ಸಚಿವ ಎಂ.ಬಿ. ಪಾಟೀಲ 
ವಿಜಯಪುರ

ಶಾಸಕರ ವಿದೇಶಿ ಪ್ರವಾಸ ತಪ್ಪೇನು? ರಾಜಕೀಯವಾಗಿ ಗುಂಪುಕಟ್ಟಿಕೊಂಡು ಹೊರಟಿಲ್ಲವಲ್ಲಾ ಎಂದ ಸಚಿವ ಎಂ.ಬಿ. ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ
  • ಸಚಿವ ಎಂ.ಬಿ. ಪಾಟೀಲ ಸಮರ್ಥನೆ
  • ರಾಜಕೀಯ-ಗುಂಪುಗಾರಿಕೆ ಇಲ್ಲ
  • ಬಿಜೆಪಿ ಶಾಸಕರು ವಿದೇಶಕ್ಕೆ ಹೋಗಿರಲಿಲ್ಲವಾ?
ವಿಜಯಪುರ: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು, ಶಾಸಕರು ವಿದೇಶ ಪ್ರವಾಸ ಹೋದರೆ ತಪ್ಪೇನು? ಎನ್ನುವ ಮೂಲಕ ವಿದೇಶಿ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ.
‘ಕಮೀಟಿ ಟೂರ್’ ಇದ್ದಾಗ ಹೋಗಬಾರದು ಎಂದಿದೆಯಾ? ಈ ಹಿಂದೆ ಬಿಜೆಪಿಯವರು ಹೋಗಿರಲಿಲ್ಲವಾ? ಈಗಲೂ ಕೆಲವರು ವೈಯಕ್ತಿಕವಾಗಿಯಾಗಲಿ ನಾಲ್ಕು ಜನ ಸೇರಿಯಾಗಲಿ ಹೋಗಬಹುದು. ಆದರೆ, ರಾಜಕೀಯವಾಗಿ ಯಾರೂ ಹೋಗುತ್ತಿಲ್ಲ. ಗುಂಪು ಕಟ್ಟಿಕೊಂಡು ಹೊರಟಿಲ್ಲ. ನಾನು ಸಹ ಆಗಾಗ ವಿದೇಶ ಪ್ರವಾಸ ಹೋಗುತ್ತಿರುತ್ತೇನೆ. ಇದೀಗ ಮತ್ತೆ ಜರ್ಮನಿಗೆ ಕೈಗಾರಿಕೆ ಪ್ರವಾಸ ಹೊರಟಿದ್ದೇನೆ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಬಿಜೆಪಿಗರ ಟೀಕೆಗಳಿಗೆ ಅರ್ಥವಿಲ್ಲ. ಈ ಹಿಂದೆ 4.5 ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದವರು ಅವರು. ಬಿ.ಎಸ್. ಯಡಿಯೂರಪ್ಪ ಅವರಿಗೆ ಅಧಿಕಾರವಧಿ ಪೂರ್ಣಗೊಳಿಸಲು ಸಹ ಬಿಡಲಿಲ್ಲ. ನನಗೂ ಆಗ ದುಃಖ ಆಗಿತ್ತು. ನಾನು ಸಹ ಹೇಳಿಕೆ ನೀಡಿದ್ದೆ. ಇಂಥ ಬಿಜೆಪಿಯಿಂದ ನಾವು ಪಾಠ ಕಲಿಯಬೇಕಿಲ್ಲ ಎಂದರು.
ಕಾಂಗ್ರೆಸ್‌ನ 1000 ದಿನಗಳ ಆಡಳಿತದಲ್ಲಿ ಸಾಕಷ್ಟು ಸಾಧನೆಯಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದೇವೆ. ಈ ಗ್ಯಾರಂಟಿಯನ್ನೇ ಬಿಜೆಪಿಗರು ಟೀಕಿಸುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದರು ಎಂದು ಲೇವಡಿ ಮಾಡಿದ ಸಚಿವ ಎಂ.ಬಿ. ಪಾಟೀಲ ಅವರು, ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಗ್ಯಾರಂಟಿ ಯೋಜನೆಗಳಿಗೆ 70 ಸಾವಿರ ಕೋಟಿ ರೂ. ನೀಡಿದ್ದೇವೆ. 2.30ಲಕ್ಷ ಜನರಿಗೆ ಭೂ ಗ್ಯಾರಂಟಿ ಪತ್ರ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಇನ್ನು ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣ, ವಂದೇ ಭಾರತ ರೈಲು ಸೌಲಭ್ಯಕ್ಕೆ ಸಂಬಂಧಿಸಿದಂತೆ ಸಂಸದ ರಮೇಶ ಜಿಗಜಿಣಗಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಸಂಸದರು ಪೋಸ್ಟರ್ ಹಚ್ಚುವ ಮಟ್ಟಕ್ಕೆ ಬಂದಿದ್ದಾರೆಂದು ಲೇವಡಿ ಮಾಡಿದರಲ್ಲದೇ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಂಸದರು ಸಂಸತ್‌ನಲ್ಲಿ ಪ್ರಶ್ನೆ ಕೇಳಲಿ, ಚರ್ಚೆ ಮಾಡಲಿ ಎಂದರು. ಮುಂದುವರಿದು ವಿಮಾನ ನಿಲ್ದಾಣ, ಔದ್ಯೋಗಿಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಿ ಎಂದರು.