ವಿಜಯಪುರ ನಗರದಲ್ಲಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿ ನಡೆಸಿದರು. ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಟಿ.ಎಸ್. ಸುಲ್ಫಿ, ಸಿಪಿಐ ರಮೇಶ ಅವಜಿ ಇತರರಿದ್ದಾರೆ.
- ಅಂತರ ರಾಜ್ಯ ಕಳ್ಳರ ಬಂಧನ
- ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ವಶ
- ಪೊಲೀಸರ ಚುರುಕಿನ ಕಾರ್ಯಾಚರಣೆ
- ಎಸ್‌ಪಿ ಲಕ್ಷ್ಮಣ ನಿಂಬರಗಿ ನೇತೃತ್ವ
ವಿಜಯಪುರ: ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿರುವ ಪೊಲೀಸರು ಹಲವು ಪ್ರಕರಣಗಳನ್ನು ಭೇದಿಸಿ ಲಕ್ಷಾಂತರ ರೂ.ಮೌಲ್ಯದ ಬೆಲೆ ಬಾಳುವ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ಸೈಬರ್ ಪ್ರಕರಣಗಳನ್ನು ಬೇಧಿಸಿ ಜಫ್ತು ಮಾಡಿಕೊಂಡ ಕೋಟ್ಯಂತರ ರೂ. ಮೌಲ್ಯದ ನಗದು ನೊಂದವರಿಗೆ ಮರಳಿಸಿದ ಬೆನ್ನಲ್ಲೇ ಇದೀಗ ಮತ್ತೆ ಹಲವು ಪ್ರಕರಣಗಳಲ್ಲಿ ಜಫ್ತು ಮಾಡಿಕೊಂಡಿರುವ ಚಿನ್ನಾಭರಣ, ಬೈಕ್ ಮತ್ತಿತರ ಸಾಮಗ್ರಿಗಳನ್ನು ಮರಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ 48 ಬಂಗಾರ ಕಳ್ಳತನ ಪ್ರಕರಣ, ಮೋಟಾರ್ ಬೈಕ್ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 14 ಜನ ಅಂತರ ರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿತರನ್ನು ಬಂಧಿಸಿ ಅವರಿಂದ ಅಂದಾಜು 65 ಲಕ್ಷ ರೂ. ಮೌಲ್ಯದ 426.2 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 20 ಲಕ್ಷ ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ 2 ಕಾರು, 39 ಮೋಟಾರ್ ಬೈಕ್ ಜಪ್ತು ಮಾಡಿಕೊಂಡಿದ್ದಾರೆ. ಜಫ್ತು ಮಾಡಿಕೊಂಡ ಒಟ್ಟು ಸಾಮಗ್ರಿಗಳ ಮೌಲ್ಯ 1.17 ಕೋಟಿಯಾಗಲಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಸರಿಸುಮಾರು 2 ಕೋಟಿ ರೂ.ಗಳಷ್ಟು ಮೌಲ್ಯದ ನಗದು ಹಾಗೂ ಬಂಗಾರವನ್ನು ಜಫ್ತು ಮಾಡಿ ಸಂಬಂಧಿಸಿದವರಿಗೆ ಮರಳಿಸಲಾಗಿದೆ. ಇದೀಗ ಮತ್ತೆ ಹಲವು ಪ್ರಕರಣಗಳಲ್ಲಿ ಕಳುವಾದ ಸಾಮಗ್ರಿ ಹಿಂದಿರುಗಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದರು.
ಬಸ್‌ನಲ್ಲಿ ಬಂಗಾರ ಕಳ್ಳತನ
ಕಳೆದ 2025 ರ ಮೇ 30 ರಂದು ವಿಜಯಪುರ-ತಾಳಿಕೋಟೆಗೆ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದ ಮಹಿಳೆಯ ಬಳಿ ಇದ್ದ 65 ಗ್ರಾಂ ಚಿನ್ನಾಭರಣವನ್ನು ಮನಗೂಳಿ ಬಳಿ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿದ್ದು ಐವರನ್ನು ಬಂಧಿಸಲಾಗಿದೆ.
ಅರಕೇರಿ ಗ್ರಾಮದ ಪ್ರಕಾಶ ವೆಂಕಟೇಶ ಭೋಯ್ರ, ಅಂಕುಶ ಸಾಹೇಬರಾವ್ ಜಾಧವ, ಗೋವರ್ಧನ ವಿಠ್ಠಲ ಪವಾರ, ರಜನಿ ಶಿವು ಭೋವಿ, ಮಂಜು ಪ್ರಶಾಂತ ಭೋಯ್ರ ಬಂಧಿತ ಆರೋಪಿಗಳು.
ಮನಗೂಳಿ, ತಿಕೋಟಾ, ದೇವರಹಿಪ್ಪರಗಿ, ಬಬಲೇಶ್ವರ, ಆದರ್ಶನಗರ, ಗೋಳಗುಮ್ಮಟ ಹಾಗೂ ನಿಡಗುಂದಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದಂತೆ ಒಟ್ಟು 8 ಪ್ರಕರಣಗಳಲ್ಲಿ ಕೃತ್ಯಕ್ಕೆ ಬಳಸಿದ 1 ಕಾರು ಹಾಗೂ ಒಟ್ಟು 426.2 ಗ್ರಾಂ ಬಂಗಾರದ ಆಭರಣ ಸೇರಿ ಅಂದಾಜು 65 ಲಕ್ಷ ರೂ. ಮೌಲ್ಯದ ಸಾಮಗ್ರಿ ಜಫ್ತು ಮಾಡಲಾಗಿದೆ ಎಂದು ತಿಳಿಸಿದರು.
ಚಿನ್ನದ ನಾಣ್ಯದ ಹೆಸರಲ್ಲಿ ವಂಚನೆ ಪ್ರಕರಣ
ಚಿನ್ನದ ನಾಣ್ಯ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದಿದ್ದ ನಾಲ್ವರನ್ನು ಪೊಲೀಸರು ಬಂಧಿಸಲಾಗಿದೆ. ಕಳೆದ ಮೇ 8ರಂದು ಈ ಕುರಿತು ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿ ಈ ಪ್ರಕರಣ ದಾಖಲಾಗಿತ್ತು. ನಕಲಿ ಬಂಗಾರ ನಾಣ್ಯಗಳನ್ನು ಅಸಲಿ ಎಂದು ಯಾಮಾರಿಸಿ ದೂರುದಾರರಿಂದ 26 ಲಕ್ಷ ರೂ. ಹಣ ಪಡೆದುಕೊಂಡು ಮೋಸ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ವಿಜಯನಗರದ ಹಣಮಂತ ಊೀರ್ಫ್ ಸಂತೋಷ ಲಾಲ ಮಾನಪ್ಪ ಊರ್ಫ್ ಲಕ್ಷ್ಮಣ ಕೊರಚರ, ರಾಜಾ ಗೋವಿಂದ ಊರ್ಫ್ ವೆಂಕಟೇಶ ಕಾವಾಡಿ, ಹರೀಶ ಚೌಡಪ್ಪ ಕೊರಚರ, ಚೀರಂಜೀವಿ ದುರ್ಗಪ್ಪ ಕೊರಚರ ಬಂಧಿತರು. ಇವರಿಂದ 20 ಲಕ್ಷ ರೂ.ನಗದು ಹಾಗೂ ಕೃತ್ಯಕ್ಕೆ ಬಳಸಿದ 1 ಕಾರ್ ಜಫ್ತು ಮಾಡಲಾಗಿದೆ ಎಂದರು.
ಮೋಟಾರ್ ಬೈಕ್ ಕಳ್ಳತನ
ನಾಗಠಾಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ವಿವಿಧ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ. ಸಿದ್ರಾಮ ಅರಕೇರಿ, ಮಂಜುನಾಥ ಉಕ್ಕಲಿ, ಆಕಾಶ ಮಠಪತಿ ಬಂಧಿತ ಆರೋಪಿಗಳು. ವಿಶೇಷ ಪೊಲೀಸ್ ತನಿಖಾ ತಂಡ ಅಲಿಯಾಬಾದ್ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಈ ಮೂವರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರು. ಅವರನ್ನು ವಿಚಾರಿಸಿದಾಗ ಕಳ್ಳತನದ ಅಂಶ ಹೊರಬಂದಿದೆ. ಇವರಿಂದ 7 ಲಕ್ಷ ರೂ.ಮೌಲ್ಯದ ಒಟ್ಟು 20 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಟಿ.ಎಸ್. ಸುಲ್ಫಿ, ಸಿಪಿಐ ರಮೇಶ ಅವಜಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.