ಆಲಮೇಲ: ಪಟ್ಟಣದ ಕೆಪಿಆರ್ ಸಕ್ಕರೆ ಕಾರ್ಖಾನೆಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಆಲಮೇಲ ತಾಲೂಕು ಘಟಕ ಪದಾಧಿಕಾರಿಗಳು ಗುರುವಾರ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಕಾರ್ಖಾನೆ ಒಳಗಿನ ಸಕ್ಕರೆ ಸಂಗ್ರಹಾಗಾರಕ್ಕೆ ಬೀಗ ಹಾಕಿ ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿ ವಿ.ಪಿ. ಕೃಷ್ಣನ್ ಅವರಿಗೆ ಮನವಿ ಸಲ್ಲಿಸಿದರು.
ನಂತರ ಸಂಘದ ಗೌರವಾಧ್ಯಕ್ಷ ಶಶಿಧರ ನಾಯ್ಕೋಡಿ ಮಾತನಾಡಿ, ಸಂಘಟನೆಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹಾಗೂ ಅಧ್ಯಕ್ಷ ಚುನ್ನಪ್ಪ ಪೂಜಾರಿ ನೇತೃತ್ವದಲ್ಲಿ ಗುರ್ಲಾಪುರದಲ್ಲಿ ಹಮ್ಮಿಕೊಂಡಿರುವ ಹೋರಾಟದಲ್ಲಿ ಎಂಎಸ್ಪಿ ಹಾಗೂ ಕಬ್ಬಿನ ದರ ನಿಗದಿ ಆಗುವವರೆಗೆ ಯಾವುದೇ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಬಾರದು ಹಾಗೂ ಸಕ್ಕರೆ ಮಾರಾಟ ಹಾಗೂ ಸಾಗಾಟ ಮಾಡಬಾರದು ಎಂದು ರಾಜ್ಯಾದ್ಯಂತ ಕಾರ್ಖಾನೆಗಳ ಸಕ್ಕರೆ ಸಂಗ್ರಹಾಗಾರಗಳಿಗೆ ಬೀಗ ಹಾಕಲಾಗಿದೆ. ಒಂದು ವೇಳೆ ಯಾವುದೇ ಸಕ್ಕರೆ ಕಾರ್ಖಾನೆ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಕಾರ್ಖಾನೆ ಪ್ರಾರಂಭಿಸಿದರೆ ಅಂತಹ ಕಾರ್ಖಾನೆ ರೈತರ ಕಬ್ಬಿಗೆ ಪ್ರತಿ ಟನ್ಗೆ 5,500 ರೂ. ದರ ನೀಡಬೇಕಾಗುತ್ತದೆ ಹಾಗೂ ಗುರ್ಲಾಪುರ ಹೋರಾಟದಲ್ಲಿ ಯಾವ ದರ ನಿಗದಿ ಆಗುತದೆಯೋ ಅದೇ ದರವನ್ನು ತಾವೂ ನೀಡಬೇಕಾಗುತ್ತದೆ ಎಂದರು.
ಮನವಿ ಸ್ವೀಕರಿಸಿ ಕಾರ್ಖಾನೆ ಆಡಳಿತ ಅಧಿಕಾರಿ ವಿ.ಪಿ. ಕೃಷ್ಣನ್ ಮಾತನಾಡಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಲಮೇಲ ತಾಲೂಕು ಘಟಕದ ಪದಾಧಿಕಾರಿಗಳು ಗುರುವಾರ ಕಾರ್ಖಾನೆಗೆ ಆಗಮಿಸಿ ಕಾರ್ಖಾನೆಯ ಸಕ್ಕರೆ ಸಂಗ್ರಹಾಗಾರಕ್ಕೆ ಬೀಗ ಹಾಕಿ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಎಲ್ಲ ಕಾರ್ಖಾನೆಗಳ ಪ್ರಕಾರ ನಾವೂ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು.
ಕಾರ್ಖಾನೆ ನಿರ್ದೇಶಕ ಮಲ್ಲಿಕಾರ್ಜುನ ಜೋಗುರ, ಸಂಘಟನೆ ಉಪಾಧ್ಯಕ್ಷ ಮಹೇಶ ಹೊನ್ನಳ್ಳಿ, ಕಾರ್ಯದರ್ಶಿ ಇಮ್ರಾನ ಯಲಗಾರ, ಖಜಾಂಚಿ ರಾಜು ಮೇತ್ರಿ, ಬಾಳು ಕುಂಬಾರ, ರಾಮು ಲಾವಟೆ, ರಾಜಶೇಖರ ಬಿರಾದಾರ, ಶ್ರೀಶೈಲ ಬಿರಾದಾರ, ಯಲ್ಲಪ್ಪ ಜೇರಟಗಿ, ಶಿವಯೋಗಿ ಕತ್ತಿ, ನಿಂಬೋಜಿ ಚೋರಮಲ, ಪ್ರದೀಪ ವಾವರೆ ಇತರರಿದ್ದರು.