ವಿಜಯಪುರ : ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ಅವಶ್ಯಕತೆಯನುಸಾರ ನಿರಂತರ ಉದ್ಯೋಗಾವಕಾಶ ಕಲ್ಪಿಸುವುದರೊಂದಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿ.ಪಂ. ಸಿಇಒ ಆನಂದ ಪ್ರಕಾಶ ಮೀನಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಬಿ-ಜಿ ರಾಮ್-ಜಿ, ಗ್ರಾಮೀಣ ವಸತಿ ಯೋಜನೆ, ಸ್ವಚ್ಛ ಭಾರತ ಮಿಷನ್ ಹಾಗೂ ಭಾರತ್ ಜೋಡೋ ಯುವ ಸಂಘಗಳ ನೋಂದಣಿ ಸೇರಿ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಬರಗಾಲ ಘೋಷಣೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಉದ್ಯೋಗದ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಬಿ-ಜಿ ರಾಮ್-ಜಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ನಿಗದಿಪಡಿಸಿರುವ ಮಾನವ ದಿನಗಳ ಗುರಿ ಸಾಧಿಸಬೇಕು. ಕೂಲಿಕಾರ್ಮಿಕರ ಭಾಗವಹಿಸುವಿಕೆ ಹಾಗೂ ಅರ್ಹರಿಗೆ ನಿರಂತರ ಉದ್ಯೋಗ ಒದಗಿಸಬೇಕು ಎಂದು ಸೂಚಿಸಿದರು.
ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ನಿಗದಿತ ಅವಧಿಯಲ್ಲಿ ಕೂಲಿ ಪಾವತಿಯಾಗುವಂತೆ ಕ್ರಮ ವಹಿಸಬೇಕು. ಕಾಮಗಾರಿ ಸ್ಥಳದಲ್ಲಿ ಹಾಜರಿರುವ ಎಲ್ಲ ಕೂಲಿಕಾರ್ಮಿಕರ ಹಾಜರಾತಿಯನ್ನು ೇಸ್ ಅಥೆಂಟಿಕೇಶನ್ ಮೂಲಕ ಎನ್ಎಂಎಂಎಸ್ ವ್ಯವಸ್ಥೆಯಲ್ಲಿ ಶೇ.100ರಷ್ಟು ದಾಖಲಿಸಬೇಕು. ಸಮುದಾಯ ಕಾಮಗಾರಿಗಳ ಜೊತೆಗೆ ಅರ್ಹ ಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿಗಳನ್ನು ಒದಗಿಸಿ, ಯೋಜನೆಯ ಸೌಲಭ್ಯಗಳು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯತೆ ಹಾಗೂ ನೀರು ಸರಬರಾಜಿನ ಸ್ಥಿತಿಗತಿಗಳನ್ನು ನಿರಂತರವಾಗಿ ಪರಿಶೀಲಿಸಬೇಕು. ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಲ್ಲಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಂಡು, ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಗ್ರಾಮೀಣ ವಸತಿ ಯೋಜನೆಯಡಿ ಬಾಕಿ ಉಳಿದಿರುವ ಮನೆಗಳ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಗೃಹಗಳ ನಿರ್ಮಾಣಕ್ಕೆ ಆದ್ಯತೆ ನೀಡಿ, ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು ಎಂದರು.
ಜಿ.ಪಂ. ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ, ಯೋಜನಾ ನಿರ್ದೇಶಕ ಅಶೋಕ ಕಲಘಟಗಿ ಮತ್ತಿತರರಿದ್ದರು.