ಜಿಲ್ಲೆ

ಜಲ, ಏರೋಸ್ಪೇಸ್​, ನೀತಿಗಳಿಗೆ ಅಸ್ತು: ಮಹತ್ವದ ನಿರ್ಣಯಗಳು

suchetana

ರಾಜ್ಯ ಸಚಿವ ಸಂಪುಟ ಸಭೆಯು ಶುಕ್ರವಾರ ಕೆಲ ಮಹತ್ವದ  ನಿರ್ಣಯಗಳನ್ನು ಕೈಗೊಂಡಿದೆ. ನೀರು ವ್ಯರ್ಥವಾಗುವುದನ್ನು ತಡೆದು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಪ್ರಮುಖ ಗುರಿ ಹೊಂದಿರುವ ಜಲ ನೀತಿ&2021ಕ್ಕೆ ಅನುಮೋದನೆ ನೀಡಿದೆ. 2025ರ ವೇಳೆಗೆ ಕೃಷಿಗಿಂತ ಕೃಷಿಯೇತರ ಬೇಡಿಕೆ ಮೂರು ಪಟ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲದ ಸೂಕ್ತ ನಿರ್ವಹಣೆಗೆ, ರಾಜ್ಯ ಜಲ ಸಂಪನ್ಮೂಲ ಪ್ರಾಧಿಕಾರ ರಚನೆಗೆ ಸಂಪುಟ ತೀರ್ಮಾನಿಸಿದೆ.

ನೂತನ ಜಲ ನೀತಿ ಮೇಲ್ನೋಟಕ್ಕೆ ಉತ್ತಮವಾಗಿಯೇ ಗೋಚರಿಸುತ್ತದೆ. ಸೂಕ್ತ ಕ್ರಿಯಾಯೋಜನೆ ರೂಪಿಸಿ, ಅಗತ್ಯ ಸಂಪನ್ಮೂಲ ಒದಗಿಸಿ ವಾಸ್ತವ ನೆಲೆಯಲ್ಲಿ ಕಾರ್ಯಗತಗೊಳಿಸುವ ಸವಾಲನ್ನು ಎದುರಿಸಲು ಸರ್ಕಾರ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತದೆ ಎಂಬುದನ್ನು ಈ ನೀತಿಯ ಯಶಸ್ಸು ಅವಲಂಬಿಸಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆ ಉದ್ದೇಶಿತ ಡಾ. ಡಿ.ಎಂ.ನಂಜುಂಡಪ್ಪ ವರದಿ ಪುನರಾವಲೋಕಿಸಲು ಕೂಡ ಸಂಪುಟ ಸಭೆ ತೀರ್ಮಾನಿಸಿದೆ. 20 ವರ್ಷಗಳ ಹಿಂದಿನ ನಂಜುಂಡಪ್ಪ ವರದಿ ಪ್ರಕಾರ 114 ತಾಲೂಕುಗಳು ಹಿಂದುಳಿದ ಪಟ್ಟಿಯಲ್ಲಿದ್ದವು. ಪ್ರಸ್ತುತ ವಸ್ತುಸ್ಥಿತಿ ಅಧ್ಯಯನ ನಡೆಸಿ ಈ ಪಟ್ಟಿ ಪರಿಷ್ಕರಿಸಲು ಉದ್ದೇಶಿಸಲಾಗಿದ್ದು, ಇದರ ಜವಾಬ್ದಾರಿಯನ್ನು ಆರು ಸಚಿವರು, ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಗೆ ವಹಿಸಲಾಗಿದೆ. ನಂಜುಂಡಪ್ಪ ಸಮಿತಿಯು 2002ರಲ್ಲೇ ವರದಿ ನೀಡಿದ್ದರೂ ಅದರ ಅನುಷ್ಠಾನ ಆರಂಭವಾಗಿದ್ದು 2007&08ರಲ್ಲಿ. ಅನುಷ್ಠಾನದ ಅವಧಿ 8 ವರ್ಷಗಳಿಗೆ ನಿಗದಿಯಾಗಿದ್ದರೂ ಮತ್ತೆ 5 ವರ್ಷ ವಿಸ್ತರಿಸಲಾಯಿತು.

ಹಿಂದುಳಿದ ತಾಲೂಕುಗಳಲ್ಲಿ 31,000 ಕೋಟಿ ರೂಪಾಯಿ ಹೂಡಿಕೆ ಮಾಡುವಂತೆ ನಂಜುಂಡಪ್ಪ ಸಮಿತಿ ಸಲಹೆ ನೀಡಿದ್ದು, ಅದರಂತೆ ಶೇ. 92ರಷ್ಟು ಖರ್ಚು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, 2007&08ರಲ್ಲಿ ಬಜೆಟ್​ ಗಾತ್ರ 54,465 ಕೋಟಿ ರೂಪಾಯಿ ಆಗಿತ್ತು. 2022&23ರ ಬಜೆಟ್​ ಗಾತ್ರ 2 ಲಕ್ಷ 65 ರೂಪಾಯಿ ಆಗಿದೆ. ಅಂದರೆ, ಸರಿಸುಮಾರು 5 ಪಟ್ಟು ಹೆಚ್ಚಳವಾಗಿದೆ. ಈ ಏರಿಕೆಗೆ ಅನುಸಾರವಾಗಿ ಹಿಂದುಳಿದ ತಾಲೂಕುಗಳಿಗೆ ಸಂಪನ್ಮೂಲ ಒದಗಿಸಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇನ್ನು ಗುರುತಿಸಲಾಗುವ ಹಿಂದುಳಿದ ತಾಲೂಕುಗಳಿಗೆ 2023&24 ರಿಂದ 5 ವರ್ಷಗಳವರೆಗೆ ಪ್ರತಿ ವರ್ಷ 3,000 ಕೋಟಿ ರೂ. ಅನುದಾನ ನೀಡಲು ಸರ್ಕಾರ ಉದ್ದೇಶಿಸಿದೆ. ಇದು ಪ್ರತಿವರ್ಷ ಬಜೆಟ್​ನಲ್ಲಿ ಒದಗಿಸಲಾಗುವ ಅನುದಾನದಲ್ಲಿಯೇ ಸೇರಿರುತ್ತದೆಯೋ ಅಥವಾ ಹೆಚ್ಚುವರಿಯಾಗಿ ಒದಗಿಸಲಾಗುತ್ತದೋ ಎಂಬುದು ಸ್ಪಷ್ಟವಾಗಬೇಕಿದೆ.

ಅಂತರಿಕ್ಷಯಾನ ಮತ್ತು ರಕ್ಷಣಾ ಸಲಕರಣೆಗಳ ಉತ್ಪಾದನೆಯಲ್ಲಿ ಕರ್ನಾಟಕವನ್ನು ದೇಶದ ಪ್ರಶಸ್ತ ತಾಣವಾಗಿ ರೂಪಿಸುವ ಉದ್ದೇಶದೊಂದಿಗೆ ಏರೋಸ್ಪೇಸ್​ ಮತ್ತು ರಕ್ಷಣಾ ನೀತಿಗೂ ಸಂಪುಟ ಸಮ್ಮತಿ ನೀಡಿದೆ. 5 ವರ್ಷಗಳ ಅವಧಿಯಲ್ಲಿ 45 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಿ, 60 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಹೂಡಿಕೆಗೆ ಅನುಗುಣವಾಗಿ ಸಹಾಯಧನ, ವಿದ್ಯುತ್​ ತೆರಿಗೆ ವಿನಾಯಿತಿ ಮುಂತಾದ ಪ್ರೋತ್ಸಾಹಕಗಳನ್ನು ಒದಗಿಸಲು ಉದ್ದೇಶಿಸಿರುವುದು ಸೂಕ್ತ ನಿರ್ಧಾರ ಎನ್ನಬಹುದು. ಈಗಾಗಲೇ ವಿದೇಶಿ ಬಂಡವಾಳ ಹೂಡಿಕೆ, ಸ್ಟಾರ್ಟಪ್​ಗಳ ಹೂಡಿಕೆಯಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದ್ದು, ಸೂಕ್ತ ರೀತಿಯಲ್ಲಿ ಈ ನೀತಿ ಜಾರಿಗೊಳಿಸಿದರೆ ಉದ್ದೇಶಿತ ಗುರಿ ತಲುಪಬಹುದಾಗಿದೆ.