ಚವನಭಾವಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಅಳವಡಿಸಲಾದ ನಳಗಳನ್ನು ರಾಜ್ಯ ಗುಣಮಟ್ಟದ ಮೇಲ್ವಿಚಾರಣಾ ಅಽಕಾರಿ ಮೋಹನ್ ಪರಿಶೀಲಿಸಿ, ಸ್ಥಳೀಯ ಮಹಿಳೆಯರಿಂದ ಮಾಹಿತಿ ಪಡೆದರು. ಇಂಜಿನಿಯರ್ ಎ.ಎಲ್‌.ರಾಠೋಡ, ಅಡವಿ ಸೋಮನಾಳ ಗ್ರಾಪಂ ಕಾರ್ಯದರ್ಶಿ ಬಸನಗೌಡ ಬಿರಾದಾರ ಮತ್ತಿತರರಿದ್ದರು. 
ವಿಜಯಪುರ

ಅಧಿಕಾರಿ ಮುಂದೆ ಗ್ರಾಮಸ್ಥರ ಅಳಲು

ಮುದ್ದೇಬಿಹಾಳ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ ಮಿಷನ್ ಯೋಜನೆಗೆ ಸಂಬಂದಿಸಿದಂತೆ ಸಾರ್ವಜನಿಕರು ಮೇಲ್ವಿಚಾರಣೆ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.
ತಾಲೂಕಿನ ಚವನಭಾವಿ ಗ್ರಾಮದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಮಹತ್ವದ ಜಲ ಜೀವನ ಮಿಷನ್(ಜೆಜೆಎಂ) ಯೋಜನೆಯಡಿ ಅನುಷ್ಠಾನಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳ ಪರಿಶೀಲನೆಗೆಂದು ಮಂಗಳವಾರ ಭೇಟಿ ನೀಡಿದ ಬೆಂಗಳೂರಿನ ರಾಜ್ಯ ಗುಣಮಟ್ಟದ ಮೇಲ್ವಿಚಾರಣಾ ಅಧಿಕಾರಿ ಮೋಹನ್ ಅವರ ಎದುರು ಸ್ಥಳೀಯರು ಅಸಮಾಧಾನ ಹೊರ ಹಾಕಿದರು. ಗ್ರಾಮದ ಕೆಲವೆಡೆ ನೀರು ಪೂರೈಕೆಯಾಗಲಿದ್ದು, ಕೆಲವು ಕಡೆ ನೀರು ಸರಬರಾಜು ಅಸಮರ್ಪಕವಾಗಿದೆ.
ಹೀಗಾಗಿ ನೀರಿನ ಸಮಸ್ಯೆಯಿಂದ ಜನ ಕಂಗಾಲಾಗಿದ್ದಾರೆಂದು ಗೋಳು ತೋಡಿಕೊಂಡರು. ಗ್ರಾಮದಲ್ಲಿ ಕೇವಲ ಒಂದೇ ಒಂದು ಕೊಳವೆ ಬಾವಿ ಇದೆ. ಸರಿಯಾದ ನೀರಿನ ಮೂಲ ಇಲ್ಲದ ಕಾರಣ ನಳಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.
ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ನೀರು ಬಂದರೆ ಮಾತ್ರ ನಮಗೆ ಸೌಲಭ್ಯ ಸಿಗುತ್ತದೆ, ಇಲ್ಲದಿದ್ದರೆ ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂದು ಕೆಲವರು ವಿವರಿಸಿದರು. ಇನ್ನು ಕೆಲವರು ಗ್ರಾಮದ ಕೆಲವು ವಾರ್ಡ್ಗಳಲ್ಲಿ ಜೆಜೆಎಂ ನಳದಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎಂದು ದೂರಿದರು.
ಕಾಮಗಾರಿಯ ಗುಣಮಟ್ಟ ಮತ್ತು ನೀರಿನ ಹಂಚಿಕೆಯಲ್ಲಿನ ಲೋಪಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಎಲ್ಲ ದೂರುಗಳನ್ನು ಆಲಿಸಿದ ಅಽಕಾರಿ ಮೋಹನ್ ಅವರು, ಗ್ರಾಮದ ಕಾಮಗಾರಿಗಳ ಕುರಿತು ಸಮಗ್ರವಾಗಿ ಪರಿಶೀಲಿಸಿದ್ದು, ಈ ಬಗ್ಗೆ ಶೀಘ್ರವೇ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.‌
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಎ.ಎಲ್. ರಾಠೋಡ, ಅಡವಿ ಸೋಮನಾಳ ಗ್ರಾಪಂ ಕಾರ್ಯದರ್ಶಿ ಬಸನಗೌಡ ಬಿರಾದಾರ, ಗ್ರಾಮಸ್ಥರಾದ ಅಂಬ್ರಯ್ಯ ಮಠ, ಬಸವರಾಜ ಕುಂಬಾರ, ಬಸಪ್ಪ ಬಿರಾದಾರ, ವೀರೇಶ ಚಲವಾದಿ, ಬೀರಪ್ಪ ಸೋಮುನಾಳ, ಮೌನೇಶ ಬಿರಾದಾರ, ಜೆಜೆಎಂ ಯೋಜನೆಯ ಗುತ್ತಿಗೆದಾರರು ಮತ್ತಿತರರಿದ್ದರು.