- ವಿಕಸಿತ ಭಾರತ
- ಕೌಶಲ ರಹಿತ ಕೂಲಿ ಕೆಲಸ
ಇಂಡಿ: ಜು.1ರಿಂದ ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ-ಜಿ-ರಾಮ್-ಜಿ ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ ಕನಿಷ್ಠ 125 ದಿನಗಳ ಕೌಶಲ ರಹಿತ ಕೂಲಿ ಕೆಲಸಗಳನ್ನು ಇದು ಖಾತ್ರಿಪಡಿಸುತ್ತದೆ ಎಂದು ತಾಪಂ ಇಒ ಮಹದೇವಪ್ಪ ಏವೂರ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಜು.1ರಿಂದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ವಿಬಿ-ಜಿ-ರಾಮ್-ಜಿ ಅನ್ನು ಜಾರಿಗೆ ತಂದಿದೆ. ಎರಡು ದಶಕಗಳಿಂದ ಇದ್ದ ನರೇಗಾ ಯೋಜನೆ ಬದಲು ಜಿ ರಾಮ್ ಜಿ ಯೋಜನೆಯನ್ನು ಅಳವಡಿಸಲಾಗಿದೆ. ಹಿಂದಿನ ಸ್ಕೀಮ್‌ಗಿಂತ ಹೆಚ್ಚು ದಿನ ಕೆಲಸ ಮತ್ತು ಹೆಚ್ಚು ವೇತನ ನೀಡುತ್ತದೆ. ಹಳೆಯ ನರೇಗಾ ಯೋಜನೆಯಡಿ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಆದರೆ ಹೊಸ ವಿಬಿ-ಜಿ-ರಾಮ್-ಜಿ ಕಾಯ್ದೆಯಡಿ, ಪ್ರತಿ ಗ್ರಾಮೀಣ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 125 ದಿನಗಳ ಕಡ್ಡಾಯ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಹಾಗೂ ಒಂದು ಮಾನವ ದಿನಕ್ಕೆ 382 ರೂಪಾಯಿ ಕೂಲಿ ಮೊತ್ತ ನೀಡಲಾಗುವುದು ಎಂದರು.
ಕಾರ್ಮಿಕರ ಸಮರ್ಪಕ ಲಭ್ಯತೆಗೆ ಸುಗಮಗೊಳಿಸಲು ಯೋಜನೆಯಡಿ 60 ದಿನಗಳ ಕಾಲ ವಿರಾಮ ನೀಡುವ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಸಂಜಯ ಖಡೆಗೆಕರ್ ಮಾತನಾಡಿ, ವಿಬಿಜಿರಾಮ್ ಜಿ ಯಶಸ್ವಿಯಾಗಿ ಅನುಷ್ಠಾನ ರೂಪರೇಷೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ದೀರ್ಘಾವಧಿಯ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಉದ್ಯೋಗ ಸೃಷ್ಟಿಸಲಾಗುತ್ತದೆ. ಗ್ರಾ.ಪಂ ಪಿಡಿಒಗಳು ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.