ಚಡಚಣದ ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಿಸಲಾದ ಗಾಣಸಿರಿ ವೃತ್ತವನ್ನು ವಿಧಾನ ಪರಿಷತ್ ಸದಸ್ಯ ಸುನೀಲ ಪಾಟೀಲ ಉದ್ಘಾಟಿಸಿದರು. ವಿಠ್ಠಲ ಕಟಕಧೋಂಡ, ಮಲ್ಲಿಕಾರ್ಜುನ ಲೋಣಿ, ಗಿರಿಜಾನಂದ ಸ್ವಾಮೀಜಿ, ಶರಣಾನಂದ ಸ್ವಾಮೀಜಿ, ಚಿದಾನಂದ ದೇವರು ಇತರರಿದ್ದರು. 
ವಿಜಯಪುರ

ಸಿದ್ಧೇಶ್ವರ ಶ್ರೀ ಮಹಾನ್ ದಾರ್ಶನಿಕರು

ವಿಪ ಸದಸ್ಯ ಸುನೀಲಗೌಡ ಪಾಟೀಲ ಅಭಿಮತ ಗಾಣಸಿರಿ ವೃತ್ತ ಉದ್ಘಾಟನೆ

ಚಡಚಣ: ಸಿದ್ಧೇಶ್ವರ ಸ್ವಾಮೀಜಿ ಪ್ರವಚನದ ಚಾತುರ್ಯತೆಯಿಂದಲೇ ಜನಮಾನಸದಲ್ಲಿ ಜ್ಞಾನ ಬಿತ್ತಿದ ಸಿದ್ಧ ಪುರುಷರು. ನಡೆ ನುಡಿ, ಸರಳತೆಯಿಂದ ಬದುಕುವುದನ್ನು ಸಮಾಜಕ್ಕೆ ಕಲಿಸಿಕೊಟ್ಟ ತತ್ವಜ್ಞಾನಿ. ಅವರ ತೆರೆದಿಟ್ಟ ಜೀವನದಿಂದ ಇತರರ ಬದುಕಿಗೆ ದಾರಿದೀಪ ನೀಡಿದ ದಾರ್ಶನಿಕರು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಿಸಿದ ಗಾಣಸಿರಿ ವೃತ್ತ ಉದ್ಘಾಟನೆ ಹಾಗೂ ಶ್ರೀಸಿದ್ಧೇಶ್ವರ ಸ್ವಾಮೀಜಿಗಳ ಜನ್ಮ ದಿನಾಚರಣೆ ನಿಮಿತ್ತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ನೀರಾವರಿ ಸೌಲಭ್ಯಕ್ಕೆ ಒತ್ತು ನೀಡುವಂತೆ ಸಿದ್ಧೇಶ್ವರ ಶ್ರೀಗಳು ಜನಪ್ರತಿನಿಧಿಗಳಿಗೆ ಸದಾ ನೆನಪಿಸುತ್ತಿದ್ದರು. ಅವರ ಆಶಯದಂತೆ ಸಚಿವ ಎಂ.ಬಿ. ಪಾಟೀಲರು ಸಮಗ್ರ ನೀರಾವರಿಗೆ ಒತ್ತು ನೀಡಿ ಸಹಸ್ರಾರು ಹೆಕ್ಟೇರ್ ಪ್ರದೇಶಗಳನ್ನು ನೀರಾವರಿಗೆ ಒಳಪಡಿಸಿದ್ದಾರೆ ಎಂದರು.

ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಸರಳ ವ್ಯಕ್ತಿತ್ವ, ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುತ್ತಿದ್ದ ಸಿದ್ಧೇಶ್ವರ ಶ್ರೀಗಳ ಬದುಕು ಎಲ್ಲರಿಗೂ ದಾರಿ ದೀಪವಾಗಿದೆ. ಜನರಿಂದ ನಡೆದಾಡುವ ದೇವರು ಎಂಬ ಅಭಿಮಾನಕ್ಕೆ ಪಾತ್ರರಾದವರು. ಇಂದು ಅವರ ಪುಣ್ಯಸ್ಮರಣೆ ಆಚರಿಸುತ್ತಿರುವುದು ನಮ್ಮ ಸೌಭಾಗ್ಯ ಎಂದರು.

ಗಾಣಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಜೀವನದ ಸಾರಾಂಶವನ್ನು ಅತ್ಯಂತ ಸರಳವಾಗಿ ಬೋಧಿಸಿ, ಜನಸಾಮಾನ್ಯರಲ್ಲಿ ಜ್ಞಾನದ ಬುತ್ತಿ ಉಣ ಬಡಿಸಿದ ಅವರ ಚಿಂತನೆಗಳನ್ನು ಸದಾ ಸ್ಮರಿಸೋಣ ಎಂದರು. ಕನಕನಾಳ ಶಾಖಾ ಮಠದ ಗಿರಿಜಾನಂದ ಸ್ವಾಮೀಜಿ, ಚಿಕ್ಕಲಗುಂಟಿ ಶರಣಾನಂದ ಸ್ವಾಮೀಜಿ, ಕನ್ಹೇರಿಯ ಚಿದಾನಂದ ದೇವರು ಆಶೀರ್ವಚನ ನೀಡಿದರು.

ಪಪಂ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಉಪಾಧ್ಯಕ್ಷ ಇಲಾಯಿ ನದಾಫ್, ಚಡಚಣ ಮಂಡಲ ಬಿಜೆಪಿ ಅಧ್ಯಕ್ಷ ಕಾಂತುಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಭೀಮಾಶಂಕರ ಬಿರಾದಾರ, ಮುಖಂಡ ಸಂಜೀವ ಐಹೊಳ್ಳಿ, ಅಭಿನವ ಚವಾಣ್, ಬಾಬುಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಬಸುಗೌಡ ಬಿರಾದಾರ ಇತರರಿದ್ದರು.