ಸಿಂದಗಿಯ ಮಾಂಗಲ್ಯ ಭವನದಲ್ಲಿ ನಡೆದ ನವರಾತ್ರಿ ವೈಭವದ 2026ರ ದಾಂಡಿಯಾ ನೃತ್ಯೋತ್ಸವಕ್ಕೆ ಗಣ್ಯರು, ಚಾಲನೆ ನೀಡಿದರು. ವಿ. ನಾಗೇಂದ್ರಪ್ರಸಾದ್, ಪವಿತ್ರ ಅಕ್ಕನವರು, ಮುತ್ತು ಮುಂಡೇವಾಡಗಿ ಮತ್ತಿತರರಿದ್ದರು. 
ವಿಜಯಪುರ

ಮಹಿಳೆಯರ ಗಮನ ಸೆಳೆದ ದಾಂಡಿಯಾ ನೃತ್ಯ

ಚಲನಚಿತ್ರ ಸಾಹಿತಿ ಡಾ.ವಿ. ನಾಗೇಂದ್ರ ಪ್ರಸಾದ್ ಅಭಿಮತ * ದಾಂಡಿಯಾ ನೃತ್ಯೋತ್ಸವಕ್ಕೆ ಚಾಲನೆ

ಸಿಂದಗಿ : ನಾಡಹಬ್ಬಗಳು ಸಂಸ್ಕೃತಿ, ಸಂಸ್ಕಾರ ಮತ್ತು ಗತವೈಭವದ ಜೀವಂತಿಕೆಯನ್ನು ಸಂಭ್ರಮದ ಆಚರಣೆಯೊಂದಿಗೆ ಇಮ್ಮಡಿಗೊಳಿಸುತ್ತಿವೆ ಎಂದು ಚಲನಚಿತ್ರ ಸಾಹಿತಿ ಹಾಗೂ ಗೀತ ರಚನೆಕಾರ ಡಾ.ವಿ. ನಾಗೇಂದ್ರಪ್ರಸಾದ್ ಅಭಿಪ್ರಾಯಪಟ್ಟರು.

ನಗರದ ಮಾಂಗಲ್ಯ ಭವನದಲ್ಲಿ ಡ್ಯಾನಿ ಅಕಾಡೆಮಿ ಹಾಗೂ ಎ.ಬಿ.ಸಿ.ಡಿ ಡ್ಯಾನ್ಸ್ ಕ್ಲಾಸ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನವರಾತ್ರಿ ವೈಭವ-ದಾಂಡಿಯಾ ನೃತ್ಯೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮಗೆಲ್ಲರಿಗೂ ನಮ್ಮ ಸಂಸ್ಕೃತಿಯ ವೈವಿಧ್ಯತೆ, ಸಾಂಪ್ರದಾಯಿಕ ಮತ್ತು ಅಮೂಲ್ಯ ಆಸ್ತಿಯನ್ನು ಸಂರಕ್ಷಿಸಬೇಕಿದೆ. ಮಹಿಳೆಯರ ದಾಂಡಿಯಾ ಸಾಂಪ್ರದಾಯಿಕ ನೃತ್ಯ. ಆಧುನಿಕತೆಯಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಯ ಕಲೆ, ಮನರಂಜನೆಯತ್ತ ಹೊರಳಿರುವುದು ಹೆಮ್ಮೆ. ಮಹಿಳೆಯರು ನಾಡಿನ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಉತ್ಸುಕರಾಗಿದ್ದು, ಅದೇ ಸಂಸ್ಕಾರವನ್ನು ಭವಿಷ್ಯದ ಪೀಳಿಗೆಗೆ ಜೀವಂತ ಕೊಡುಗೆ ನೀಡಬೇಕು ಎಂದು ಹೇಳಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರ ಅಕ್ಕನವರು, ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಹಾಗೂ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ನಾಡಿನ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ನೆನೆದರು. ಮುತ್ತು ಮುಂಡೇವಾಡಗಿ, ಭಾರತಿ ಹೊಸಮನಿ, ಡಾ.ಅಕ್ಷತಾ ಗೋಟಗುಣಕಿ, ತಾರಾನಾಥ ರಾಠೋಡ, ಅಶೋಕ ಕೊಳಾರಿ, ಡಾ.ಅನಿಲ ನಾಯಕ, ಮಲ್ಲನಗೌಡ ಪಾಟೀಲ, ಮುತ್ತು ಸೊನ್ನದ ಹಾಗೂ ಡ್ಯಾನಿ ಅಕಾಡೆಮಿ ಸಂಚಾಲಕ ಜ್ಞಾನೇಶ ಗುರವ ಇದ್ದರು.

ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕೂಚಬಾಳ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಿದ್ಧಲಿಂಗ ಚೌಧರಿ ನಿರೂಪಿಸಿದರು.

ನವರಾತ್ರಿ ಸಂಭ್ರಮಕ್ಕೆ ಮೆರಗು

ಬಣ್ಣಬಣ್ಣದ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಹಿಳೆಯರು ಪ್ರದರ್ಶಿಸಿದ ದಾಂಡಿಯಾ ನತ್ಯ ನೋಡುಗರ ಮನಸೂರೆಗೊಳಿಸಿ, ಬೆರಗು ಮೂಡಿಸಿತು. ಸುಮಧುರ ಸಂಗೀತ, ಲಯಬದ್ಧ ಹೆಜ್ಜೆ ಹಾಗೂ ದಾಂಡಿಯಾ ಕೋಲುಗಳ ಟಕ್...ಟಕ್...ನಾದ ನವರಾತ್ರಿ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು.