ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ರಾಜೀವ ಗಾಂಧಿ ವೈದ್ಯಕೀಯ ವಿವಿ ಸೆನೆಟ್ ಸದಸ್ಯ ಸಂತೋಷ ಇಂಡಿ ಸುದ್ದಿಗೋಷ್ಠಿ ನಡೆಸಿದರು. ಆರ್‌ಕೆಎಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ, ಡಾ. ಎನ್.ಎಂ. ರುದ್ರಗೌಡರ, ಡಾ. ಮೊಹ್ಮದ್ ಶಫೀ ಇತರರಿದ್ದಾರೆ. 
ವಿಜಯಪುರ

ನಾಳೆ ಅಂಗಾಗ ದಾನ ಜಾಗೃತಿಗಾಗಿ ವಾಕಥಾನ್

ಪ್ರಮುಖ ಮುಖ್ಯಾಂಶಗಳು

  • ಸೆನೆಟ್ ಸದಸ್ಯ ಡಾ. ಸಂತೋಷ ಇಂಡಿ ಮಾಹಿತಿ
  • ಸ್ವಸ್ಥ ಭಾರತ ಶ್ರೇಷ್ಠ ಭಾರತ ಧ್ಯೇಯ
ವಿಜಯಪುರ: ರಾಜೀವ್‌ ಗಾಂಧಿ ಆರೋಗ್ಯ ವಿವಿ ಸಂಲಗ್ನಗೊಂಡಿರುವ ನರ್ಸಿಂಗ್, ವೈದ್ಯಕೀಯ ಸೇರಿ ವಿವಿಧ ಕಾಲೇಜುಗಳ ಸಹಯೋಗದಲ್ಲಿ `ಸ್ವಸ್ಥ ಭಾರತ ಶ್ರೇಷ್ಠ ಭಾರತ' ಎಂಬ ಧ್ಯೇಯದೊಂದಿಗೆ ಫೆ. 27ರಂದು ವಾಕಥಾನ್ ಆಯೋಜಿಸಲಾಗಿದ್ದು, 5 ಸಾವಿರ ವಿದ್ಯಾರ್ಥಿಗಳು ಈ ನಡಿಗೆಯಲ್ಲಿ ಭಾಗವಹಿಸುವ ಜೊತೆಗೆ ಅಂಗಾಂಗ ದಾನದ ವಾಗ್ದಾನ ಮಾಡಲಿದ್ದಾರೆ ಎಂದು ರಾಜೀವ ಗಾಂಧಿ ವೈದ್ಯಕೀಯ ವಿವಿ ಸೆನೆಟ್ ಸದಸ್ಯ ಡಾ. ಸಂತೋಷ ಇಂಡಿ ತಿಳಿಸಿದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಅಡಿಯಲ್ಲಿ ಡಾ. ಭಗವಾನ ಬಿಸಿ ಸಾಮಾಜಿಕ ಕಳಕಳಿಯಿಂದ ಮೊದಲ ಬಾರಿಗೆ ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಓರ್ವ ವ್ಯಕ್ತಿ ಮರಣದ ನಂತರವೂ 8 ಜನರಿಗೆ ಜೀವದಾನ ಮಾಡಬಹುದಾಗಿದೆ. ಹೀಗಾಗಿ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ನಶಾಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್ ವಾಕಥಾನ್ ಮಾಡಲಾಗಿದ್ದು, ಇದೀಗ ವಿಜಯಪುರದಲ್ಲಿಯೂ ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಈಗಾಗಲೇ 10 ಜಿಲ್ಲೆಗಳಲ್ಲಿ 12 ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಫೆ. 27ರಂದು ನಡೆಯುವ ವಾಕಥಾನ್‌ನಲ್ಲಿ ರಾಜೀವ ಗಾಂಧಿ ವಿವಿ ಅಡಿಯಲ್ಲಿರುವ 27 ಸಂಸ್ಥೆಗಳಿಂದ 5000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈಗಾಗಲೇ ನಡೆದ ಕಾರ್ಯಕ್ರಮದಲ್ಲಿ 55 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಮಾಜದ ಜನರು ಭಾಗವಹಿಸಿ ಬೆಂಬಲಿಸಿದ್ದಾರೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಲ ಚಾಲನೆ ನೀಡಲಿದ್ದು, ಸಚಿವ ಶಿವಾನಂದ ಪಾಟೀಲ, ಸಂಸದ ರಮೇಶ ಜಿಗಜಣಗಿ ಸೇರಿ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕುಲಪತಿ ಡಾ. ಭಗವಾನ್ ಅವರು ಆಗಮಿಸಲಿದ್ದು, ವಿಶ್ವವಿದ್ಯಾಲಯದ ಎಲ್ಲ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಆರ್‌ಕೆಎಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಮಾತನಾಡಿ, ರಾಜೀವಗಾಂಧಿ ವಿವಿ ಸಂಯೋಜಿತ ಎಲ್ಲ ಕಾಲೇಜುಗಳು ಭಾಗವಹಿಸಲಿವೆ ಎಂದರು.
ಡಾ. ಎನ್.ಎಂ. ರುದ್ರಗೌಡರ ಮಾತನಾಡಿ, ಇಂದಿನ ಸಮಾಜದಲ್ಲಿ ಮಾದಕ ದ್ರವ್ಯದ ಪಿಡುಗು ಯುವ ಜನತೆಯನ್ನು ಕಾಡುತ್ತಿದೆ. ಅದನ್ನು ನಿರ್ಮೂಲನೆ ಮಾಡಲು ಕುಲಪತಿಗಳು ಮುಂದಾಳತ್ವ ವಹಿಸಿದ್ದಾರೆ ಎಂದರು.
ಅಲ್‌ಅಮೀನ್ ವೈದ್ಯಕೀಯ ವಿವಿ ಪ್ರಾಚಾರ್ಯ ಡಾ. ಮೊಹ್ಮದ್ ಶಫೀ, ಡಾ. ಪ್ರಭಾವತಿ ಕಾಳೆ, ಪ್ರಕಾಶ ಸಿದ್ಧಾಪೂರ, ಡಾ. ಸುರೇಶ ಲೋಣಿ ಇತರರಿದ್ದರು.