ವಿಜಯಪುರ: ಪ್ರತಿ ಶಾಲೆಯ ನೂರು ಗಜಗಳ (ಯಾರ್ಡ್) ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧವಿದ್ದು, ಇಂತಹ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರಿದರೆ ಅಂಥವರ ಮೇಲೆ ದೂರು ನೀಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು. ಶಾಲೆ ಆವರಣದ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವವರ ಬಗ್ಗೆ ಆಯಾ ಶಾಲಾ ಶಿಕ್ಷಕರಿಂದ ಛಾಯಾಚಿತ್ರ ಸಹಿತ ಪರಿಶೀಲನಾ ವರದಿ ಪಡೆದು ಈ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಅದರಂತೆ ಕೊಟ್ಪಾ-2003 ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು. ಈ ಕಾನೂನಿನ ರೀತ್ಯ ತಂಬಾಕು ಉತ್ಪನ್ನ ಸೇವನೆಯಿಂದ ಆಗುವ ಹಾನಿಯ ಬಗ್ಗೆ ಸಾರ್ವಜನಿಕರಲ್ಲಿ ಮನವರಿಕೆ ಮಾಡುವ ಜತೆಗೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಮಹಾನಗರ ಪಾಲಿಕೆ, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣದ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಆರೋಗ್ಯ, ತಂಬಾಕು ನಿಯಂತ್ರಣ ಘಟಕ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು.
ಕೊಟ್ಪಾ ಕಾಯ್ದೆಯ ಸೆಕ್ಷನ್ 4 ರನ್ವಯ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧವಿದ್ದು, ಈ ನಿಯಮ ಪಾಲಿಸದ ವ್ಯಕ್ತಿಗೆ 200 ರೂ. ದಂಡ ಹಾಗೂ ಮಾಲೀಕರು, ವ್ಯವಸ್ಥಾಪಕರು ಅಥವಾ ಅಧಿಕೃತ ಅಧಿಕಾರಿಗೆ ಸಾರ್ವಜನಿಕ ಪ್ರದೇಶದಲ್ಲಿ ನಡೆದ ನಿಯಮ ಉಲ್ಲಂಘನೆಗಳ ಸಂಖ್ಯೆಗೆ ಸರಿ ಸಮಾನವಾಗಿ ದಂಡ ವಿಧಿಸಲಾಗುವುದು.
ಅದರಂತೆ ಸೆಕ್ಷನ್ 5 ರನ್ವಯ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹಿರಾತುಗಳ ನಿಷೇಧ ನಿಯಮದ ಮೊದಲ ಉಲ್ಲಂಘನೆಗೆ 2 ವರ್ಷ ಜೈಲು ಶಿಕ್ಷೆ ಹಾಗೂ 1000 ರೂ.ಗಳ ದಂಡ ವಿಧಿಸಲಾಗುವುದು. ಎರಡನೆ ಉಲ್ಲಂಘನೆಗೆ 5 ವರ್ಷ ಜೈಲು ಶಿಕ್ಷೆ ಹಾಗೂ 5000 ರೂ.ಗಳ ದಂಡ, ಸೆಕ್ಷನ್ 6 ರನ್ವಯ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಶಾಲೆ- ಕಾಲೇಜುಗಳ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದರ ನಿಷೇಧ 200 ರೂ.ರವರೆಗೆ ದಂಡ ವಿಧಿಸಲಾಗುವುದು ಎಂದರು.
ಸೆಕ್ಷನ್ -7,8 ಮತ್ತು 9 ರನ್ವಯ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ನಿರ್ದಿಷ್ಟ ಆರೋಗ್ಯದ ಎಚ್ಚರಿಕೆಗಳ ಸಂದೇಶಗಳಿಲ್ಲದ ಮಾರುವುದು ನಿಷೇಧವಿದ್ದು, ಇದರನ್ವಯ ಉತ್ಪಾದಕರಿಗೆ ಮೊದಲ ಉಲ್ಲಂಘನೆಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಲಾಗುವುದು. ಎರಡನೇ ಉಲ್ಲಂಘನೆಗೆ 5 ವರ್ಷ ಜೈಲು ಶಿಕ್ಷೆ 10,000 ರೂ. ದಂಡ ವಿಧಿಸಲಾಗುವುದು.
ಮಾರಾಟ, ಚಿಲ್ಲರೆ ವ್ಯಾಪಾರಕ್ಕಾಗಿ ಮೊದಲ ಉಲ್ಲಂಘನೆಗೆ 2 ವರ್ಷ ಜೈಲು ಶಿಕ್ಷೆ 1000 ರೂ. ಗಳ ದಂಡ ಹಾಗೂ ಎರಡನೇ ಉಲ್ಲಂಘನೆಗಾಗಿ 5 ವರ್ಷ ಜೈಲು ಶಿಕ್ಷೆ ಹಾಗೂ 3000 ರೂ.ಗಳ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಕರೊನಾ ಹಿನ್ನೆಲೆಯಲ್ಲಿ ಕರೊನಾ ನಿಯಂತ್ರಣ ಕಾರ್ಯಕ್ರಮಗಳ ಜತೆಗೆ ಡೆಂೆ, ಚಿಕೂನ್ ಗುನ್ಯಾ, ಡಿಪ್ಥೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮಗಳನ್ನು ಸಹ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಂದ್ರ ಕಾಪ್ಸೆ, ತಂಬಾಕು ನಿಷೇಧ ಘಟಕದ ಅಧಿಕಾರಿ ಬಿರಾದಾರ ಮತ್ತಿತರರಿದ್ದರು.