- ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹ
- ಪಿಪಿಪಿ ಮಾದರಿ ಕೈ ಬಿಡಲು ಒತ್ತಾಯ
- ಹೋರಾಟಗಾರರ ಬಂಧನ-ಎಫ್‌ಐಆರ್ ದಾಖಲು ಪ್ರಕರಣ
ವಿಜಯಪುರ: ‘ಪಿಪಿಪಿ ಮಾದರಿ ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸುವ ಭರವಸೆ ನೀಡಲಾಗಿದೆ, ಸಿಎಂ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿಸಲಾಗಿದೆ, ಸಿದ್ದರಾಮಯ್ಯ ಅವರಿಂದಲೂ ಹೇಳಿಸಲಾಗಿದೆ, ಇಷ್ಟಾದರೂ ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಹೋರಾಟ ನಡೆಸುವವರ ಉದ್ದೇಶವಾದರೂ ಏನು?’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದರು.
‘ಪಿಪಿಪಿ ಮಾದರಿ ಕೈ ಬಿಡುವುದಾಗಿಯೂ ತಡವಾಗಿಯಾದರೂ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ನಾನು ಸಹ ಅನೇಕ ಬಾರಿ ಸ್ಪಷ್ಟ ಪಡಿಸಿದ್ದೇನೆ. ಆದರೂ ಧರಣಿ ನಡೆಸುವುದರ ಹಿಂದಿನ ಉದ್ದೇಶವೇನು? ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಅವರು ಮರು ಪ್ರಶ್ನೆ ಎಸೆದರು.
ಹೋರಾಟಗಾರರ ಬಗ್ಗೆ ಗೌರವ ಇದೆ. ಈಗಲೂ ಜ. 9 ರಂದು ಸಿದ್ದರಾಮಯ್ಯ ಅವರು ಜಿಲ್ಲೆಗೆ ಆಗಮಿಸುತ್ತಿದ್ದು, ಆ ವೇಳೆ ಭೇಟಿ ಮಾಡಿಸುವುದಾಗಿ ತಿಳಿಸಿದರು. ಆದರೆ, ಹೋರಾಟಗಾರರು ಜೈಲಿನಲ್ಲಿದ್ದಾರಲ್ಲ ಎಂಬ ಪ್ರಶ್ನೆಗೆ ‘ಅದು ನನಗೆ
ಗೊತ್ತಿಲ್ಲ...ಹೋರಾಟಗಾರರು ಸಮವಸ್ತ್ರದಲ್ಲಿರುವ ಪೊಲೀಸರಿಗೆ ಕಪಾಳಕ್ಕೆ ಹೊಡೆದರೆ ನಡೆಯುತ್ತದಾ? ಪತ್ರಕರ್ತರನ್ನೇ ಹೊಡೆದರೆ ಸುಮ್ಮನಿರುತ್ತೀರಾ....?’ ಎಂದ ಸಚಿವರು ‘ಕಪಾಳಕ್ಕೆ ಹೊಡೆದವರೂ ಕ್ಷಮೆ ಕೇಳ ಬೇಕಾಗುತ್ತದೆ’ ಎಂದರು.