ವಿಜಯಪುರ ನಗರದಲ್ಲಿ ದಯಾನಂದ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿದರು.
- ಯಂಕಂಚಿಯಲ್ಲಿ ಪ್ರಾಣಿ ಬಲಿ ತಡೆಗೆ ಆಗ್ರಹ
- ಪ್ರಾಣಿ ಬಲಿ ಪ್ರತಿಬಂಧಕ ಕಾಯ್ದೆ ಅನುಷ್ಟಾನಕ್ಕೆ ಒತ್ತಾಯ
- ದಾವಲ್ ಮಲಿಕ್ ಜಾತ್ರೆಯಲ್ಲಿ ಹಿಂಸೆ ಬೇಡ
ವಿಜಯಪುರ: ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಕಾಯ್ದೆ (1959) ಅನ್ವಯ ಯಂಕಂಚಿಯ ದಾವಲ್ ಮಲಿಕ್ ಉರುಸು (ಜಾತ್ರಾ ಮಹೋತ್ಸವ)ದಲ್ಲಿ ನಡೆಯುವ ಪ್ರಾಣಿ ಬಲಿಯನ್ನು ಕೂಡಲೇ ತಡೆಯಬೇಕು ಎಂದು ಪಶು-ಪ್ರಾಣಿ ಬಲಿ ನಿರ್ಮೂಲನಾ ಜಾಗೃತ ಮಹಾಸಂಘದ ಪ್ರಮುಖರಾದ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.
ಯಂಕಂಚಿಯ ದಾವಲ್ ಮಲಿಕ್ ಜಾತ್ರೆ (ಉರುಸು) ಸಂದರ್ಭದಲ್ಲಿ ಸಾವಿರಾರು ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಕಳೆದ ಬಾರಿಯೂ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೆ. ಈ ಬಾರಿಯೂ ನಾನು ಈ ವಿಷಯವನ್ನು ಗಮನಕ್ಕೆ ತಂದಿರುವೆ. ಕೂಡಲೇ ಅಲ್ಲಿ ನಡೆಯುವ ಪ್ರಾಣಿ ಬಲಿಯನ್ನು ತಡೆಯಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ಕರ್ನಾಟಕ ಸಂಪೂರ್ಣ ಪ್ರಾಣಿ ಬಲಿ ಮುಕ್ತ ರಾಜ್ಯ ಎಂದು ಘೋಷಿಸಿಕೊಂಡಿದೆ. 1959 ರಲ್ಲಿ ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಕಾಯ್ದೆ ಅನ್ವಯ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಪ್ರಾಣಿಬಲಿ ಕೊಡುವಂತಿಲ್ಲ. ಈ ಮೊದಲು ಕೇವಲ ಹಿಂದೂ ದೇವಾಲಯಕ್ಕೆ ಸೀಮಿತವಾಗಿದ್ದ ಈ ಕಾಯ್ದೆಯನ್ನು ತಿದ್ದುಪಡಿ ತಂದು ಎಲ್ಲ ಧಾರ್ಮಿಕ ಪ್ರದೇಶಗಳನ್ನು ಸೇರ್ಪಡೆ ಮಾಡಲಾಗಿದೆ. ಎಲ್ಲಿಯೂ ಪ್ರಾಣಿ ಬಲಿಗೆ ಅವಕಾಶವಿಲ್ಲ. ಈ ಕುರಿತು ಹೈಕೋರ್ಟ್ ತೀರ್ಪು ಸಹ ಇದೆ ಎಂದರು.
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಾಣಿ ಬಲಿ ನಡೆಯುತ್ತಿರುವ ದೂರು ಬಂದರೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ಅವಕಾಶವಿದೆ, ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಣೆ ದೂರು ದಾಖಲಿಸಿಕೊಳ್ಳಬೇಕೆಂದು ಸ್ವಾಮೀಜಿ ಒತ್ತಾಯಿಸಿದರು.
ಯಾವುದೇ ದೇವಾಲಯವಾಗಲಿ, ದರ್ಗಾದಲ್ಲಾಗಲಿ ಈ ಪ್ರಾಣಿ ಬಲಿ ನಡೆಯಬಾರದು. ಮಾನವ ಸ್ವಾರ್ಥ ಸಾಧನೆಗಾಗಿ ಪ್ರಾಣಿಗಳಿಗೆ ಬಲಿ ನೀಡುತ್ತಿದ್ದಾನೆ. ಬಸವಾದಿ ಶರಣರು ಸಹ ಪ್ರಾಣಿಗಳ ಮೇಲೆ ದಯೆ ಇರಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಲಕ್ಷಾಂತರ ಹಿಂದೂ ಮಂದಿರಗಳಲ್ಲಿಯೂ ಪ್ರಾಣಿ ಬಲಿ ನಡೆಯುತ್ತಿದೆ. ಹೀಗಾಗಿ ಹಿಂದೂ ದೇವಾಲಯಗಳನ್ನು ಶುದ್ಧೀಕರಿಸಬೇಕು. ಅಲ್ಲಿ ಪ್ರಾಣಿ ಬಲಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರನ್ನು ಒತ್ತಾಯಿಸಲಾಗುವುದು. ದಾವಲ್ ಮಲಿಕ್ ದರ್ಗಾಕ್ಕೆ ಭೇಟಿ ನೀಡಿ ಅಲ್ಲಿ ಭಕ್ತರಿಗೆ ಕೈ ಮುಗಿದು ಕೋರಿಕೊಳ್ಳುವೆ ಎಂದರು.