ಚಡಚಣ: ಭಾರತೀಯ ಕಿಸಾನ್ ಸಂಘ, ರೈತೋದಯ ಸಂಘ, ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಚಡಚಣ ತಾಲೂಕು ಬರಗಾಲವೆಂದು ಘೋಷಿಸಬೇಕು, ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು ಮತ್ತು ಸರಿಯಾದ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ, ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಶಿರಾಡೋಣ ಲಿಂಗಸಗೂರು ರಾಜ್ಯ ಹೆದ್ದಾರಿ ಕೆಲಕಾಲ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್ ಕಚೇರಿಯವರೆಗೆ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗುತ್ತ ರೈತರು ರ‌್ಯಾಲಿ ಮೂಲಕ ಆಗಮಿಸಿ, ತಹಸೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿ, ನಂತರ ಹಸಿರು ಸೇನೆ ತಾಲೂಕಾಧ್ಯಕ್ಷ ವಸಂತ ಭೈರಾಮಡಿ ಮಾತನಾಡಿ, ಚಡಚಣ ತಾಲೂಕನ್ನು ಈ ಮೊದಲು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಿದ 101 ತಾಲೂಕುಗಳ ಪಟ್ಟಿಯಲ್ಲಿ ಚಡಚಣ ತಾಲೂಕನ್ನು ಪೂರ್ಣ ಪ್ರಮಾಣದ ಬರಗಾಲ ಪೀಡಿತ ತಾಲೂಕಾಗಿ 102ನೇ ತಾಲೂಕಾಗಿ ಘೋಷಣೆ ಮಾಡಬೇಕು ಹಾಗೂ ಚಡಚಣ ಏತ ನೀರಾವರಿ ಸಂಪೂರ್ಣ ಹಳ್ಳ ಹಿಡಿದಿದ್ದು, ಏತ ನೀರಾವರಿ ಕಾಮಗಾರಿಯನ್ನು ಸರಿಪಡಿಸಿ ಎಲ್ಲ ರೈತರ ಜಮೀನುಗಳಿಗೆ ನೀರು ಸರಬರಾಜಾಗುವಂತೆ ಮಾಡಬೇಕು, ತಾಲೂಕಿನ ಎಲ್ಲ ಕೆರೆಗಳನ್ನು ತುಂಬಬೇಕು ಎಂದು ಸರ್ಕಾರದ ವಿರುದ್ಧ ಆಗ್ರಹಿಸಿದರು.
ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮಹಾದೇವ ಬನಸೋಡೆ ಮಾತನಾಡಿ, ತಾಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ತುಂಬಬೇಕು. ತಾಲೂಕಿನ ಕೊನೆಯ ಭಾಗದವರೆಗೂ ನೀರು ಹರಿಸಬೇಕು ಇಲ್ಲದಿದ್ದರೆ ಅನಿರ್ದಿಷ್ಟ ಉಪವಾಸ ಧರಣಿ ಸತ್ಯಾಗ್ರಹ ಮುಂದುವರಿಸುವುದಾಗಿ ತಿಳಿಸಿದರು. ಕಳೆದ ಜೂನ್ ತಿಂಗಳಿಂದ ಮಳೆಯೇ ಇಲ್ಲದೆ ರೈತರು ತೊಂದರೆಯಲ್ಲಿದ್ದಾರೆ. ಬೆಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಕೂಡಲೇ ಚಡಚಣ ತಾಲೂಕು ಬರಗಾಲ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರೈತೋದಯದ ಜಿಲ್ಲಾ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ, ಕರವೇ ವಲಯಾಧ್ಯಕ್ಷ ಸೋಮಶೇಖರ ಕಂಬಾರ, ಭೀಮ ಸೇನೆ ತಾಲೂಕಾಧ್ಯಕ್ಷ ರುದ್ರೇಶ ಬನಸೋಡೆ, ಕೆ.ಆರ್.ಎಸ್. ಪಕ್ಷದ ಸೈನಿಕರಾದ ಶಿವಾನಂದ ಯಡಳ್ಳಿ, ಶಕ್ತಿಕುಮಾರ, ಸ್ಥಳೀಯ ವಿರಕ್ತ ಮಠದ ಷಡಕ್ಷರಿ ಮಹಾಸ್ವಾಮಿಗಳು, ಮಹಾದೇವ ಕರ್ಲಮಳ, ಮಹಾದೇವ ಹಿರೇಕುರುಬರ, ರೈತ ಮುಖಂಡರಾದ ಸಂತೋಷ ಭೈರಗೊಂಡ,
ಘೇನಪ್ಪ ಬಿರಾದಾರ, ಉತ್ತಮ ಕಾರಬಾರಿ, ಹಣಮಂತ ಪೀರಗೊಂಡ, ಅಜೀತ ವಾಲಿ, ರಮೇಶ ಬಬಲಾದಿ, ಆಕಾಶ ಪಾಟೀಲ ಸೇರಿ ನೂರಾರು ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.