ಮುದ್ದೇಬಿಹಾಳ : ಪಟ್ಟಣದ ಹುಡ್ಕೋ ಬಡಾವಣೆ ಯಲ್ಲಿ ಚೂಡಿದಾರ ತೊಟ್ಟಿರುವ ಅಪರಿಚಿತ ಯುವತಿ ಯಾರೂ ಇಲ್ಲದ ಮನೆಗಳಿಗೆ ನುಗ್ಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಹುಡ್ಕೋದಲ್ಲಿರುವ ಪವನ್ ಸುಕಾಲಿ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹಗಲಿನಲ್ಲಿಯೇ ಅಪರಿಚಿತ ಯುವತಿ, ಅವರ ಮನೆಯ ಮೆಟ್ಟಿಲುಗಳಿಂದ ಕೆಳಗೆ ಇಳಿಯುತ್ತಿರುವ ದೃಶ್ಯ ದಾಖಲಾಗಿದೆ. ನಂತರ ಆಕೆ ಕಂಪೌಂಡ್ ಜಿಗಿದು ಹೊರಗೆ ಹೋಗಿರುವ ದೃಶ್ಯ ಇನ್ನೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯಗಳಲ್ಲಿ ದಾಖಲಾಗಿರುವ ಚೂಡಿದಾರ ತೊಟ್ಟಿರುವ ಯುವತಿ ಕಂಪೌಂಡ್ ಜಿಗಿಯುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಆಕೆ ನಾಪತ್ತೆಯಾಗಿದ್ದಾಳೆ. ಅಲ್ಲಿರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆಕೆ ಕೆಲವು ರಸ್ತೆಗಳಲ್ಲಿ ತಿರುಗಾಡುತ್ತಿರುವುದು ಕಂಡು ಬಂದಿದೆ. ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರಿಗೆ ನಿವಾಸಿಗಳು ನೀಡಿದ್ದು, ಬಡಾವಣೆಗೆ ಪೊಲೀಸ್ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.