ವಿಜಯಪುರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರ ಕಾಲೇಜುಗಳ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಯಲ್ಲಾಲಿಂಗ ಯಾದವಾಡ ಮಾತನಾಡಿದರು. ಎಸ್.ಬಿ. ಕಮತಿ, ಸಚಿನ ಮಗರಿ, ಭಾರತಿ ಮಠ ಮತ್ತಿತರರಿದ್ದಾರೆ. 
ವಿಜಯಪುರ

ಯಲ್ಲಾಲಿಂಗ ಯಾದವಾಡ ಅಭಿಮತ | ಅಂತರ ಕಾಲೇಜುಗಳ ವಿದ್ಯಾವ್ಯೂಹ ಉದ್ಘಾಟನೆ

ರಸಪ್ರಶ್ನೆಗಳು ಜ್ಞಾನಾರ್ಜನೆಗೆ ಸಹಕಾರಿ

ವಿಜಯಪುರ: ಹೊಸ ವಿಚಾರ, ಪ್ರಚಲಿತ ಘಟನೆ, ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಸಂಶೋಧನೆ, ಕ್ರೀಡೆ ಸೇರಿ ಎಲ್ಲ ವಿಷಯಗಳನ್ನು ಅರಿಯುವ ನಿಟ್ಟಿನಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಬಿಎಲ್‌ಡಿಇ ಸಂಸ್ಥೆಯ ಉಪ ಹಣಕಾಸು ಅಽಕಾರಿ ಯಲ್ಲಾಲಿಂಗ ಯಾದವಾಡ ಹೇಳಿದರು.

ನಗರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತರ ಕಾಲೇಜುಗಳ ರಸಪ್ರಶ್ನೆ ಕಾರ್ಯಕ್ರಮ ವಿದ್ಯಾವ್ಯೂಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಸಪ್ರಶ್ನೆ ಕಾರ್ಯಕ್ರಮಗಳು ಜ್ಞಾನಾರ್ಜನೆಗೆ ಸಹಕಾರಿಯಾಗಿವೆ. ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಹೊಸ ವಿಚಾರಗಳನ್ನು ಅರಿಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ಮಧ್ಯೆ ಸ್ನೇಹ, ಬಾಂಧವ್ಯ, ಅಧ್ಯಯನ ಮಾಡುವ ಪ್ರವೃತ್ತಿ ಬೆಳೆಯುತ್ತದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಬಿ. ಕಮತಿ ಮಾತನಾಡಿ, ರಸಪ್ರಶ್ನೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ವಿವಿಧ ಮೂಲಗಳಿಂದ, ಪುಸ್ತಕಗಳಿಂದ ಮಾಹಿತಿಗಳನ್ನು ತಿಳಿಯುವ ಸಂಗ್ರಹಿಸುವ ಪ್ರವೃತ್ತಿ ಬೆಳೆಸಿ ಕೊಳ್ಳಬಹುದು. ರಸಪ್ರಶ್ನೆ ಕಾರ್ಯಕ್ರಮಗಳ ಮುಂದಿನ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯ ಮಾಡುತ್ತವೆ ಎಂದರು.

ವಿವಿಧ ಕಾಲೇಜುಗಳ ಸುಮಾರು 50 ತಂಡಗಳಿAದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸಪ್ರಶ್ನೆಯಲ್ಲಿ ಭಾಗವಹಿಸಿದ್ದು, ಬಿಎಲ್‌ಡಿಇ ಸಂಸ್ಥೆಯ ಬಿಬಿಎ ಕಾಲೇಜು ಪ್ರಥಮ ಸ್ಥಾನ, ವೇದಾಂತ ಕಾಲೇಜು ದ್ವಿತೀಯ ಹಾಗೂ ಎಎಸ್‌ಪಿ ಬಿ.ಸಿ.ಎ ವಿಭಾಗ ತೃತೀಯ ಸ್ಥಾನ ಪಡೆದವು.

ಅಂಕಿತಾ ಚವಾಣ, ವರುಣಿ ಕುಲಕರ್ಣಿ ರಸಪ್ರಶ್ನೆ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಸಚಿನ ಮಗರಿ ಹಾಗೂ ರಸಪ್ರಶ್ನೆ ಸ್ಪರ್ಧೆಯ ಸಂಯೋಜಕಿ ಭಾರತಿ ಮಠ ವೇದಿಕೆಯಲ್ಲಿದ್ದರು.

ಕೃತಿ ಆಧ್ಯ ಪ್ರಾರ್ಥಿಸಿದರು. ಅಂಕಿತಾ ಚವಾಣ ಸ್ವಾಗತಿಸಿದರು. ಬಿ.ಬಿ. ಮರಿಯಂ ಮುಲ್ಲಾ ಪರಿಚಯಿಸಿದರು. ವೈಷ್ಣವಿ ಒಂಟಮೂರೆ ನಿರೂಪಿಸಿದರು. ವರುಣಿ ಕುಲಕರ್ಣಿ ವಂದಿಸಿದರು.