ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್‌ನ ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಡಾ.ಗಂಗಾಧರ ಸಂಬಣ್ಣಿ, ಅಪ್ಪು ಪೂಜಾರಿ ಇತರರಿದ್ದಾರೆ.
- ಶಾಸಕ ಯತ್ನಾಳ ಮೇಲೆ 40ಕ್ಕೂ ಅಧಿಕ ಪ್ರಕರಣ
- ಗೂಂಡಾ ಯಾರು ಆತ್ಮಾವಲೋಕನ ಮಾಡಿಕೊಳ್ಳಿ
- ಅಮಾಯಕರನ್ನು ಪ್ರಚೋದಿಸುವುದು ನಿಲ್ಲಿಸಿ
ವಿಜಯಪುರ: ‘ನನ್ನನ್ನು ಗೂಂಡಾ ಎಂದು ಸಂಬೋಧಿಸುವ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಮೇಲೆ 40ಕ್ಕೂ ಅಧಿಕ ಪ್ರಕರಣಗಳಿವೆ. ಹೀಗಾಗಿ ಅಸಲಿ ಗೂಂಡಾ ಯಾರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ವಾಗ್ದಾಳಿ ನಡೆಸಿದರು.
‘ನಗರದಲ್ಲಿ ಈಚೆಗೆ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ-‘ನಾನು ಕೆಂಗನಾಳಗೆ ಅಂಜಿ ಓಡಿ ಹೋಗಿದ್ದೇನೆ ಎನ್ನುತ್ತೀರಿ, ಇನ್ನೊಂದು ಕಡೆ ಗೂಂಡಾ ಇರುವೆ ಎಂದು ಹೇಳುತ್ತೀರಿ, ನಿಮಗೆ ತಲೆಯಲ್ಲಿ ಸ್ವಲ್ಪವಾದರೂ ಬುದ್ಧಿ ಇದೆಯೋ ಅಥವಾ ಕೇವಲ ಮುಗ್ಧ ಜನರು ಠೇವಣಿ ಇರಿಸಿದ ಸಿದ್ಧಸಿರಿ ರೊಕ್ಕ ತುಂಬಿಕೊಂಡಿದೆಯೇ? ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.
‘ಜಗಳ ಹಚ್ಚುವುದು ಶಾಸಕ ಯತ್ನಾಳರ ಚಟ. ಅಮಾಯಕ ಮಕ್ಕಳಿಗೆ ಪ್ರೋಚದನೆ ನೀಡುವುದು, ಹಿಂಬಾಲಕರನ್ನು ಛೂ ಬಿಡುವುದು ಇವರ ಚಾಳಿ. ತಾಕತ್ತು ಇದ್ದರೆ ಯತ್ನಾಳರೇ ಯುದ್ದಕ್ಕೆ ಬರಲಿ. ಅವರು ಕರೆದಲ್ಲಿಗೇ ನಾನು ಬರಲು ಸಿದ್ಧ’ ಎಂದು ಸವಾಲೆಸೆದರು.
‘ಹಿಂದೂ-ಮುಸ್ಲಿಂರಲ್ಲಿ ಜಗಳ ಹಚ್ಚುವುದು. ರಾಜಕೀಯ ತೆವಲಿಗಾಗಿ ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟುವುದೇ ಯತ್ನಾಳರ ಕಾಯಕ. ಈ ಮನುಷ್ಯ ಅಭಿವೃದ್ಧಿ ಬಗ್ಗೆ ಎಂದೂ ಮಾತನಾಡಿಲ್ಲ. ಕೇವಲ ಅಮಾಯಕ ಯುವಕರನ್ನು ಪ್ರಚೋದಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ’ ಎಂದ ಮುಶ್ರೀಫ್, ‘ಅಸಲಿಗೆ ನಿಮಗೆ ಹಿಂದೂಗಳ ಮೇಲೆ ಕಾಳಜಿ ಇದ್ದರೆ ಬಡ ಹಿಂದೂ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವಾಗಿ, ಉದ್ಯೋಗವಕಾಶ ಕಲ್ಪಿಸಿ, ನಗರದಲ್ಲಿ ಹದಗೆಟ್ಟಿರುವ ರಸ್ತೆ ರಿಪೇರಿ ಮಾಡಿ, ಸ್ಲಂಗಳ ಅಭಿವೃದ್ಧಿ ಮಾಡಿ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ ಪರದಾಡುತ್ತಿರುವ ಜನರಿಗೆ ನೆರವಾಗಿ, ಅಗತ್ಯಬಿದ್ದರೇ ನಿಮ್ಮದೇ ಆಸ್ಪತ್ರೆಯಲ್ಲಿ ಅದೇ ಹಿಂದೂಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿ’ ಎಂದು ಕಿಚಾಯಿಸಿದರು.
‘ಬೇರೆ ಭಾಗದವರ ಮತದಾರರ ಹೆಸರುಗಳನ್ನು ಶಿಫ್ಟಿಂಗ್ ಎಂಬ ಹೆಸರಿನಲ್ಲಿ ಸಿದ್ಧಸಿರಿ ಸೌಹಾರ್ದ ಸಿಬ್ಬಂದಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುತ್ತಿದ್ದಾರೆ, ನಿಜವಾಗಿ ಶಿಫ್ಟ್ ಆದವರಿದ್ದರೇ ಅವರ ಹೆಸರು ಸೇರಿಸಲಿ, ಮೃತಪಟ್ಟವರ ಹೆಸರು, ಎರಡು ಕಡೆ ಮತಪಟ್ಟಿಯಲ್ಲಿರುವ ಹೆಸರು, ಡುಪ್ಲೀಕೇಟ್ ಮತದಾರರ ಹೆಸರು ಡಿಲೀಟ್ ಮಾಡಲಿ. ಅದನ್ನು ಬಿಟ್ಟು ಎಲ್ಲಿಯೋ ಇರುವವರನ್ನು ಇಲ್ಲಿನ ಮತಪಟ್ಟಿಗೆ ಸೇರ್ಪಡೆ ಮಾಡುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.
ಹಿರಿಯ ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, ಈ ಮೊದಲು ಹಿಂದೂ-ಮುಸ್ಲಿಂ ಎನ್ನುವ ಭೇದವೇ ಇರಲಿಲ್ಲ, ಆದರೆ ಇತ್ತೀಚಿಗೆ ಅದು ಅತಿಯಾಗಿರುವುದು ನೋವಿನ ಸಂಗತಿ. ಅಬ್ದುಲ್‌ಹಮೀದ್ ಮುಶ್ರೀಫ್ ಅವರು ಜಾತ್ಯಾತೀತ ನಾಯಕರಾಗಿದ್ದಾರೆ. ಅವರು ಸರಳ ಹಾಗೂ ಹೃದಯವಂತ ಮನುಷ್ಯ ಎಂದರು.
ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಅಪ್ಪು ಪೂಜಾರಿ, ವಸಂತ ಹೊನಮೋಡೆ, ಫಯಾಜ್ ಕಲಾದಗಿ ಇತರರಿದ್ದರು.