ಗೊಳಸಂಗಿ: ಆಲಮಟ್ಟಿ ಕೃಷ್ಣಾ ನದಿ ಹಿನ್ನೀರಿನ 3ನೇ ಹಂತದಲ್ಲಿ ಸ್ಥಳಾಂತರ ಆಗಲಿರುವ 22 ಹಳ್ಳಿಗಳಲ್ಲಿ ವಂದಾಲ ಗ್ರಾಮವೂ ಒಂದು. ನಮ್ಮೂರು ಮುಳುಗಡೆಯ ಹಣೆಪಟ್ಟಿ ಹೊತ್ತು ದಶಕಗಳೇ ಉರುಳಿವೆ ಎಂದು ತಾಪಂ ಮಾಜಿ ಸದಸ್ಯೆ ಪದ್ಮಾವತಿ ಗುಡಿ, ರೈತ ಮುಖಂಡ ಶೇಖರ ಗೂಗಿಹಾಳ ಗ್ರಾಮಸ್ಥರ ಪರವಾಗಿ ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.
ಸಮೀಪದ ವಂದಾಲ ಗ್ರಾಮದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಅವರು ಮಾತನಾಡಿ, ಮುಳುಗಡೆಯಾದ ಅಂದಿನಿಂದ ಗ್ರಾಮಸ್ಥರ ಯಾವುದೇ ಆಸ್ತಿಯ ವಾಟ್ನಿ, ವಾರಸಾ ಆಗುತ್ತಿಲ್ಲ. ಊರಲ್ಲಿ ಯಾವುದೇ ಅಭಿವದ್ಧಿ ಕಾಮಗಾರಿಯೂ ನಡೆಯುತ್ತಿಲ್ಲ. ಕಾಡುವಾಸಿಗಳ ರೀತಿಯಲ್ಲಿ ನಮ್ಮ ಬದುಕಿನ ದಾರಿ ಸಾಗುತ್ತಿದೆ. ಅದಕ್ಕೆ ಮೋಕ್ಷ ಯಾವಾಗ ಎಂದು ಗ್ರಾಮದ ಜನ ಎದುರು ನೋಡುತ್ತಿದ್ದಾರೆ ಎಂದು ಆಗ್ರಹಿಸಿದರು.
ಉಪ ತಹಸೀಲ್ದಾರ್ ಜಿ.ಟಿ. ನಾಯಕ ಮಾತನಾಡಿ, ಗ್ರಾಮಸ್ಥರು ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ಆಯಾ ಇಲಾಖೆಯ ಮೂಲಕ ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಿಡಗುಂದಿ ತಾಲೂಕು ಗ್ಯಾರಂಟಿ ಅಧ್ಯಕ್ಷ ರಮೇಶ ಮಾಗಿ ಮಾತನಾಡಿ, ದೀಪಾವಳಿ ಸಮಯಕ್ಕೆ ಎಲ್ಲ ಗೃಹಲಕ್ಷ್ಮೀಯರಿಗೆ 36ನೇ ಕಂತಿನ ಹಣವನ್ನು ತಲುಪಿಸಲಾಗಿದೆ. ಅದರಂತೆ ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ, ಶಕ್ತಿಯೋಜನೆಗಳು ನಾಡಿನ ಜನಸಾಮಾನ್ಯರಿಗೆ ಆಸರೆಯಾಗಿವೆ ಎಂದರು.
ವಿವಿಧ ಇಲಾಖೆಯ ಅಧಿಕಾರಿಗಳಾದ ರಾಘವೇಂದ್ರ ಬಗಲಿ, ಎಸ್.ಐ.ಇನಾಮದಾರ, ಎಚ್.ವೈ. ತೆಲಗಿ, ಡಾ.ಎಸ್.ಎಂ.ತಿಮ್ಮಾಪುರ, ಬಿ.ಎನ್. ಕಾಗಲ್, ಎಂ.ಆರ್. ಲಮಾಣಿ, ಎಸ್.ಎಚ್. ಬಿರಾದಾರ, ಎಂ.ಪಿ. ಕೂಡಲಗಿ, ಯು.ಸಿ. ಬಶೆಟ್ಟಿ, ಮಹೇಶ ಮೋಹಿತೆ, ಎಸ್.ಜಿ. ಕುಂಟೋಜಿ, ಎ.ವಿ. ಭಾಗವಾನ, ನಿತ್ಯಾನಂದ ಯಲಗೋಡ ಮತ್ತಿತರರು ಇದ್ದರು.
ಪಂಚಾಯತ್ ರಾಜ್ ಇಲಾಖೆಯ 6, ಲೋಕೋಪಯೋಗಿ, ಹೆಸ್ಕಾಂ, ಭೂ ದಾಖಲೆ ಇಲಾಖೆಯ ತಲಾ 3, ಕಂದಾಯ ಇಲಾಖೆಯ 2, ತೋಟಗಾರಿಕೆ, ಭೂ ಸ್ವಾಧೀನ, ಸಾರಿಗೆ, ಶಿಶು ಅಭಿವೃದ್ಧಿಗೆ ಸಂಬಂಧಿಸಿದ ತಲಾ ಒಂದು ಸೇರಿ ಒಟ್ಟು 21 ಅರ್ಜಿಗಳು ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸ್ವೀಕೃತಗೊಂಡವು.
ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ, ವಿಧವಾ ವೇತನ ಲಾನುಭವಿಗಳಿಗೆ ದಾಖಲಾತಿ ಪತ್ರಗಳನ್ನು ವಿತರಿಸಲಾಯಿತು. ಕಂದಾಯ ನಿರೀಕ್ಷಕ ಸಲೀಂ ಯಲಗೋಡ ನಿರೂಪಿಸಿದರು. ನಾನಾಗೌಡ ಪಾಟೀಲ ವಂದಿಸಿದರು.