ಇಂಡಿ: ಬಿಜೆಪಿ ಪಕ್ಷದ ಸಂಘಟನೆಗೆ ನಿರಂತರವಾಗಿ ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರಿಗೆ ಜಿಪಂ, ತಾಪಂ ಚುನಾವಣೆಯಲ್ಲಿ ಮೊದಲ ಆದ್ಯತೆಯ ಮೇರೆಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಬಿಜೆಪಿ ಕಾರ್ಯಕರ್ತರು ಒಕ್ಕೊರಲಿನಿಂದ ಒತ್ತಾಯಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಇಂಡಿ ತಾಲೂಕಿನಲ್ಲಿ ಶಾಸಕರು ನಡೆಸುವ ಪ್ರಜಾಸೇವಾ ಸಭೆಗಳು ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು ಕಾಂಗ್ರೆಸ್ ಸಭೆಗಳಂತಾಗಿವೆ ಎಂದು ಟೀಕಿಸಿದರು. ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ. ಇಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷದ ಶಕ್ತಿ ಪ್ರದರ್ಶಿಸಲಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಲ್ಲಿ ಬಿಜೆಪಿ ಅರಳುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಸುಗೌಡ ಬಿರಾದಾರ, ಅನೀಲ ಜಮಾದಾರ, ಭೀಮಸಿಂಗ್ ರಾಠೋಡ, ಎಸ್.ಎ. ಪಾಟೀಲ ಮಾತನಾಡಿ, ಪಕ್ಷದ ಬಲವರ್ಧನೆಗಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಬೇಕು. ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ನಿಷ್ಠಾವಂತ ಕಾರ್ಯಕರ್ತರ ಕೊಡುಗೆ ಮಹತ್ವದ್ದಾಗಿದ್ದು, ಟಿಕೆಟ್ ಹಂಚಿಕೆ ವೇಳೆ ಅವರ ಸೇವೆ ಮತ್ತು ಪಕ್ಷನಿಷ್ಠೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಿದ್ಧಲಿಂಗ ಹಂಜಗಿ, ರಾಜಕುಮಾರ ಸಗಾಯಿ, ಶಿಲವಂತ ಉಮಾರಾಣಿ, ಬಿ.ಎಸ್. ಪಾಟೀಲ ಹಿರೇಬೇವನೂರ, ರವಿ ವಗ್ಗೆ, ದೇವೇಂದ್ರ ಕುಂಬಾರ, ಬಸಮ್ಮ ಮರಡಿ, ಪಕ್ಷದ ಮುಖಂಡರು, ಕಾರ್ಯಕರ್ತರು ಇತರರಿದ್ದರು. ಆದೃಶಪ್ಪ ವಾಲಿ ಸ್ವಾಗತಿಸಿದರು. ಶಾಂತು ಕಂಬಾರ ನಿರೂಪಿಸಿ, ವಂದಿಸಿದರು.