ವಿಜಯಪುರ ನಗರದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆಯ ನೋಟ. 
ವಿಜಯಪುರ

ದಂಡಕ್ಕಿರುವ ಆದ್ಯತೆ ನಿರ್ವಹಣೆಗೇಕಿಲ್ಲ? ಸಂಚಾರಿ ಪೊಲೀಸರ ಕಾರ್ಯವೈಖರಿಗೆ ಜನ ಬೇಸರ

ಪ್ರಮುಖ ಮುಖ್ಯಾಂಶಗಳು

  • ಸಂಚಾರಿ ನಿಯಮಗಳ ಉಲ್ಲಂಘನೆ
  • ಸಿಗ್ನಲ್‌ಗಳು ಆಟಕ್ಕುಂಟು-ಲೆಕ್ಕಕ್ಕಿಲ್ಲ
  • ವಿಭಾಗದ ಕಾರ್ಯವೈಖರಿಗೆ ಬೇಸರ

ವಿಜಯಪುರ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮನಗೂಳಿ ಬ್ಯಾಂಕ್ ಕಳ್ಳತನ ಪ್ರಕರಣ, ಚಡಚಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ, ಚಿನ್ನದ ಅಂಗಡಿಯಲ್ಲಿನ ದಾಳಿ ಪ್ರಕರಣ, ಚೆಡ್ಡಿ ಗ್ಯಾಂಗ್ ಪ್ರಕರಣಗಳನ್ನು ಭೇದಿಸಿ ಭೇಷ್ ಎನ್ನಿಸಿಕೊಂಡಿರುವ ವಿಜಯಪುರ ಪೊಲೀಸ್ ಇಲಾಖೆಯ ಕಾರ್ಯತತ್ಪರತೆ, ಘನತೆ ಮತ್ತು ಗೌರವವನ್ನು ಸಂಚಾರಿ ಪೊಲೀಸ್ ವಿಭಾಗ ‘ಚಿಲ್ಲರೆ ಪ್ರಕರಣ’ಗಳಲ್ಲಿ ಹಾಳುಗೆಡವುತ್ತಿದೆಯೇ?

ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿರುವ ವಿಜಯಪುರದ ಸಂಚಾರಿ ವ್ಯವಸ್ಥೆಯನ್ನು ಅವಲೋಕಿಸಿದಾಗ ಇಂಥದ್ದೊಂದು ಪ್ರಶ್ನೆ ಸಹಜ.
ಜಿಲ್ಲೆಯವರೇ ಆಗಿರುವ ಲಕ್ಷ್ಮಣ ನಿಂಬರಗಿ ಅವರು ಪೊಲೀಸ್ ವರಿಷ್ಟಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದಾಗ ಜನರಲ್ಲೊಂದು ಹೊಸ ಆಶಾಕಿರಣ ಗೋಚರಿಸಿತು. ಆರಂಭದಲ್ಲಿಯೇ ಅಕ್ರಮ ಸಾರಾಯಿ ಮಾರಾಟದ ವಿರುದ್ಧ ಸಮರ ಸಾರಿದ ನಿಂಬರಗಿ ಅವರಿಂದ ಮಹತ್ತರ ಬದಲಾವಣೆಯನ್ನು ನಿರೀಕ್ಷಿಸಿದ್ದರು. ರಾಜ್ಯವನ್ನೇ ಬೆಚ್ಚಿಬೀಳಿಸುವ ಕಳ್ಳತನ, ದರೋಡೆ, ಕೊಲೆ ಪ್ರಕರಣಗಳನ್ನು ಭೇದಿಸಿದಾಗ, ರೌಡಿಶೀಟರ್‌ಗಳನ್ನು ಹೆಡೆಮುರಿ ಕಟ್ಟಿ ಗಡಿದಾಟಿಸಿದಾಗಲೆಲ್ಲ ಇಲಾಖೆ ಕುರಿತ ಅಭಿಮಾನ ಹೆಚ್ಚಾಗಿತ್ತು. ಈಗಲೂ ಹೆಚ್ಚಾಗಿಯೇ ಇದೆ. ಆದರೆ, ಸಂಚಾರಿ ವ್ಯವಸ್ಥೆ ನಿರ್ವಹಣೆಯಲ್ಲಿ ಕೆಳಹಂತದ ಪೊಲೀಸರು, ಎಎಸ್‌ಐ ಹಾಗೂ ಪಿಎಸ್‌ಐ ವಿಫಲರಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತವಾಗುತ್ತಿದೆ.
ದಂಡ ವಸೂಲಿಗೆ ನೀಡುತ್ತಿರುವ ಆದ್ಯತೆ ಸಂಚಾರ ದಟ್ಟಣೆ ನಿರ್ವಹಿಸುವಲ್ಲಿ, ಪೊರ್ಕಿಗಳ ಬೈಕ್ ಸೈಲೆನ್ಸ್‌ರಗಳ ಕರ್ಕಶ ಧ್ವನಿಯ ಹಾವಳಿ ತಡೆಯುವಲ್ಲಿ, ಶಾಲೆ-ಕಾಲೇಜ್ ಮತ್ತು ಆಸ್ಪತ್ರೆಗಳ ಬಳಿ ಪುಂಡ ಪೋಕಿರಿಗಳು ತ್ರಿಬಲ್ ರೈಡ್ ಮಾಡುತ್ತಲೇ ಮೆರೆಯುತ್ತಿರುವ ಅಟಾಟೋಪಕಕ್ಕೆ ಕಡಿವಾಣ ಹಾಕುವಲ್ಲಿ ಈ ಸಂಚಾರಿ ಪೊಲೀಸರು ವಿಫಲರಾಗುತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಸಾಕಷ್ಟು ಬೇಸರ ಮತ್ತು ಆಕ್ರೋಶವಿದೆ. ಪ್ರಮುಖ ವೃತ್ತಗಳಲ್ಲಿ ಕೆಂಪು ದೀಪ ಉರಿಯುತ್ತಿದ್ದರೂ ನಿಯಮ ಉಲ್ಲಂಘಿಸುವವರ ಮೇಲೆ ಯಾವುದೇ ಕ್ರಮಗಳಾಗದಿರುವುದು ಮತ್ತು ಗ್ರಾಮೀಣ ಭಾಗಗಳಿಂದ ಬಂದ ಅಮಾಯಕ ರೈತರು, ಕೂಲಿಕಾರ್ಮಿಕರು, ಸರ್ಕಾರಿ ಕಚೇರಿಗಳ ಕಾಮಗಾರಿಗಳಿಗಾಗಿ ಬರುವ ಗೂಡ್ಸ್ ವಾಹನಗಳು ಸಣ್ಣ-ಪುಟ್ಟ ನಿಯಮ ಉಲ್ಲಂಘಿಸಿದಾಗ ದಂಡ ಹಾಕುವುದು ಕಾನೂನು ದೃಷ್ಠಿಯಿಂದ ಸರಿಯೇ ಆದರೂ ರಾಜಾರೋಷವಾಗಿ ನಿಯಮ ಉಲ್ಲಂಘಿಸಿಕೊಂಡು ಹೋಗುವ ಪುಂಢರ ಆಟಾಟೋಪಕ್ಕೆ ಕಡಿವಾಣ ಬೀಳದೇ ಇರುವುದಕ್ಕೆ ಏನೆನ್ನುವುದು? ಯಾರನ್ನು ಪ್ರಶ್ನಿಸುವುದು?
ಪ್ರತಿ ಸಿಗ್ನಲ್ ಅಥವಾ ಜನದಟ್ಟಣೆ ಪ್ರದೇಶಗಳನ್ನು ಗಮನಿಸಿದಾಗ ಈ ಸಂಚಾರಿ ಪೊಲೀಸರು ದಟ್ಟಣೆ ಇರುವ ಪ್ರದೇಶದಿಂದ ದೂರ ಇರುವ ಸಂದಿ-ಗೊಂದಿಯಲ್ಲಿ ನಿಂತಿರುವುದು ಕಂಡು ಬರುತ್ತದೆ. ಆಟೋಗಳು, ಬೈಕ್‌ಗಳ ದಟ್ಟ ಹೊಗೆ ಸಿಗ್ನಲ್‌ಗಳನ್ನು ಆವರಿಸುತ್ತಿದ್ದರೂ ಅದನ್ನು ತಡೆದು ದಂಡ ಹಾಕಿ ಹೊಗೆ ತಪಾಸಣೆಗೆ ದೂಡುವ ಕೆಲಸ ನಡೆಯದೇ ಇರುವುದು ನಿತ್ಯ ಕಂಡು ಬರುತ್ತಿದೆ. ಈ ನಿಯಮ ಉಲ್ಲಂಘಿಸುವವರ ಮಧ್ಯೆ ನಿಯಮ ಪಾಲಿಸುವವರೇ ಮೂರ್ಖ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಟಗಿ ಪೆಟ್ರೋಲ್ ಪಂಪ್ ಬಳಿ ಇರುವ ಸಿಗ್ನಲ್ ಅಂತೂ ‘ಸಾವಿನ ಸರ್ಕಲ್’ ಎಂದೇ ಪ್ರಸಿದ್ಧವಾಗಿದೆ. ಸಿಗ್ನಲ್‌ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಹೀಗಾಗಿ ಕೂಡಲೇ ಸಂಚಾರಿ ಪೊಲೀಸ್ ವಿಭಾಗದ ಪಿಎಸ್‌ಐ ಮತ್ತು ಎಎಸ್‌ಐ ಆದಿಯಾಗಿ ಸಿಬ್ಬಂದಿಯೆಲ್ಲ ‘ದಂಡಕ್ಕೆ ನೀಡುವ ಆದ್ಯತೆ ನಿರ್ವಹಣೆಗೂ ನಿಡಲಿ’ ಎಂಬುದು ಪ್ರಜ್ಞಾವಂತರ ಆಶಯ.