ತಾಂಬಾ ಗ್ರಾಮ ಪಂಚಾಯಿತಿ ಕಾರ್ಯಾಲಯ ಆವರಣದಲ್ಲಿ ಕೆಟ್ಟು ನಿಂತಿರುವ ಕಸ ವಿಲೇವಾರಿ ವಾಹನ. 
ವಿಜಯಪುರ

ಕಸ ವಿಲೇವಾರಿ ವಾಹನ ದುರಸ್ತಿ ಯಾವಾಗ?

ಪಟ್ಟಣದ ಒಂಬತ್ತು ವಾರ್ಡ್ಗಳ ಕಸವನ್ನು ವಿಲೇವಾರಿ ಮಾಡಲು ಬಳಸಲಾಗುತ್ತಿದ್ದ ಕಸ ಸಂಗ್ರಹಣೆ ವಾಹನ ಕೆಟ್ಟು ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲೇ ನಿಂತಿದ್ದರೂ ಅದನ್ನು ದುರಸ್ತಿ ಮಾಡಿಸಲು ಯಾರೂ ಮುಂದಾಗುತ್ತಿಲ್ಲದಿರುವುದು ವಿಪರ್ಯಾಸ.
ಈಗಾಗಲೇ ಹಲವು ದಿನಗಳಿಂದ ಒಂದೇ ಜಾಗದಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ನಿತ್ಯ ತ್ಯಾಜ್ಯ ವಿಲೇವಾರಿಯೇ ಸವಾಲಿನ ಕೆಲಸವಾಗಿದೆ. ವಾಹನ ಹೀಗೆ ಬಿಟ್ಟರೆ ತುಕ್ಕು ಹಿಡಿಯುವುದು ಗ್ಯಾರಂಟಿ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿಯೇ ಹೇಳುತ್ತಿದ್ದಾರೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ ಹಡಲಸಂಗ ಅವರನ್ನು ಪ್ರಶ್ನಿಸಿದರೆ, ತ್ಯಾಜ್ಯ ಸಂಗ್ರಹಿಸುವ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಾಂಬಾ ಗ್ರಾಮದಲ್ಲಿ ೯ ವಾರ್ಡ್ಗಳಿದ್ದು, ಒಂದೇ ಕಸ ಸಂಗ್ರಹ ವಾಹನ ಇರುವುದರಿಂದ ಪ್ರತಿ ವಾರ್ಡ್ಗಳಿಗೂ ಕೂಡ ಹೋಗಲು ಆಗುತ್ತಿಲ್ಲ. ಶೀಘ್ರವೇ ವಾಹನವನ್ನು ದುರಸ್ತಿ ಮಾಡಿಸಲಾಗುತ್ತದೆ. ಜೊತೆಗೆ ಆಡಳಿತ ಅಧಿಕಾರಿ ಬಂದ ತಕ್ಷಣ ಮತ್ತೊಂದು ಹೊಸ ವಾಹನವನ್ನೂ ಖರೀದಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇನ್ನಾದರೂ ಈ ಬಗ್ಗೆ ಸೂಕ್ತಕ್ರಮಕ್ಕೆ ಮುಂದಾಗಬೇಕು ಎಂಬುದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರತಿ ದಿನ ಮುಂಜಾನೆ ಕಸ ಒಯ್ಯಾಕ ಗಾಡಿ ರ‍್ತಿತ್ರಿ. ಈಗಂತೂ ಗಾಡಿ ಬರ್ತಿಲ್ರಿ. ಕಸ ಮನ್ಯಾಗ ಇಟ್ಕೊಂಡು ಕೂಡಾಕ ಆಗೋಲ್ರಿ.ಹಿಂಗಾಗಿ ರೋಡನಾಗ ಚಲ್ಲೋ ಪರಿಸ್ಥಿತಿ ಉಂಟಾಗೈತ್ರಿ. ಮೊದಲಿನ ಹಾಂಗ ಕಸ ಒಯ್ಯಾಕ ಗಾಡಿ ಮನೆ ಹತ್ತಿರ ಬರಬೇಕ್ರಿ. ಗಾಡಿ ಬಂದರೆ ಮಾತ್ರ ಸ್ವಚ್ಛ ಇಟ್ಟುಕೊಳ್ಳಲು ಸಾಧ್ಯ.
| ಶಿವಮ್ಮ ನಾಗರಹಳ್ಳಿ, ತಾಂಬಾ ಗ್ರಾಮಸ್ಥರು