ಇಂಡಿ ತಾಲೂಕಿನ ಲಚ್ಯಾಣದ ಸಿದ್ಧಲಿಂಗೇಶ್ವರ ಮಠದಲ್ಲಿ ನಡೆದ ಭಕ್ತರ ಸಭೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. ಹಳಂಗಳಿಯ ಶಿವಾನಂದ ಶ್ರೀಗಳು, ಭೀಮಣ್ಣ ಕವಲಗಿ, ಎಸ್.ಬಿ. ಬೂದಿಹಾಳ ಮತ್ತಿತರರಿದ್ದರು. 
ವಿಜಯಪುರ

ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ

ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ ಭಕ್ತರ ಸಭೆ

ಇಂಡಿ: ಲಚ್ಯಾಣದ ಶ್ರೀ ಸಿದ್ಧಲಿಂಗೇಶ್ವರ ಮಠಕ್ಕೆ ನೂತನ ಪೀಠಾಧಿಪತಿ ಆಯ್ಕೆ ವಿಚಾರದಲ್ಲಿ ಬಂಥನಾಳದ ವೃಷಭಲಿಂಗೇಶ್ವರ ಶ್ರೀ, ಯರನಾಳದ ಸಂಗನಬಸವ ಶ್ರೀ, ಜಿಡಗಾದ ಮುರಗೇಂದ್ರ ಶ್ರೀ ಹಾಗೂ ಹಳಂಗಳಿಯ ಶಿವಾನಂದ ಶ್ರೀಗಳನ್ನು ಒಟ್ಟಿಗೆ ಸೇರಿಸಿ, ಒಮ್ಮತದ ನಿರ್ಧಾರ ಕೈಗೊಂಡು ನೂತನ ಪೀಠಾಧಿಪತಿಯನ್ನು ಆಯ್ಕೆ ಮಾಡಲಾಗುವುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಲಚ್ಯಾಣದ ಸಿದ್ಧಲಿಂಗೇಶ್ವರ ಮಠದ ಆವರಣದಲ್ಲಿ ನಡೆದ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು, ಮಠದ ಉತ್ತರಾಧಿಕಾರಿ ಆಯ್ಕೆ ಕುರಿತು ಸಮಿತಿ ಕೈಗೊಳ್ಳುವ ನಿರ್ಣಯವೇ ಅಂತಿಮ. ಮಠದ ಗೌರವ, ಘನತೆ ಹಾಗೂ ಪರಂಪರೆಗೆ ಧಕ್ಕೆ ಬಾರದಂತೆ ಎಲ್ಲರೂ ಒಗ್ಗಟ್ಟಿನಿಂದ ನಿರ್ಧಾರ ಕೈಗೊಳ್ಳಬೇಕು ಎಂದರು.

ನಾನು ಸಿದ್ಧಲಿಂಗ ಮಹಾರಾಜರ ಭಕ್ತ. ಅವರ ಆಶೀರ್ವಾದದಿಂದಲೇ ಶಾಸಕನಾಗಿದ್ದೇನೆ. ನನ್ನಂತೆ ಸಾವಿರಾರು ಭಕ್ತರು ಲಚ್ಯಾಣ ಮಠದ ಮಹಾರಾಜರ ಭಕ್ತರಾಗಿದ್ದಾರೆ. ಶ್ರೀಮಠದ ಗೌರವ ಮತ್ತು ಘನತೆ ಹೆಚ್ಚಿಸುವ ಜತೆಗೆ, ಸಿದ್ಧಲಿಂಗ ಶ್ರೀಗಳ ಆಶಯದಂತೆ ನಡೆದು ಲಚ್ಯಾಣ ಮಠದ ಕೀರ್ತಿ ರಾಜ್ಯದ ಮೂಲೆಮೂಲೆಗೂ ಪಸರಿಸಲು ಎಲ್ಲರೂ ಪ್ರಯತ್ನಿಸೋಣ ಎಂದು ಹೇಳಿದರು.

ಲಚ್ಯಾಣದಲ್ಲಿ ಎಲ್ಲರೂ ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯಿಂದ ಬದುಕಬೇಕು. ಕಾವಿ ಧರಿಸಿದವರಿಗೆ ನಾನು ಸದಾ ಗೌರವ ನೀಡುತ್ತೇನೆ. ಹೀಗಾಗಿ ಪೀಠಾಧಿಪತಿ ವಿಚಾರದಲ್ಲಿ ನಾನು ಆರಂಭದಲ್ಲಿ ಮಧ್ಯಪ್ರವೇಶಿಸಬಾರದು ಎಂದುಕೊಂಡಿದ್ದೆ. ಆದರೆ ಭಕ್ತರ ಒತ್ತಾಯಕ್ಕೆ ಮಣಿದು, ಮಠದ ಹಿತಕ್ಕಾಗಿ ಮನಪೂರ್ವಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಡಿ.ಎಸ್. ಪಾಟೀಲ, ಅಪ್ಪಾಸಾಹೇಬ ತಾಂಬೆ, ಜಯರಾಮ ಚವಾಣ್, ಧನರಾಜ ಮುಜಗೊಂಡ, ಜಕ್ಕಪ್ಪ ಹತ್ತಳ್ಳಿ, ಬಸವರಾಜ ಕರಾಳೆ, ನಾನಾಗೌಡ ಪಾಟೀಲ, ಜಗದೇವಿ ನಾಗಣಸೂರ, ಸಿದ್ಧನಗೌಡ ಪಾಟೀಲ, ಎ.ಪಿ. ಕಾಗವಾಡಕರ, ವಿನೋದ ಮುಜಗೊಂಡ ಮಾತನಾಡಿದರು.

ಹಳಂಗಳಿಯ ಶಿವಾನಂದ ಶ್ರೀಗಳು, ಭೀಮಣ್ಣ ಕವಲಗಿ, ಎಸ್.ಬಿ. ಬೂದಿಹಾಳ, ಬಸಲಿಂಗಪ್ಪ ಪಾಟೀಲ, ರಾಚಪ್ಪ ಗಳೇದ, ಕಲ್ಲನಗೌಡ ಬಿರಾದಾರ, ಬಿ.ಸಿ. ಸಾವಕಾರ, ಶಿವು ಜಾಲವಾದಿ, ಅಪ್ಪಣ್ಣ ಕಲ್ಲೂರ, ಪ್ರಶಾಂತ ಅಲಗೊಂಡ, ಪ್ರಶಾಂತ ಕಾಳೆ, ಜಾವೇದ ಮೋಮಿನ, ಶ್ರೀಮಂತ ಇಂಡಿ, ಜಟ್ಟೆಪ್ಪ ರವಳಿ ಮತ್ತಿತರರಿದ್ದರು.