ವಿಜಯಪುರದ ಮನಗೂಳಿ ಅಗಸಿ ಬಳಿ ಸಂಚಾರಿ ಪೊಲೀಸರು ಗುಂಡಿ ಮುಚ್ಚುತ್ತಿರುವುದು.
- ಮಹಾನಗರದಲ್ಲಿ ಹದಗೆಟ್ಟ ರಸ್ತೆಗಳು
- ಕಣ್ಣಿದ್ದೂ ಕುರುಡಾದ ಜನಪ್ರತಿನಿಧಿಗಳು
- ಸಂವೇದನೆ ಕಳೆದುಕೊಂಡ ಅಧಿಕಾರಿಗಳು
- ವಾಹನ ಸವಾರರ ನಿತ್ಯ ನರಕ ಯಾತನೆ
ವಿಜಯಪುರ: ಹದಗೆಟ್ಟ ರಸ್ತೆಗಳು, ಸಂಪೂರ್ಣ ಕಿತ್ತು ಹೋಗಿರುವ ಡಾಂಬರು, ಚಲಿಸುವ ವಾಹನಗಳ ಟೈಯರ್‌ನಿಂದ ಸಿಡಿದು ಬರುವ ಕಲ್ಲುಗಳು, ಧೂಳಿನಿಂದ ಆವೃತವಾಗಿರುವ ರಸ್ತೆಯ ಇಕ್ಕೆಲಗಳಿಂದಾಗಿ ಐತಿಹಾಸಿಕ ವಿಜಯಪುರ ಗುಂಡಿಗಳ ಸಿಂಗಾಪುರ ಎಂಬ ಉಪಮೇಯಕ್ಕೆ ಭಾಜನವಾಗಿದೆ !
ಹೌದು, ವಿಜಯಪುರ ನಗರದ ಮನಗೂಳಿ ರಸ್ತೆ, ಜಾಮಿಯಾ ಮಸೀದಿ ರಸ್ತೆ, ನವಬಾಗ ರಸ್ತೆ, ತಾಜ್‌ಬಾವಡಿ ಮುಂದಿನ ರಸ್ತೆ ಸೇರಿ ಅನೇಕ ರಸ್ತೆಗಳು ನರಕ ಎಂದರೆ ಹೇಗಿರುತ್ತದೆ ಎಂಬುದಕ್ಕೆ ಮಾದರಿಯಾಗಿವೆ. ಪ್ರಮುಖ ಬಡಾವಣೆಗಳಲ್ಲಿ ಒಳರಸ್ತೆಗಳ ಸ್ಥಿತಿಯಂತೂ ದೇವರಿಗೇ ಪ್ರೀತಿ. ಜಿಲ್ಲಾಡಳಿತ ಕಚೇರಿಗೆ ಹೋಗುವ ರಸ್ತೆಯೇ ಸಂಪೂರ್ಣ ಹದಗೆಟ್ಟಿದ್ದು, ಕೇಂದ್ರ ಬಸ್ ನಿಲ್ದಾಣದ ಸುತ್ತಲಿನ ಪ್ರದೇಶವಂತೂ ಗಬ್ಬೆದ್ದು ನಾರುತ್ತಿದೆ.
ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಒಳಚರಂಡಿಯ ವಾಸನೆ ಹೊತ್ತುಕೊಂಡು ತೆರಳುತ್ತಿದ್ದಾರೆ.
ಮನಗೂಳಿ ರಸ್ತೆ ಹದಗೆಟ್ಟು ಎರಡ್ಮೂರು ವರ್ಷಗಳಾಗುತ್ತಾ ಬಂದರೂ ಈವರೆಗೂ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರಾದರೂ ಅಭಿವೃದ್ಧಿಯತ್ತ ಕಿಂಚಿತ್ತೂ ಗಮನ ಹರಿಸದಿರುವುದು ಖೇದಕರ ಸಂಗತಿ. ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುವ ಪ್ರಗತಿ ಪರಿಶೀಲನೆ ಸಭೆಗಳಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿ ಸಹಿತ ಅನೇಕ ಜನಪ್ರತಿನಿಧಿಗಳು ಇದೇ ರಸ್ತೆ ಮಾರ್ಗವಾಗಿ ಸಂಚರಿಸಿದರೂ ರಸ್ತೆ ಅಭಿವೃದ್ಧಿ ಪಡಿಸಬೇಕೆಂಬ ಯೋಚನೆ
ವಿಜಯಪುರ ನಗರದ ಅಣ್ಣುಗೌಡ ಪಾಟೀಲ ಎಂಬುವರು ತಮ್ಮ ಮನೆ ಮುಂದೆ ಸ್ವಂತ ಹಣದಲ್ಲಿ ಗರಸು ಹಾಕಿಸಿ ರಸ್ತೆ ರಿಪೇರಿ ಮಾಡಿದರು. ಈ ಮಾರ್ಗವಾಗಿ ನಿತ್ಯ ಸಂಚರಿಸುವ ವಾಹನ ಸವಾರರು ಮತ್ತು ಧೂಳಿನಿಂದಾಗಿ ವ್ಯಾಪಾರ-ವಹಿವಾಟು ಕುಂಠಿತಗೊಂಡು ಹಿಡಿಶಾಪ ಹಾಕುತ್ತಿರುವ ಅಂಗಡಿಕಾರರು ಮತ್ತು ಸ್ಥಳೀಯ ನಿವಾಸಿಗಳ ಬೈಗಳುಗಳಿಗೆ ಕೊಂಚ ಕಿವಿಕೊಟ್ಟಿದ್ದರೆ ಸಾಕಿತ್ತು ಜನಪ್ರತಿನಿಧಿಗಳು ಹಾಗೂ ಶಾಸಕರ ಕರ್ಣಗಳು ಪಾವನವಾಗುತ್ತಿದ್ದವು.
ಪೊಲೀಸರಿಂದ ತಾತ್ಕಾಲಿಕ ರಿಪೇರಿ
ಮನಗೂಳಿ ಅಗಸಿ ಬಳಿ ಉಂಟಾಗುವ ಸಂಚಾರ ದಟ್ಟಣೆಯಿಂದಾಗಿ ಜನ ಮಾತ್ರವಲ್ಲ ಸಂಚಾರಿ ಪೊಲೀಸರು ಸಹ ನರಕಯಾತನೆ ಅನುಭವಿಸುತ್ತಿದ್ದಾರೆ. ಆಳೆತ್ತರ ಗುಂಡಿಯಿಂದಾಗಿ ವಾಹನಗಳ ಬಿಡಿಭಾಗಗಳು ಕಳಚಿ ಬೀಳುತ್ತಿವೆ. ಈ ರಸ್ತೆಯಲ್ಲಿ ಅಡ್ಡಾಡುವವರಿಗೆ ಮೂಳೆ ನೋವು ಉಚಿತ ಎನ್ನುವಂತಾಗಿದೆ. ಜನರ ಗೋಳು ನೋಡಲಾಗದೇ ಸಂಚಾರಿ ಪೊಲೀಸರೇ ಗುಂಡಿ ಮುಚ್ಚುವ ಮೂಲಕ ಗಮನ ಸೆಳೆದಿದ್ದಾರೆ.
ಅನೇಕ ಬಡಾವಣೆಗಳಲ್ಲಿ ಸ್ಥಳೀಯರೇ ಸ್ವಂತ ಹಣದಲ್ಲಿ ಗರಸು ಹಾಕಿಸಿ ರಸ್ತೆ ರಿಪೇರಿ ಮಾಡಿಕೊಳ್ಳುತ್ತಿರುವುದು ಜನಪ್ರತಿನಿಧಿಗಳ ಪಾಲಿಗೆ ನಾಚಿಕೆಗೇಡಿನ ಸಂಗತಿ. ಬಡಾವಣೆಯೊಂದರಲ್ಲಿ ಅಣ್ಣುಗೌಡ ಪಾಟೀಲ ಎಂಬುವರು ತಮ್ಮ ಸ್ವತಂ ಹಣದಲ್ಲಿ ಗರಸು ಹಾಕಿಸಿ ರಿಪೇರಿ ಮಾಡಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರೇ ಸ್ವತಃ ಚಿತ್ರ ಸೆರೆ ಹಿಡಿದು ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ ಅನೇಕ ಘಟನೆಗಳು ನಗರದಲ್ಲಿ ಕಾಣಬಹುದಾಗಿದ್ದು, ಇದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲಿಗೆ ನಾಚಿಕೆಗೇಡಿನ ಸಂಗತಿಯಲ್ಲದೇ ಮತ್ತೇನು?
ಅಸ್ತಮಾ ಹೆಚ್ಚಿಸುತ್ತಿರುವ ಧೂಳು
ಜಾಮೀಯಾ ಮಸೀದಿ ಮತ್ತು ನವಬಾಗ ರಸ್ತೆಗಳು ಅಸ್ತಮಾ ಹೆಚ್ಚಿಸುವ ರಸ್ತೆಗಳೆಂದೇ ಪ್ರಸಿದ್ಧಿ ಪಡೆಯುತ್ತಿವೆ. ಆಮೆವೇಗದಲ್ಲಿ ಸಾಗುತ್ತಿರುವ ಕಾಮಗಾರಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಮಳೆ ಬಂದಾಗ ನೀರು ಸಂಗ್ರಹವಾಗಿ ರಸ್ತೆ ಯಾವುದು-ಗುಂಡಿ ಯಾವುದು ಎಂಬುದು ಗುರುತು ಸಿಗದಂತಾಗುತ್ತದೆ. ವಾಹನ ಸವಾರರು ಎದ್ದು-ಬಿದ್ದು ಗಮ್ಯ ತಲುಪುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದವರಿಗೆ ಸಾಕಷ್ಟು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡರೂ ದಪ್ಪ ಚರ್ಮದ ಆಡಳಿತ ವ್ಯವಸ್ಥೆ ಎಚ್ಚರಗೊಳ್ಳದಿರುವುದು ಜನರ ದೌರ್ಭಾಗ್ಯವೇ ಸರಿ.