ಜಿಲ್ಲೆ

ನಾರಿಶಕ್ತಿಗೆ ವಿಜಯವಾಣಿ ದಿಗ್ವಿಜಯ ನ್ಯೂಸ್ ನಮನ; ಐವರು ಅನುಪಮ ಸಾಧಕಿಯರಿಗೆ ವರ್ಷದ ಮಹಿಳೆ-2020 ಪ್ರಶಸ್ತಿ

ಬೆಂಗಳೂರು: ಪ್ರತೀ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಸಾಧಕ ಮಹಿಳೆಯರನ್ನು ಪುರಸ್ಕರಿಸುವ ಮೂಲಕ ನಾರಿಶಕ್ತಿಯನ್ನು ಗುರುತಿಸುವ, ಗೌರವಿಸುವ, ಸಂಭ್ರಮಿಸುವ ವಿಆರ್​ಎಲ್ ಮೀಡಿಯಾ ಬಳಗದ ಅನನ್ಯ ಸಂಪ್ರದಾಯ ಮುಂದುವರಿದಿದೆ.

ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆಗೈದ ಐವರು ಸಾಧಕ ಶ್ರೇಷ್ಠರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಕೊಡಮಾಡುವ ವರ್ಷದ ಮಹಿಳೆ 2020 ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಸಾವಿರಾರು ಮಹಿಳೆಯರನ್ನು ದೇವದಾಸಿ ಪದ್ಧತಿಯಿಂದ ವಿಮುಕ್ತಿಗೊಳಿಸಿ, ನವಜೀವನ ಕಲ್ಪಿಸಿರುವ ರಾಯಚೂರಿನ ಮಸ್ಕಿಯ ಮೋಕ್ಷಮ್ಮ, ಕುಸ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪೂರ್ವ ಸಾಧನೆ ಮಾಡಿರುವ ಗದಗದ ಪ್ರೇಮಾ ಹುಚ್ಚಣ್ಣವರ, ಸಾಲ ಮಾಡಿ ಮೂರು ಹಸು ಖರೀದಿಸಿ, ಕೃಷಿಯಲ್ಲಿ ಒಂದೊಂದೇ ಸಾಧನೆ ಮಾಡುತ್ತ ಕೃಷಿ ತಜ್ಞೆಯೇ ಆಗಿರುವ ಮಂಡ್ಯ ಜಿಲ್ಲೆ ಮದ್ದೂರಿನ ಪುಟ್ಟಮ್ಮ, ಘನತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಕಾಳಜಿ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ 84 ವರ್ಷದ ಬೆಂಗಳೂರಿನ ಅಲ್ಮಿತ್ರಾ ಪಟೇಲ್, ಸೋಜುಗಾದ ಸೂಜಿಮಲ್ಲಿಗೆ ಹಾಡಿನ ಮೂಲಕ ಪ್ರಖ್ಯಾತರಾಗಿರುವ ಮಧುರ ಕಂಠದ ಗಾಯಕಿ ಅನನ್ಯ ಭಟ್ ಈ ಬಾರಿಯ ವಿಜಯವಾಣಿ- ದಿಗ್ವಿಜಯ ವರ್ಷದ ಮಹಿಳೆ ಪ್ರಶಸ್ತಿಗೆ ಭಾಜನರಾಗಿರುವ ಸಾಧಕರು.

ತಮ್ಮ ಆಯ್ಕೆ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಸಾವಿರಾರು ಜನರಿಗೆ ಮಾದರಿಯಾಗಿರುವ ಈ ಅಪರೂಪದ ಸಾಧಕಿಯರನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಎಂಡಿ ಆನಂದ ಸಂಕೇಶ್ವರ ಅಭಿನಂದಿಸಿದ್ದಾರೆ.

ಭಾನುವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನಿಗದಿಯಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೇಶಾದ್ಯಂತ ಹಬ್ಬುತ್ತಿರುವ ಸಾಂಕ್ರಾಮಿಕ ರೋಗಗಳ ಆತಂಕದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಪ್ರಶಸ್ತಿ ಪ್ರದಾನದ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು.