ಇಂಡಿ ನಗರದ ಕೆಸರಾಳ ತಾಂಡಾದಲ್ಲಿ ಬಂಜಾರಾ ಸಮಾಜದ ಜಾಗೃತಿ ಸಮಾವೇಶ ಹಾಗೂ ದಿ. ಶಂಕರ ಹಾಗೂ ಚಾಂದುಬಾಯಿ ರಾಠೋಡ ಅವರ ಜಾತ್ರಾ ಮಹೋತ್ಸವವನ್ನು ಸಚಿವ ರುದ್ರಪ್ಪ ಲಮಾಣಿ ಉದ್ಘಾಟಿಸಿದರು. ಶಾಸಕ ಯಶವಂತರಾಯಗೌಡ ಪಾಟೀಲ, ಜಗನು ಮಹಾರಾಜರು, ಪ್ರಕಾಶ ಮಹಾರಾಜರು, ವಂಸನಾತಾಯಿ ಮೋರೆ, ರಾಮು ರಾಠೋಡ, ಅನೀಲ ಜಾಧವ ಇತರರಿದ್ದರು. 
ವಿಜಯಪುರ

ಕಂದಾಯ ಗ್ರಾಮಗಳಾಗಿ ತಾಂಡಾ ಪರಿವರ್ತನೆ

ಸಚಿವ ರುದ್ರಪ್ಪ ಲಮಾಣಿ ಹೇಳಿಕೆ ಬಂಜಾರಾ ಸಮಾಜದ ಜಾಗೃತಿ ಸಮಾವೇಶ

ಇಂಡಿ: ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, ಅಲ್ಲಿರುವ ಮನೆ ಹಾಗೂ ಜಾಗಗಳಿಗೆ ಸಂಬಂಧಿಸಿದ ಸ್ವತ್ತನ್ನು ಆಯಾ ನಿವಾಸಿಗಳ ಹೆಸರಿಗೆ ಮಾಡಿ ಕೊಡುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಕೆಸರಾಳ ತಾಂಡಾದಲ್ಲಿ ಬಂಜಾರಾ ಸಮಾಜದ ಜಾಗೃತಿ ಸಮಾವೇಶ ಹಾಗೂ ದಿ. ಶಂಕರ ಹಾಗೂ ಚಾಂದುಬಾಯಿ ರಾಠೋಡ ಅವರ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ತಾಂಡಾಗಳ ಜನರು ಹಲವು ವರ್ಷಗಳಿಂದ ಅನುಭವಿಸುತ್ತಿರುವ ಜಾಗದ ಹಕ್ಕಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ತಾಂಡಾ ನಿವಾಸಿಗಳಿಗೆ ತಮ್ಮ ಜಾಗದ ಮೇಲೆ ಕಾನೂನು ಬದ್ಧ ಹಕ್ಕು ದೊರೆಯಲಿದೆ ಎಂದು ಹೇಳಿದರು.

ತಂದೆ-ತಾಯಿಯ ಬಗ್ಗೆ ಕಾಳಜಿ ವಹಿಸಿ ಅವರ ಸೇವೆ ಹಾಗೂ ಸ್ಮರಣೆಯಲ್ಲಿ ಕಾರ್ಯಕ್ರಮ ಆಯೋಜಿಸಿರುವ ಭೀಮಸಿಂಗ ರಾಠೋಡ ಅವರ ಕಾರ್ಯ ಶ್ಲಾಘನೀಯ. ಸಮಾಜದ ಅಭಿವೃದ್ಧಿಗೆ ಇಂತಹ ಕಾರ್ಯಗಳು ಪ್ರೇರಣೆಯಾಗಬೇಕು ಎಂದರು.

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ತಾಂಡಾ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಲಾಗುವುದು. ತಾಂಡಾಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು.

ಸೋಮದೇವರಹಟ್ಟಿಯ ಜಗನು ಮಹಾರಾಜರು, ಪ್ರಕಾಶ ಮಹಾರಾಜರು, ಮಹಾರಾಷ್ಟ್ರ ವಂಸನಾತಾಯಿ ಮೋರೆ, ಜಿ.ಪಂ. ಮಾಜಿ ಸದಸ್ಯ ರಾಮು ರಾಠೋಡ, ಅನೀಲ ಜಾಧವ, ಡಾ. ರಮೇಶ ರಾಠೋಡ ಮಾತನಾಡಿದರು.

ಶಂಕರ ಪವಾರ, ಭೀಮಣ್ಣ ಕವಲಗಿ, ಅನುಸೂಯಾ ಜಾಧವ, ರವಿ ಚವಾಣ್, ದೇವೆಂದ್ರ ಕುಂಬಾರ, ಕ್ರೀಡಾಪಟು ರಾಜೇಶ ಪವಾರ, ಆಲ್ ಇಂಡಿಯಾ ಬಂಜಾರ ಸಂಘದ ಸಂಜು ಚವಾಣ್, ಪುರಸಭೆ ಮಾಜಿ ಅಧ್ಯಕ್ಷ ಲಿಂಬಾಜಿ ರಾಠೋಡ, ಪ್ರಾಚಾರ್ಯ ವಿಜಯಕುಮಾರ ರಾಠೋಡ, ಗಣಪತಿ ರಾಠೋಡ, ಬಾಬು ಗುಡುಮಿ ಇತರರಿದ್ದರು.