ಇಂಡಿ: ಸಮಾಜದ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಳೆ, ಬಿಸಿಲು ಎನ್ನದೆ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದು, ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಹೇಳಿದರು.
ನಗರದ ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ನಗರಸಭೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬರೂ ಪೌರಕಾರ್ಮಿಕರ ಕೆಲಸಕ್ಕೆ ಗೌರವ ನೀಡುವ ಜತೆಗೆ ಸ್ವಚ್ಛತೆ ಕಾಪಾಡುವ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಸರ್ಕಾರ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ ಮಾತನಾಡಿ, ನಗರವನ್ನು ಸುಂದರ ಹಾಗೂ ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಶ್ರಮವೇ ಪ್ರಮುಖ. ನಗರಸಭೆ ವತಿಯಿಂದ ಪೌರಕಾರ್ಮಿಕರ ಸೌಲಭ್ಯ ಮತ್ತು ಕಲ್ಯಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಸಹ ಸ್ವಚ್ಛತಾ ಕಾರ್ಯದಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಓಂಕಾರ ಆಶ್ರಮದ ಸ್ವರೂಪಾನಂದ ಶ್ರೀಗಳು ಆಶೀರ್ವಚನ ನೀಡಿ, ಪೌರಕಾರ್ಮಿಕರು ಪರಿಶ್ರಮದಿಂದ ನಗರಗಳು ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ಹೊಂದಿವೆ. ಮಾನವ ಸೇವೆಯೇ ಮಾಧವ ಸೇವೆಯಾಗಿದ್ದು, ಪೌರಕಾರ್ಮಿಕರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಶಬ್ಬೀರ ಖಾಜಿ, ರೇಣುಕಾ ಉಟಗಿ, ಭೀಮಾಶಂಕರ ಮೂರಮನ, ಶ್ರೀಶೈಲ ಪೂಜಾರಿ, ಪ್ರವೀಣ ಸೋನಾರ, ಅಸ್ಲಮ್ ಖಾದಿಮ್ ಸಂಗೀತಾ ಕೋಳಿ, ಅನುಸೂಯಾ ಕಂಠಿಕರ, ರೇಖಾ ದರೆನ್ನವರ, ಅಜರ ಶೇಖ, ಕೃಷ್ಣಾ ರಾಠೋಡ, ವಿರೇಶ ಹಿರೇಮಠ, ಮುತ್ತು ಮುರಾಳ, ಹುಚ್ಚಪ್ಪ ಶಿವಶರಣ, ಲಕ್ಷ್ಮೀ ಕಾಲೇಭಾಗ, ಮರೆಪ್ಪ ಗುಡುಮಿ, ಶಿರಸು ಹಾದಿಮನಿ, ಮಾಳಪ್ಪ ಹೆಳವರ ಮತ್ತಿತರಿದ್ದರು.
ಇಂಡಿ ನಗರದ ಡಾ. ಬಾಬು ಜಗಜೀವನರಾಮ ಭವನದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯನ್ನು ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಉದ್ಘಾಟಿಸಿದರು. ಶಿವಾನಂದ ಪೂಜಾರಿ, ಸ್ವರೂಪಾನಂದ ಶ್ರೀಗಳು, ಶಬ್ಬೀರ ಖಾಜಿ, ರೇಣುಕಾ ಉಟಗಿ, ಭೀಮಾಶಂಕರ ಮೂರಮನ, ಶ್ರೀಶೈಲ ಪೂಜಾರಿ ಇತರರಿದ್ದರು.