ಹಿರೇಮಸಳಿಯ ಹಳ್ಳದಲ್ಲಿ ಕಿತ್ತುಹೋಗಿರುವ ಸೇತುವೆಯ ಅವಶೇಷ.
- ಹಿರೇಮಸಳಿಯಲ್ಲಿ ಹಳ್ಳದ ಸೇತುವೆ ಸಂಪೂರ್ಣ ಹಾಳು
- ಮನವಿ ಸಲ್ಲಿಸಿದರೂ ಕ್ಯಾರೆ ಎನ್ನದ ಅಧಿಕಾರಿಗಳು
- ನಿತ್ಯ ನರಕಯಾತನೆ ಅನುಭವಿಸುತ್ತಿರುವ ಶಾಲೆ ಮಕ್ಕಳು
ವಿಜಯಪುರ: ಅತಿವೃಷ್ಠಿ ಹಾಗೂ ಪ್ರವಾಹದಿಂದಾಗಿ ಉಂಟಾದ ಬೆಳೆ ಹಾನಿಗೆ ಸರ್ಕಾರ ಈಗಾಗಲೇ ಪರಿಹಾರ ನೀಡುತ್ತಿದೆ. ಆದರೆ, ಭೌತಿಕ ಹಾನಿಗೆ ಯಾವುದೇ ಪರಿಹಾರ ಇಲ್ಲದ ಕಾರಣ ಜನ ಸಂಕಷ್ಟಕ್ಕೆ ಮುಕ್ತಿ ಇಲ್ಲದಾಗಿದೆ !
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಹಳ್ಳದ ಸೇತುವೆ ಸಂಪೂರ್ಣ ಕಿತ್ತು ಹೋಗಿದೆ. ಹಿರೇಮಸಳಿಯಿಂದ ನಾದ ಬಿಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಬರುವ ಹಳ್ಳದ ಸೇತುವೆ ಸಂಪೂರ್ಣ ಕಿತ್ತು ಹೋಗಿದ್ದರಿಂದ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಹೀಗಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಆಡಳಿತ ವರ್ಗದ ವಿರುದ್ಧ ಹಿಡಿಶಾಪ ಹಾಕುವುದು ಬಿಟ್ಟರೆ ಬೇರೆ ದಾರಿ ಕಾಣದೇ ಅವಡುಗಚ್ಚಿ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ಚುನಾವಣೆಗಳಿಗಾಗಿ ಎದುರು ನೋಡುತ್ತಿದ್ದಾರೆ.
ಶಾಲೆ ಮಕ್ಕಳಿಗೆ ಸಂಕಷ್ಟ:
ಹಿರೇಮಸಳಿಯಿಂದ ನಾದ ಬಿಕೆ ಗ್ರಾಮದ ಮಧ್ಯೆ ಅನೇಕ ವಸತಿಗಳು, ತೋಟದ ಮನೆಗಳು ಮತ್ತು ಶಾಲೆಗಳಿದ್ದು ನಿತ್ಯ ಸಂಚಾರ ಅನಿವಾರ್ಯ. ಮಕ್ಕಳು ಶಾಲೆಗೆ ತೆರಳಲು ಹಳ್ಳದಾಟಿ ಹೋಗಬೇಕಿದ್ದು, ಸೇತುವೆ ಇಲ್ಲದ ಕಾರಣ ಬಟ್ಟೆ ಕಳಚಿ ನೀರಿನಲ್ಲಿ ತೆರಳುವ ದೃಶ್ಯ ಕರಳು ಚುರ್ ಎನ್ನುವಂತಾಗಿಸುತ್ತದೆ. ಜಮೀನುಳಿಗೆ ಕೂಲಿ ಕಾರ್ಮಿಕರನ್ನು ಕರೆದೊಯ್ಯಲು ವಾಹನಗಳು ಸುಮಾರು 10 ಕಿಮೀ ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯತೆ ಇದೆ. ಜಮೀನಿನಲ್ಲಿ ಬೆಳೆದ ಫಸಲು ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡಬೇಕಿದೆ. ಸೇತುವೆ ಮಾತ್ರವಲ್ಲ, ಇಡೀ ರಸ್ತೆ ಹಾಳಾಗಿದೆ. ಹೀಗಾಗಿ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಮನವಿ ಸಲ್ಲಿಸಿ ಸುಸ್ತು
ಸ್ಥಳೀಯ ನಂದ್ಯಾಳ ವಸತಿ, ಪಟ್ಟಣಶೆಟ್ಟಿ ವಸತಿ, ಡೊಂಗ್ರೋಜಿ ವಸತಿ ಸೇರಿದಂತೆ ಹಲವು ವಸತಿಗಳ ನಿವಾಸಿಗಳು ತಾಲೂಕು ಪಂಚಾಯಿತಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಲ್ಲದೇ ಅಧಿಕಾರಿಗಳಿಗೆ ಪರಿಸ್ಥಿತಿಯ ಮನವರಿಕೆ ಕೂಡ ಮಾಡಿದ್ದಾರೆ. ಶಾಸಕರಿಗೂ ಮನವಿ ಮಾಡಲಾಗಿ ತಾತ್ಕಾಲಿಕವಾಗಿ ಗರಸು ಹಾಕಲೆಂದು ಸ್ವಲ್ಪ ಹಣ ನೀಡಿದ್ದಾರೆ ಹೊರತು ಕಾಮಗಾರಿ ಕೈಗೊಂಡಿಲ್ಲವೆಂಬುದು ಸ್ಥಳೀಯ ಅಂಬೋಣ.
ಈ ಹಿಂದೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದಲೇ ಅಂದಾಜು 10 ಲಕ್ಷ ರೂಪಾಯಿ ಅನುದಾನದಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಈಗ ಗಟ್ಟಿಮುಟ್ಟಾದ ಸೇತುವೆಯೇ ನಿರ್ಮಾಣ ಮಾಡಿದರೆ ಸುದೀರ್ಘ ಬಾಳಿಕೆ ಬರುವುದಲ್ಲದೇ ಪ್ರವಾಹ ಮತ್ತು ಅತಿವೃಷ್ಠಿಯಿಂದ ಹಾಳಾಗಲು ಸಾಧ್ಯವಿಲ್ಲ. ಹೀಗಾಗಿ ಕೂಡಲೇ ಸೇತುವೆ ನಿರ್ಮಿಸಬೇಕೆಂದು ಮುಖಂಡ ಭೋಜರಾಜ ಚಾಂದಕವಟೆ ‘ವಿಜಯವಾಣಿ’ ಮುಂದೆ ಅಲವತ್ತುಕೊಂಡಿದ್ದಾರೆ.
ಹಳ್ಳದ ಸೇತುವೆ ಹಾಳಾಗಿದ್ದರಿಂದ ಶಾಲೆ ಮಕ್ಕಳು ಕಿಲೋ ಮೀಟರ್‌ಗಟ್ಟಲೆ ಸುತ್ತುವರೆದು ಶಾಲೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ರೈತರು ರಾತ್ರಿ ಹೊತ್ತು ಜಮೀನುಗಳಿಗೆ ತೆರಳುವುದು ದುಸ್ತರವಾಗಿದೆ. ಸೇತುವೆ ಮತ್ತು ರಸ್ತೆ ಇಲ್ಲದ ಕಾರಣ ವಿಷ ಜಂತುಗಳ ಹಾವಳಿಯಿಂದಾಗಿ ಜನ ಸಂಚಾರವನ್ನೇ ಸ್ಥಗಿತಗೊಳಿಸುತ್ತಿದ್ದಾರೆ. ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸಬೇಕು.
— ಭೋಜರಾಜ ಚಾಂದಕವಟೆ, ಗ್ರಾಮಸ್ಥ