ವಿಜಯಪುರ ನಗರದಲ್ಲಿ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಪಾಲಿಕೆ ಸದಸ್ಯ ದಿನೇಶ ಹಳ್ಳಿ, ಮುಖಂಡ ಅಬ್ದುಲ್ ರಜಾಕ್ ಹೊರ್ತಿ ಇತರರಿದ್ದಾರೆ. ಸುದ್ದಿಗೋಷ್ಠಿ
ವಿಜಯಪುರ

ಯತ್ನಾಳ ಬೆಂಬಲಿಗರ ಉಚ್ಛಾಟನೆ ಯಾವಾಗ?, ಬಿಜೆಪಿಗೆ ಕಾಂಗ್ರೆಸ್ ಮುಖಂಡರ ಪ್ರಶ್ನೆ

ಎಸ್‌ಐಆರ್ ಕುರಿತ ವಾಕ್ಸಮರ * ಸ್ಪಷ್ಟ ನಿಲುವು ತಿಳಿಸಲು ಆಗ್ರಹ

ವಿಜಯಪುರ: ‘ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರೆಂದು ಹೇಳಿಕೊಳ್ಳುವ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರನ್ನು ಉಚ್ಛಾಟನೆಗೊಳಿಸುವುದು ಯಾವಾಗ?’ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರ್ಫಾನ್ ಶೇಕ್ ಪ್ರಶ್ನಿಸಿದರು.

ಎಸ್‌ಐಆರ್ ಪ್ರಕ್ರಿಯೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಯತ್ನಾಳ ಬೆಂಬಲಿಗರೆಂದು ವಾಗ್ದಾಳಿ ನಡೆಸಿರುವ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರಿಗೆ ಶುಕ್ರವಾರ ಸುದ್ದಿಗೋಷ್ಠಿ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅವರು, ‘ಪಕ್ಷ ವಿರೋಧಿ ಚಟವಟಿಕೆಯ ಕಾರಣಕ್ಕಾಗಿಯೇ ಶಾಸಕ ಯತ್ನಾಳರನ್ನು ಉಚ್ಛಾಟನೆ ಮಾಡಲಾಗಿದೆ. ಇದೀಗ ಅವರ ಬೆಂಬಲಿಗರೆಂದು ಹೇಳಿಕೊಳ್ಳುವ ಬಿಜೆಪಿ ಸದಸ್ಯರ ಮೇಲೆ ಆ ಪಕ್ಷದಿಂದ ಯಾವುದೇ ಕ್ರಮ ಇಲ್ಲವೇ?’ ಎಂದರು.

‘ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರಿಗೆ ಪ್ರತಿ ದಿನ ಬೈಯುವ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಕೆಲ ಪಾಲಿಕೆ ಸದಸ್ಯರು ಇಂದಿಗೂ ಗುರುತಿಸಿಕೊಳ್ಳುತ್ತಾ, ಅವರ ಬೆಂಬಲಿಗರೆಂದು ಬಹಿರಂಗ ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ, ಬಿಜೆಪಿಯಲ್ಲಿ ಯಾವುದೇ ಶಿಸ್ತು ಇಲ್ಲವೇ?’ ಎಂದಿದರು.

‘ಉಚ್ಚಾಟಿತ ಶಾಸಕರು ಬಹಿರಂಗವಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರ ಕುರಿತು ಟೀಕಿಸುತ್ತಿದ್ದಾರೆ. ಆದರೆ, ಅದೇ ಬಿಜೆಪಿಯಿಂದ ಆಯ್ಕೆಯಾಗಿರುವ ಕೆಲ ಪಾಲಿಕೆ ಸದಸ್ಯರು ಯತ್ನಾಳ ಅವರೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಯಾವತ್ತೂ ಪಕ್ಷದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರ ಪರವಾಗಿ ಧ್ವನಿ ಎತ್ತಿಲ್ಲ. ಅಂದರೆ, ಇವರು ಬಿಜೆಪಿಯ ಪಾಲಿಕೆ ಸದಸ್ಯರೋ ಅಥವಾ ಉಚ್ಚಾಟಿತ ಶಾಸಕರ ಸದಸ್ಯರೋ....’ ಎಂದು ಪ್ರಶ್ನಿಸಿದರು.

‘ಶಾಸಕರನ್ನು ಉಚ್ಚಾಟಿಸಿರುವಂತೆ ಈ ಪಾಲಿಕೆ ಸದಸ್ಯರನ್ನೂ ಉಚ್ಚಾಟಿಸಲಾಗಿದೆಯೇ? ಉಚ್ಚಾಟನೆ ಮಾಡಿಲ್ಲ ಎಂದಾದರೆ, ಇನ್ನೂ ಶಾಸಕರ ಬೆಂಬಲಿಗರೆಂದು ಹೇಳಿಕೊಳ್ಳುವವರ ವಿರುದ್ಧ ಯಾಕೆ ಯಾವ ಕ್ರಮವನ್ನೂ ಕೈಗೊಂಡಿಲ್ಲ?. ಅಲ್ಲದೇ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳು ಏಜೆಂಟರಾಗಿ ನೇಮಕವಾಗಲು ಅವಕಾಶ ಇದೆ. ಉಚ್ಚಾಟಿತ ಶಾಸಕರ ಬೆಂಬಲಿಗರು ಯಾವ ರಾಜಕೀಯ ಪಕ್ಷದಿಂದ ನೇಮಿಸಲಾಗಿದೆ’ ಎಂದೂ ಕೇಳಿದರು.

ಮುಖಂಡ ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, ‘ವಿಜಯಪುರ ನಗರ ಮತಕ್ಷೇತ್ರದಲ್ಲಿ ಶಾಸಕರ ಬೆಂಬಲಿಗರು 18 ಸಾವಿರ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ, ಸಾಮೂಹಿಕವಾಗಿ ಈ ಅರ್ಜಿಗಳನ್ನು ಸಲ್ಲಿಸುವುದು ನಿಯಮಬಾಹಿರವಾಗಿದೆ. ರಾಜಕೀಯ ಪಕ್ಷದಿಂದ ನೇಮಕವಾಗಿರುವ ಬಿಎಲ್‌ಎ-2 ಪ್ರತಿ ಬೂತ್‌ನಲ್ಲಿ ಗರಿಷ್ಠ 30 ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇದೆ. ಜತೆಗೆ ಸುಳ್ಳು ಸ್ವಘೋಷಣೆ ಪತ್ರ ನೋಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಸಾಮೂಹಿಕ ಅರ್ಜಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಶಾಸಕ ಯತ್ನಾಳ ಬೆಂಬಲಿಗರು ಸುಳ್ಳು ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆಕ್ಷೇಪಣೆ ಅರ್ಜಿಗಳಲ್ಲಿ ಉಲ್ಲೇಖಿಸಲಾದ ಮತದಾರರು ವಿಜಯಪುರದಲ್ಲಿ ವಾಸವಾಗಿಲ್ಲ, ಅವರ ಮನೆಗಳು ಇಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಇಲ್ಲವಾದರೆ, ಯಾರ ಹೆಸರನ್ನು ತೆಗೆಯಲು ಅರ್ಜಿ ಕೊಟ್ಟಿದ್ದಾರೋ, ಅವರಿಂದಲೇ ಚುನಾವಣಾ ಆಯೋಗಕ್ಕೆ ದೂರು ಕೊಡಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪಾಲಿಕೆ ಸದಸ್ಯ ದಿನೇಶ ಹಳ್ಳಿ ಮಾತನಾಡಿ, ‘ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಈಗ ಬಿಜೆಪಿ ಪಾಲಿಕೆ ಸದಸ್ಯರೇ ಮತದಾರರ ಪಟ್ಟಿಯಲ್ಲಿ ಇರುವ ಹೆಸರಗಳನ್ನು ಆಲಿಸಲು ವಾಮಮಾರ್ಗ ಹಿಡಿದಿದ್ದಾರೆ. ಅದರ ಬದಲಿಗೆ ಎಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ? ಮೇಯರ್ ಎಷ್ಟು ಭೂಮಿ ಪೂಜೆ ನೆರವೇರಿಸಿದ್ದಾರೆ?’ ಎಂಬುವುದನ್ನು ಹೇಳಿ ನೋಡೋಣ ಎಂದು ಸವಾಲು ಹಾಕಿದರು. ವಿವಿಧ ಮುಖಂಡರು ಇದ್ದರು.