ವಿಜಯಪುರ ನಗರದ ಗಗನ ಮಹಲ್ ಬಳಿ ನಡೆದ ಧರಣಿಯನ್ನುದ್ದೇಶಿಸಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು. ಮಾಜಿ ಶಾಸಕ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ ಇತರರಿದ್ದಾರೆ. 
ವಿಜಯಪುರ

ಅನ್ನದಾತರ ಸಾಲ ಸಂಪೂರ್ಣ ಮನ್ನಾ ಮಾಡಿ

ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಬಿಜೆಪಿಯಿಂದ ಧರಣಿ ಆರಂಭ

ವಿಜಯಪುರ: ಜಿಲ್ಲೆಯನ್ನು ಸಂಪೂರ್ಣವಾಗಿ ಬರ ಪೀಡಿತ ಎಂದು ಘೋಷಿಸಿ ತ್ವರಿತವಾಗಿ ಪರಿಹಾರ ನೀಡಬೇಕಲ್ಲದೇ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು.

ನಗರದ ಗಗನ ಮಹಲ್ ಮುಂಭಾಗದಲ್ಲಿ ಸೋಮವಾರ ಧರಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರಗಾಲ ಘೋಷಣೆ ವಿಷಯದಲ್ಲೂ ರಾಜಕಾರಣ ಮಾಡುತ್ತಿರುವುದು ದುರ್ದೈವದ ಸಂಗತಿ, ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. 

ಈ ಬಗ್ಗೆ ಅವರ ಸ್ವ ಪಕ್ಷೀಯ ಶಾಸಕರೇ ಆರೋಪ ಮಾಡಿದ್ದಾರೆ, ಇಂಡಿ, ತಾಳಿಕೋಟೆ, ಚಡಚಣ ಭಾಗ ಹೆಚ್ಚು ಬರ ಪೀಡಿತವಾಗಿರುವುದು ಸಣ್ಣ ಮಗುವಿಗೂ ಗೊತ್ತಿರುವ ಸಂಗತಿ, ಆದರೆ ಇದು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ ಎಂದರು.ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದ ಇಂಡಿ ಶಾಸಕರು ಬರಗಾಲ ಘೋಷಣೆ ವಿಷಯದಲ್ಲಿ ರಾಜೀನಾಮೆ ನೀಡುವ ನಿರ್ಧಾರ ಏಕೆ ಪ್ರಕಟಿಸಲಿಲ್ಲ? ಅನ್ನದಾತನಿಗಿಂತ ಅಧಿಕಾರವೇ ಹೆಚ್ಚಾಯಿತೇ ಎಂದು ಪ್ರಶ್ನಿಸಿದರು.

ಶಾಸಕರ ಸಂಬಳ ರೈತರಿಗೆ ನೀಡಿ: ಭೀಕರ ಬರಗಾಲ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸಚಿವರು, ಶಾಸಕರು, ಹಾಗೂ ಕಾರ್ಯಾಂಗದ ಉನ್ನತಾಧಿಕಾರಿಗಳು ತಮ್ಮ ಸಂಬಳ ಹಾಗೂ ಎಲ್ಲ ರೀತಿಯ ವೆಚ್ಚಗಳನ್ನು ಸಂಪೂರ್ಣ ಕಡಿತಗೊಳಿಸುವ ನಿರ್ಧಾರ ಪ್ರಕಟಿಸಬೇಕು, ಪ್ರಸಕ್ತ ಅಧಿವೇಶನದಲ್ಲಿಯೇ ಈ ನಿರ್ಣಯ ಸರ್ಕಾರ ಪ್ರಕಟಿಸಿ ಸಾಲ ಮನ್ನಾ ಮಾಡಬೇಕು ಎಂದರು.

ವಿಮಾ ವಿಷಯದಲ್ಲಿಯೂ ದೊಡ್ಡ ಹಿಂಸೆ ರೈತರಿಗೆ ಆಗುತ್ತಿದೆ. ಈ ಶೋಷಣೆ ನಿವಾರಣೆಯಾಗಬೇಕು. ಮೂರನೇ ಮಹಡಿಯಲ್ಲಿರುವವರು ಲಕ್ಷಾಂತರ ಖರ್ಚು ಸರ್ಕಾರದಿಂದ ಪಡೆದು ವೈಭೋಗದ ಜೀವನ ನಡೆಸುತ್ತಿದ್ದಾರೆ, ಅದಕ್ಕೆ ಕೂಡಲೇ ಬ್ರೇಕ್ ಹಾಕಿ ಹಿಂಗಾರು ಹಾಗೂ ಮುಂಗಾರು ಬೆಳೆ ಹಾನಿ ಹಾಗೂ ರೈತ ಒಂದು ವರ್ಷದವರೆಗೆ ತನ್ನ ಬಾಳಿನ ಬಂಡಿ ಮುನ್ನಡೆಸಲು ಕೂಡಲೇ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಪ್ಯಾಕೇಜ್ ಘೋಷಿಸಬೇಕು ಹಾಗೂ ರೈತರು ಪಡೆದ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದರು.

ರೈತರ ಪರ ನಿರ್ಧಾರ ಅಧಿವೇಶನದಲ್ಲಿ ಮೊಳಗದೇ ಹೋದರೆ ನಾವು ಸುಮ್ಮನೆ ಇರುವುದಿಲ್ಲ, ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದರು.

ನಾಳೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಭೀಕರ ಬರ ಪರಿಸ್ಥಿತಿ ಇದೆ, ಅನ್ನ ನೀಡುವ ಅನ್ನದಾತ ಬರ ಘೋಷಣೆ, ಸಾಲ ಮನ್ನಾ ಮಾಡಲು ಬೀದಿಗಿಳಿಯಬೇಕಾದ ಅನಿವಾರ್ಯತೆಯನ್ನು ಸರ್ಕಾರ ಸೃಷ್ಟಿಸಿದೆ, ರೈತರು ಕೇಳುವ ಮುನ್ನವೇ ಸಾಲಮನ್ನಾ ನಿರ್ಧಾರ ಪ್ರಕಟಿಸಬೇಕಾದ ಸರ್ಕಾರ ರೈತರು ಹೋರಾಟಕ್ಕಿಳಿದರೂ ಚಕಾರ ಎತ್ತುತ್ತಿಲ್ಲ ಎಂದರು.

ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಬರದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕಾಟಾಚಾರಕ್ಕೆ ಬರ ಘೋಷಣೆ ಮಾಡುವುದನ್ನು ಬಿಟ್ಟು ವಾಸ್ತವ ಪರಿಸ್ಥಿತಿ ಅರಿತು ತಕ್ಷಣ ಪರಿಹಾರ ನೀಡಬೇಕು. ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸಮರ್ಪಕ ಪರಿಹಾರ ಒದಗಿಸುವುದರೊಂದಿಗೆ ಕೂಡಲೇ ಸಾಲ ಮನ್ನಾ ಮಾಡಬೇಕು ಎಂದರು.

ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ್ ರೆಡ್ಡಿ, ಮುಖಂಡರಾದ ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ, ಚಂದ್ರಶೇಖರ ಕವಟಗಿ, ಉಮೇಶ ಕೋಳಕೂರ, ಶಿಲ್ಪಾ ಕುದರಗೊಂಡ, ವಿಜಯ ಜೋಶಿ, ಚಿದಾನಂದ ಚಲವಾದಿ, ಪರಶುರಾಮ ರಜಪೂತ, ರವಿಕಾಂತ ಬಗಲಿ, ಈರಣ್ಣ ರಾವೂರ, ರಾಜಶೇಖರ ಡೊಳ್ಳಿ, ಸಂಪತ್ ಕೋಹಳ್ಳಿ, ಸ್ವಪ್ನಾ ಕಣಮುಚನಾಳ, ಭರತ ಕೋಳಿ ಇತರರಿದ್ದರು.