ದೇವರಹಿಪ್ಪರಗಿ ಪ್ರವಾಸಿ ಮಂದಿರದಲ್ಲಿ ಕರವೇ ವತಿಯಿಂದ ಕನ್ನಡ ಹಬ್ಬ ನಿಮಿತ್ತ ಜಂಟಿ ಸುದ್ದಿಗೋಷ್ಠಿ ನಡೆಯಿತು. ಸಾಹೇಬಗೌಡ ಉತ್ನಾಳ, ಅಮೀದ ಮುಲ್ಲಾ, ಅಬೂಬಕರ್ ಯಲಗಾರ ಮತ್ತಿತರರಿದ್ದರು. 
ವಿಜಯಪುರ

ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಸಿದ್ಧತೆ

ಕರವೇ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಹೇಳಿಕೆ ಎ.ಆರ್.ಕೆ. ಫೌಂಡೇಷನ್ ಜತೆ ಜಂಟಿ ಸುದ್ದಿಗೋಷ್ಠಿ

ದೇವರಹಿಪ್ಪರಗಿ: ಕನ್ನಡ ನಾಡು, ನುಡಿ, ಜಲ ಹಾಗೂ ಕನ್ನಡ ಸಂಸ್ಕೃತಿಯ ವೈಭವವನ್ನು ಸಾರುವ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಹಾಗೂ ಎ.ಆರ್.ಕೆ. ಫೌಂಡೇಷನ್ ವತಿಯಿಂದ ನ.2ರಂದು ಕನ್ನಡ ಹಬ್ಬ ಆಚರಿಸಲಾಗುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸಭೆ ನಡೆಸಿ ನಂತರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮೊಹರೆ ವೃತ್ತದ ಮಾರ್ಗವಾಗಿ ಟಿಪ್ಪು ಸುಲ್ತಾನ್ ವೃತ್ತದವರೆಗೆ ಜಾನಪದ ಕಲಾತಂಡಗಳ ಮೆರವಣಿಗೆ ಮೂಲಕ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನದ ಆಚರಣೆಯಾಗದೆ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯ ಬಗ್ಗೆ ಅಭಿಮಾನ ಬೆಳೆಸುವ ವೇದಿಕೆಯಾಗಬೇಕು. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕರವೇ ತಾಲೂಕು ಅಧ್ಯಕ್ಷ ರಹೀಮಾನ ಕನಕಲ್ ಮಾತನಾಡಿ, ನಂ.2ರಂದು ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದು, ಕನ್ನಡ ನಾಡು-ನುಡಿ, ಜಲ ಹಾಗೂ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸುವುದು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಗಣ್ಯರು, ಸಾಹಿತಿಗಳು, ಕಲಾವಿದರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪಟ್ಟಣದ ಪರದೇಶಿ ಮಠದ ಪ.ಪೂ ಶಿವಯೋಗಿ ಮಹಾಸ್ವಾಮಿಗಳು, ಸಿಂದಗಿ ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಸಿದ್ದಾರ್ಥ ರೂಗಿ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಜಲಪೂರ ಮಾತನಾಡಿ, ಕನ್ನಡದ ಹಬ್ಬವನ್ನು ಎಲ್ಲರೂ ಒಗ್ಗೂಡಿ ಸಂಭ್ರಮದಿಂದ ಆಚರಿಸುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಅವರು ಕರೆ ನೀಡಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕರವೇ ಗೌರವಾಧ್ಯಕ್ಷ ಸಾಹೇಬಗೌಡ ಉತ್ನಾಳ, ಪದಾಧಿಕಾರಿಗಳಾದ ಅಮೀದ ಮುಲ್ಲಾ, ಅಬೂಬಕರ್ ಯಲಗಾರ, ಮಲ್ಲಿಕಾರ್ಜುನ ಬಿರಾದಾರ, ನಬಿಲಾಲ ಚಿಕ್ಕಸಿಂದಗಿ, ಗುರುಪಾದ ಮಣೂರ ಸೇರಿ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.