ಇಂಡಿ: ದೇಹಕ್ಕೆ ಆಹಾರ, ನೀರು ಎಷ್ಟು ಮುಖ್ಯವೋ, ಹಾಗೆಯೇ ಮನಸ್ಸಿಗೆ ಭಕ್ತಿ ಅಷ್ಟೇ ಮುಖ್ಯ. ಭಕ್ತಿ ತತ್ವದಲ್ಲಿ ಪರಮಾತ್ಮನಲ್ಲಿ ಸಮರ್ಪಣಾ ಭಾವವಿದ್ದಾಗ ಭಕ್ತಿಯ ಮೂಲಕ ಜ್ಞಾನ ವೃದ್ಧಿಯಾಗುತ್ತದೆ ಎಂದು ಶಿರಶ್ಯಾಡ ಶ್ರೀ ಅಭಿನವ ಮುರುಘೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಶ್ರೀ ಅಭಿನವ ಮುರುಘೇಂದ್ರ ಶ್ರೀಗಳು ಸಂಸ್ಥಾನ ಮಠ ಹಿರೇಮಠ ಶಾಖಾ ಮಠದಲ್ಲಿ ಆಯೋಜಿಸಲಾಗಿದ್ದ 7ನೇ ಹುಣ್ಣಿಮೆ ಕಾರ್ಯಕ್ರಮ ಹಾಗೂ ಆದರ್ಶ ದಂಪತಿಗಳಿಗೆ ಅಭಿನವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಹಪರ ಎರಡಕ್ಕೂ ಭಕ್ತಿಯೇ ಪ್ರಮುಖ ಸೇತುವೆಯಾಗಿದೆ. ಅಂತಹ ಭಕ್ತಿಯನ್ನು ಗುರುಗಳ ತತ್ವ ಚಿಂತನೆ ಮೂಲಕ ಪ್ರತಿಯೊಬ್ಬರೂ ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದರು. ಆದರ್ಶ ದಂಪತಿ ವೇದಮೂರ್ತಿ ಮಲ್ಲಯ್ಯ ರುದ್ರಯ್ಯ ಮಠಪತಿ ಹಾಗೂ ನೀಲಾಬಾಯಿ ಮಲ್ಲಯ್ಯ ಮಠಪತಿ ದಂಪತಿಯನ್ನು ಅಭಿನವ ಶ್ರೀ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಲಾಯಿತು.
ನಿವೃತ್ತ ಪ್ರಾಧ್ಯಾಪಕ ಎಸ್.ಎಸ್. ಮಜ್ಜಗಿ, ಮಲ್ಲಿಕಾರ್ಜುನ ಬುರಕುಲೆ, ನ್ಯಾಯವಾದಿ ಸೋಮು ನಿಂಬರಗಿಮಠ, ವೇದಮೂರ್ತಿ ದಾನಯ್ಯ ಸಿದ್ರಾಮಯ್ಯ ಹಿರೇಮಠ, ವೇದಮೂರ್ತಿ ವಿವೇಕಾನಂದ ದುಂಡಯ್ಯ ಚೋರಗಿಮಠ, ತಾ.ಪಂ. ಮಾಜಿ ಸದಸ್ಯ ಜೀತಪ್ಪ ಕಲ್ಯಾಣಿ ಮತ್ತಿತರರಿದ್ದರು.