ವಿಜಯಪುರ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೈಟೆನ್ಷನ್ ವಿದ್ಯುತ್ ಟವರ್ ಏರಿ ಹೈಡ್ರಾಮ ಸೃಷ್ಟಿಸಿದ ಘಟನೆ ನಗರ ಹೊರ ವಲಯದ ಬೇಗಂ ತಲಾಬ್ ಬಳಿ ಸೋಮವಾರ ಸಂಜೆ ನಡೆದಿದೆ.
ಇಲ್ಲಿನ ರೇಡಿಯೋ ಕೇಂದ್ರದ ಸಮೀಪದ ಕೌಜಲಗಿ ತಾಂಡಾ ನಿವಾಸಿ ರವಿ ಪಾಂಡು ರಾಠೋಡ ಎಂಬಾತನೇ ಟವರ್ ಏರಿದ ವ್ಯಕ್ತಿ.
ರವಿ ರಾಠೋಡ ಸಾಲ ಮಾಡಿಕೊಂಡಿದ್ದ. ಸಾಲಗಾರರು ಕಿರುಕುಳ ನೀಡುತ್ತಿದ್ದಾರೆ ಎಂದು ಬೇಸತ್ತು ಕುಡಿದ ಮತ್ತಿನಲ್ಲಿ ಇಲ್ಲಿನ ಬೇಗಂ ತಾಲಾಬ್ ಬಳಿಯ ನಗರ ಪ್ರದೇಶಕ್ಕೆ 110 ಕೆವಿ ಸಾಮರ್ಥ್ಯ ವಿದ್ಯುತ್ ಪೂರೈಸುವ ಪ್ರಮುಖ ಮಾರ್ಗದ ಟವರ್ ಹತ್ತಿದ್ದ.
ಮಾಹಿತಿ ಅರಿತ ಹೆಸ್ಕಾಂ ಸಿಬ್ಬಂದಿ ಹೈಟೆನ್ಷನ್ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದರು. ಅದರಿಂದ ಕೆಲ ಗಂಟೆಗಳ ಕಾಲ ನಗರ ಪ್ರದೇಶದಲ್ಲಿ ಕೆಲಕಾಲ ವಿದ್ಯುತ್ ಇಲ್ಲದಂತಾಗಿ ಜನರು ಪರದಾಡುವಂತಾಯಿತು.
ಸಾರ್ವಜನಿಕರಿಂದ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಜಲನಗರ ಠಾಣೆ ಪೊಲೀಸರು, ಟವರ್ ಮೇಲಿದ್ದ ರವಿಯನ್ನು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಸಹ ಬಾಯಿಗೆ ಬಂದಂತೆ ಬೈಯುತ್ತಾ ಹುಚ್ಚಾಟ ಮುಂದುವರಿಸಿದ.
ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಟವರ್ ಮೇಲೆ ಹತ್ತಿ ಹಗ್ಗದ ಬಲೆ ಹಾಕುವ ಮೂಲಕ ರವಿಯನ್ನು ಸುರಕ್ಷಿತವಾಗಿ ಕೆಳಗಿಸಿ, ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ ಎಂದು ಜಲನಗರ ಠಾಣೆ ಪಿಎಸ್‌ಐ ಮಹೇಶ ಸಂಖ ತಿಳಿಸಿದ್ದಾರೆ.