DDPI-OFFICE 
ವಿಜಯಪುರ

ಶಾಲೆಗಳ ಮಾನ್ಯತೆ ನವೀಕರಣ ಅಕ್ರಮ ಪ್ರಕರಣ, ‘ಓವರ್ ಡ್ಯು’ ಹಿಂದಿನ ಉದ್ದೇಶವೇನು?

ಪ್ರಮುಖ ಮುಖ್ಯಾಂಶಗಳು

  • 100ಕ್ಕೂ ಅಧಿಕ ಶಾಲೆಗಳ ಸ್ಥಿತಿ ಅತಂತ್ರ
  • ನಿಯಮ ಉಲ್ಲಂಘಿಸಿದರೂ ಇಲ್ಲ ಶಿಸ್ತು ಕ್ರಮ
  • ಅಧಿಕಾರಿ ಹಾಗೂ ಸಿಬ್ಬಂದಿ ಲೋಪ
ವಿಜಯಪುರ: ‘ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣದಲ್ಲಾದ ಅಕ್ರಮ’ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಹಾಗೂ ಸಿಬ್ಬಂದಿ ಸಾಕಷ್ಟು ಲೋಪ-ದೋಷಗಳು, ಸರ್ಕಾರಿ ನಿಯಮಾವಳಿಗಳ ಉಲ್ಲಂಘನೆ ಮಾಡಿರುವುದು ಕಂಡು ಬರುತ್ತಿದ್ದು, ಲಂಚ ಕೊಡದ ಕಾರಣಕ್ಕೋ....ತಾಂತ್ರಿಕ ತೊಂದರೆಯಿಂದಲೋ ಅಥವಾ ದುರುದ್ಧೇಶಪೂರಿತವಾಗಿಯೋ ಕಾಲಮಿತಿಯಲ್ಲಿ ಅರ್ಜಿಗಳಿಗೆ ಅನುಮೋದನೆ ನೀಡದ ಹಿನ್ನೆಲೆ 100ಕ್ಕೂ ಅಧಿಕ ಶಾಲೆಗಳ ಸ್ಥಿತಿ ಅತಂತ್ರವಾಗಿದೆ.
2025-26ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆ ಸಾಕಷ್ಟು ಬಾರಿ ಸುತ್ತೋಲೆ ಹೊರಡಿಸಿ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆಯಲ್ಲದೇ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಕಾಲಮಿತಿಯನ್ನೂ ನಿಗದಿಪಡಿಸಿದೆ. ಅದಾಗ್ಯೂ ಮಾನ್ಯತೆ ನವೀಕರಣದ ಅರ್ಜಿಗಳನ್ನು ‘ಓವರ್ ಡ್ಯು’ ಅಂದರೆ ‘ಡಿಡಿಪಿಐ ತಮ್ಮ ಲಾಗಿನ್‌ನಲ್ಲಿರುವ ಮಾನ್ಯತೆ ನವೀಕರಣ ಪ್ರಸ್ತಾವನೆ ಪರಿಶೀಲಿಸದೇ ಹಾಗೆ ಬಿಟ್ಟಿರುವ ಆನ್‌ಲೈನ್ ಪ್ರಸ್ತಾವನೆಗಳು ಉನ್ನತ ಅಧಿಕಾರಿಗಳ ಹಂತಕ್ಕೆ ನೇರವಾಗಿ ಹೋಗುವಂತೆ’ ಮಾಡಿ ಶಿಕ್ಷಣ ಸಂಸ್ಥೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿ ನಡೆ ಸಾಕಷ್ಟು ಅನುಮಾನಕ್ಕೆಡೆ ಮಾಡಿದೆ.
ತಾಂತ್ರಿಕ ತೊಂದರೆಯಿಂದಲೋ...ಸಿಬ್ಬಂದಿ ಕೊರತೆಯಿಂದಲೋ...ಕಾರ್ಯಭಾರದ ಒತಡದಿಂದಾಗಿಯೋ ಒಂದು ಅಥವಾ ಎರಡು ಅರ್ಜಿಗಳು ‘ಓವರ್ ಡ್ಯು’ ಆಗಿದ್ದರೆ ತಪ್ಪಿಲ್ಲ. ಆದರೆ, ನೂರಕ್ಕೂ ಅಧಿಕ ಅರ್ಜಿಗಳು ತಿಂಗಳಾನುಗಟ್ಟಲೇ ತಂತ್ರಾಂಶದಲ್ಲಿ ಕೊಳೆಯುಂತೆ ಮಾಡಿದ್ದರ ಹಿಂದೆ ದುರುದ್ದೇಶ ಎದ್ದುಕಾಣುತ್ತಿದೆ. ಈ ಕುರಿತು ಶಿಕ್ಷಣ ಇಲಾಖೆ ಸಾಕಷ್ಟು ಬಾರಿ ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದೇ ಬೇಜವಾಬ್ದಾರಿ ಪ್ರದರ್ಶನ ಮಾಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

ಸುತ್ತೋಲೆ ಹೇಳೋದೇನು?

2026 ಫೆ. 16ರ ಸುತ್ತೋಲೆ ಪ್ರಕಾರ ‘ತಂತ್ರಾಂಶದಲ್ಲಿ ಸ್ವೀಕೃತವಾಗಿರುವ ಅರ್ಜಿಗಳ ಸಂಖ್ಯಾ ಮಾಹಿತಿ ಪರಿಶೀಲಿಸಲಾಗಿ ನಿಗದಿಪಡಿಸಿದ ಕಾಲಾವಕಾಶದೊಳಗೆ ಮಾನ್ಯತೆ ನವೀಕರಣ ಪಡೆಯಲು ಅರ್ಜಿಗಳನ್ನು ಸಲ್ಲಿಸಲಾಗದೇ ಇರುವುದನ್ನು ಗಮನಿಸಿ’ ಅವಧಿ ವಿಸ್ತರಿಸಿ ಅವಕಾಶ ನೀಡಲಾಗಿತ್ತು. ಅಲ್ಲದೇ, ಮಾನ್ಯತೆ ನವೀಕರಣ ಕಡ್ಡಾಯವಾಗಿದ್ದು, ನವೀಕರಣಗೊಳ್ಳದಿದ್ದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಲು, ಆರ್‌ಟಿಇ ಶುಲ್ಕ ಮರುಪಾವತಿಗೆ ಪ್ರಸ್ತಾವನೆ ಪರಿಗಣಿಸಲು, ಅನುದಾನಿತ ಶಾಲಾ ಶಿಕ್ಷಕರ ವೇತನ ಪಾವತಿಗೆ ಅವಕಾಶ ಇಲ್ಲ. ಆದ್ದರಿಂದ ಬಿಇಒ ಹಾಗೂ ಡಿಡಿಪಿಐ ವೈಯಕ್ತಿಕ ಗಮನ ಹರಿಸಿ ತಮ್ಮ ವ್ಯಾಪ್ತಿಯಲ್ಲಿ ಈವರೆಗೆ ಮಾನ್ಯತೆ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸದಿರುವ ಶಾಲಾ ಆಡಳಿತ ಮಂಡಳಿಗಳಿಗೆ ಅವಧಿ ವಿಸ್ತರಿಸಿರುವ ಬಗ್ಗೆ ಪ್ರಚಾರ ಕೈಗೊಂಡು ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ವಹಿಸಲು ತಿಳಿಸಲಾಗಿದೆ.

ಕಾಲಮಿತಿ ನಿಗದಿ

ವಿಸ್ತರಿಸಲಾದ ದಿನಾಂಕದೊಳಗೆ ಸೂಕ್ತ ದಾಖಲೆಗಳೊಂದಿಗೆ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಮಾನ್ಯತೆ ಪಡೆಯುವಂತೆ ಡಿಡಿಪಿಐ ಕ್ರಮ ವಹಿಸಲು ತಿಳಿಸಲಾಗಿತ್ತು. ‘ಓವರ್ ಡ್ಯು’ ಅರ್ಜಿಗಳನ್ನು ಇತ್ಯರ್ಥ ಪಡಿಸಲು ಅವಕಾಶ ಮಾಡಿಕೊಡಲಾಗಿತ್ತು. ಮುಂದೆ ಸಲ್ಲಿಕೆಯಾಗುವ ಅರ್ಜಿಗಳನ್ನು ಆಯಾ ದಿನವೇ ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ವಿಳಂಬಕ್ಕೆ ಅವಕಾಶ ನೀಡದಂತೆ ಅರ್ಜಿಗಳನ್ನು ಇತ್ಯರ್ಥ ಪಡಿಸಲು ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿತ್ತು.
ನಿಗದಿತ ಅವಧಿಗಿಂತ ಹೆಚ್ಚು ದಿನ ಲಾಗಿನ್‌ನಲ್ಲಿ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ. ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಪರಿಶೀಲಿಸಿ ಅಗತ್ಯಾನುಸಾರ ಅಂತಹ ಅರ್ಜಿಗಳನ್ನು ಕಾಲಮಿತಿಯೊಳಗ ‘ರೋಲ್ ಬ್ಯಾಕ್’ ಮಾಡಿ ಲಾಗಿನ್‌ಗೆ ಬಂದ ದಿನದಿಂದ 5 ದಿನಗಳ ಒಳಗಾಗಿ ಆಡಳಿತ ಮಂಡಳಿಗೆ ಕಳುಹಿಸತಕ್ಕದ್ದು. ಇಲ್ಲವಾದಲ್ಲಿ ಅರ್ಜಿದಾರರು ಅವಕಾಶ ವಂಚಿತರಾಗಲಿದ್ದು, ಅದಕ್ಕೆ ಆಯಾ ಲಾಗಿನ್ ಸಿಬ್ಬಂದಿ ಹಾಗೂ ಅಧಿಕಾರಿಯೇ ಜವಾಬ್ದಾರಿ. ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಜರುಗಿಸುವ ಕುರಿತು ಎಚ್ಚರಿಸಲಾಗಿತ್ತು.
ಆದರೆ, ಜಿಲ್ಲೆಯಲ್ಲಿ 100ಕ್ಕೂ ಅಧಿಕ ಅರ್ಜಿಗಳನ್ನು ಕಾಲಮಿತಿಯಲ್ಲಿ ನವೀಕರಿಸದ ಹಿನ್ನೆಲೆ ‘ಓವರ್ ಡ್ಯು’ ಪಟ್ಟಿಗೆ ಸೇರ್ಪಡೆಯಾಗಿವೆ. ಹೀಗಾಗಿ ಆಯಾ ಶಾಲೆಗಳು ಸಂಕಷ್ಟದ ಸ್ಥಿತಿಗೆ ಸಿಲುಕಿವೆ. ಒಂದೆಡೆ ದಾಖಲೆಗಳು ಅಸಮರ್ಪಕವಾಗಿದ್ದರೂ, ಮೂಲ ಸೌಕರ್ಯಗಳಿಲ್ಲದಿದ್ದರೂ 200ಕ್ಕೂ ಅಧಿಕ ಶಾಲೆಗಳಿಗೆ ಮಾನ್ಯತೆ ನವೀಕರಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿ ಇನ್ನೊಂದೆಡೆ ವಿಳಂಬ ನೀತಿ ಅನುಸರಿಸಿ ‘ಓವರ್ ಡ್ಯು’ಆಗುವಂತೆ ಮಾಡಿರುವುದರ ಬಗ್ಗೆ ಸಾಕಷ್ಟು ಅನುಮಾನ ಮತ್ತು ಆರೋಪಗಳು ಕೇಳಿ ಬರುತ್ತಿವೆ.

ನೆಟ್‌ವರ್ಕ್ ಸಮಸ್ಯೆಯಿದ್ದಾಗ, ಕೋರ್ಟ್ ಕೇಸ್‌ಗಳಿಗೆ ಹಾಜರಾದಾಗ, ಕಾರ್ಯಭಾರ ಹೆಚ್ಚಾದಾಗ ಕೆಲವೊಂದು ‘ಓವರ್ ಡ್ಯು’ ಆಗಿವೆ. ಅಂಥ ಶಾಲೆಗಳ ಪಟ್ಟಿ ಮಾಡಿ ಪತ್ರ ಬರೆಯಲಾಗಿದೆ. ‘ಓವರ್ ಡ್ಯು’ ಕ್ಲೀಯರ್ ಮಾಡಲಾಗುವುದು.