊ0ಡ ರಾಜಕಾಲುವೆಯ ನೀರು ವರ್ಷವಿಡೀ ಹರಿಯುತ್ತದೆ. ಕಾಲುವೆಯುದ್ದಕ್ಕೂ ಆಳೆತ್ತರ ಕಸ ಬೆಳೆದು ಹೂಳು ತುಂಬಿ ಮಳೆಗಾಲದಲ್ಲಿ ನೀರು ಮುಂದೆ ಸಾಗದೆ ಸುತ್ತಲಿನ ಗುರುಕೃಪಾನಗರ, ಹಿರೇಮಠ ಲೇಔಟ್, ಬಸವ ಕಾಲನಿ ಪ್ರದೇಶಗಳು ಜಲಾವೃತಗೊಳ್ಳುತ್ತವೆ. ಚಿಕ್ಕಮಲ್ಲಿಗವಾಡ ಗ್ರಾ.ಪಂ. ಜನಪ್ರತಿನಿಽಗಳಿಗೆ ಹೂಳೆತ್ತಲು ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಈ ಕುರಿತು ವಿಜಯವಾಣಿ ವರದಿ ಪ್ರಕಟಿಸಿತ್ತು.

ವರದಿಯ ನಂತರ ಎಚ್ಚೆತ್ತ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹಾಗೂ ಚಿಕ್ಕಮಲ್ಲಿಗವಾಡ ಗ್ರಾ.ಪಂ. ಅಧ್ಯಕ್ಷೆ ಸಾವಕ್ಕ ಶಿರೂರ ಹಾಗೂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗುರುಕೃಪಾನಗರ ನಿವಾಸಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.